ಬೆಳಗಾವಿ:ಸುವರ್ಣವಿಧಾನಸೌಧಕ್ಕೆ 8ರಿಂದ 10 ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸುವುದು ನನ್ನ ಇಚ್ಛೆ. ಇದು ನನ್ನ ವೈಯಕ್ತಿಕ ನಿಲುವು ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ ಉದ್ದೇಶ ಈಡೇರಬೇಕಾದರೆ ಇಲಾಖೆಗಳ ಸ್ಥಳಾಂತರವಾಗಬೇಕೆಂದು ವಿಧಾನಸಭಾಧ್ಯಕ್ಷ ಕೆ. ಬಿ. ಕೋಳಿವಾಡ ತಿಳಿಸಿದರು.
ಅಧಿವೇಶನದ ಕೊನೆಯ ದಿನ ಶನಿವಾರ ಸುವರ್ಣಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇಲಾಖೆ ಸ್ಥಳಾಂತರ ಕುರಿತು ನಾನಿನ್ನು ಮುಖ್ಯಮಂತ್ರಿಗಳ ಬಳಿ ಹೋಗಿಲ್ಲ. ಯಾವ ಇಲಾಖೆಗಳು ಸ್ಥಳಾಂತರಗೊಂಡರೆ ಅನುಕೂಲವಾಗಲಿದೆ ಎನ್ನುವುದನ್ನು ಗಮನಿಸಿ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗುವುದು. ರಾಜ್ಯದಲ್ಲಿ ಎರಡು ಕಡೆ ಶಕ್ತಿ ಸೌಧಗಳಿದ್ದು ಶೇ. 50 ರಷ್ಟು ಇಲಾಖೆಗಳನ್ನು ಈ ಭಾಗಕ್ಕೆ ಸ್ಥಳಾಂತರ ಮಾಡಬೇಕು ಎನ್ನುವುದು ನನ್ನ ಆಸೆಯೆಂದು ಒತ್ತಿ ಹೇಳಿದರು. ಬೆಳಗಾವಿಯಂತೆ ಮಹಾರಾಷ್ಟ್ರದ ನಾಗಪುರದಲ್ಲೂ ಇನ್ನೊಂದು ಶಕ್ತಿ ಸೌಧದಲ್ಲಿ ಅಧಿವೇಶನ ಮತ್ತು ಆಡಳಿತ ನಡೆಯುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಕಚೇರಿಗಳನ್ನು ತಂದು ಆಡಳಿತ ನಡೆಸುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ದಿಸೆಯಲ್ಲಿ ನಾಗಪುರಕ್ಕೆ ಭೇಟಿ ನೀಡಿ ಅಲ್ಲಿ ಹೇಗೆ ಸೌಧವನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿ ಅಭ್ಯಸಿಸಲಾಗುವುದು ಎಂದು ಸ್ಪಷ್ಠಪಡಿಸಿದರು. ಬೆಳಗಾವಿಯಲ್ಲಿ ವಸತಿ ಸಮಸ್ಯೆ ನೀಗಿಸಲು ಶಾಸಕರ ಭವನವನ್ನು ಖಂಡಿತವಾಗಿ ನಿರ್ಮಿಸಲಾಗುವುದು. ಎಷ್ಟೇ ಕಷ್ಟ ಬಂದರೂ ಭವನ ನಿರ್ಮಿಸಲಾಗುವುದು. ನೂರು ಕೊಠಡಿ ನಿರ್ಮಿಸಲಾಗುವುದುಸೌಧ ಕಟ್ಟುವಾಗಲೇ ಶಾಸಕರ ಭವನ ನಿರ್ಮಿಸುವ ಬಗ್ಗೆ ಯೋಜಿಸಲಾಗಿತ್ತು. ಎಲ್ಲರ ಒಪ್ಪಿಗೆ ಪಡೆದು ಶಾಸಕರ ಭವನ ಕಟ್ಟಿಸಲಾಗುತ್ತದೆ ಎಂದರು. ಶನಿವಾರ ನಿಯಮಾವಳಿ ಮೀರಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಈ ರೀತಿಯಾಗಿ ನಿಯಮಾವಳಿ ಮೀರಿ ಬಾವಿಗೆ ಇಳಿಯುವ ಅಭ್ಯಾಸ ತಪ್ಪು. ನನ್ನ ಅವಧಿಯಲ್ಲಿ ಇಂಥ ಕ್ರಮಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಕಾನೂನು ಕಾರ್ಯರೂಪಕ್ಕೆ ತರುವ ಯೋಚನೆ ಇದೆ. ಜತೆಗೆ ವಿಧೇಯಕ ಮಂಡನೆ ವೇಳೆ ಪದೇ ಪದೇ ಖಂಡ, ಪರ್ಯಾಲೋಚನೆ ಮುಂತಾದ ಶಬ್ದಗಳನ್ನು ಉಪಯೋಗಿಸಲಾಗುತ್ತಿದ್ದು ಅಂಥ ಶಬ್ದಗಳನ್ನು ಒಂದೇ ಸಲ ಹೇಳುವ ಕ್ರಮ ಅನುಸರಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ಹತ್ತು ದಿನ ನಡೆದ ಅಧಿವೇಶನದಲ್ಲಿ ಒಟ್ಟು 49 ಗಂಟೆ 15 ನಿಮಿಷ ಕಾರ್ಯಕಲಾಪ ನಡೆದಿದೆ. ಬರಗಾಲ ಕುರಿತು 32 ಸದಸ್ಯರು 11ಗಂಟೆ 34 ನಿಮಿಷ ಚರ್ಚೆ ಮಾಡಿದ್ದಾರೆ. ಮಹಾದಾಯಿ ಕುರಿತು 11ಗಂಟೆ 37 ನಿಮಿಷ ಚರ್ಚಿಸಲಾಗಿದೆ. ಶಾಸಕರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರವನ್ನು ಅವರ ಮನೆ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆ ಬೆಳಗಾವಿಯಲ್ಲಿ ನಡೆದ ಅಧಿವೇಶನಗಳ ಪೈಕಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಸಿದ ಸಂತೃಪ್ತಿ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿಧಾನಸಭಾ ಕಾರ್ಯದರ್ಶಿ ಎಸ್. ಮೂರ್ತಿ ಉಪಸ್ಥಿತರಿದ್ದರು.
ಕಾಗದರಹಿತ ಉತ್ತರ
ನನ್ನ ಸಭಾಧ್ಯಕ್ಷ ಅವಧಿ ಮುಗಿಯುವದರೊಳಗೆ ಕಾಗದರಹಿತ ಉತ್ತರ ನೀಡುವ ವ್ಯವಸ್ಥೆ ತರಲಾಗುವುದು. ಕೇಂದ್ರ ಸರಕಾರಕ್ಕೆ ಈ ಕುರಿತು ಪ್ರಸ್ತಾಪ ಕಳುಹಿಸಲಾಗಿದೆ ಎಂದು ಸಭಾಧ್ಯಕ್ಷ ಕೆ. ಬಿ. ಕೋಳಿವಾಡ ತಿಳಿಸಿದರು.
ನೈಸ್ ವರದಿಗೆ ನಾನು ಆಕ್ಷೇಪಿಸಿಲ್ಲ ಎಂದು ಸಭಾಧ್ಯಕ್ಷ ಕೆ. ಬಿ. ಕೋಳಿವಾಡ ಸ್ಪಷ್ಟಪಡಿಸಿದರು. ಯಾವುದೇ ಕಾಗದ ಪತ್ರಗಳಿಗೆ ಕಣ್ಣುಮುಚ್ಚಿ ಸಹಿ ಮಾಡಿಲ್ಲ. ನೈಸ್ ವರದಿ ಮಂಡನೆ ಕುರಿತು ಕಾನೂನು ಸಚಿವರನ್ನು ಕರೆದು ಚರ್ಚಿಸಿದ್ದೆ. ಅವೆಲ್ಲ ಊಹಾಪೋಹಗಳಷ್ಟೇ ಎಂದು ತೆರೆ ಎಳೆದರು.
ವರದಿ ಮಂಡನೆಯಾಗದಂತೆ ಯಾವುದೆ ಸಚಿವರು ಒತ್ತಡವೂ ಇರಲಿಲ್ಲ. ನೈಸ್ ಹಗರಣದ ಬಗ್ಗೆ ರಾಜ್ಯದ ಜನತೆಗೆ ಅತ್ಯಂತ ಕುತೂಹಲ ಇತ್ತು. ನಿಯಮಾವಳಿಯಲ್ಲಿ ಚರ್ಚೆಗೆ ಅವಕಾಶÀ ಇಲ್ಲದಿದ್ದರೂ ನನ್ನ ಅಧಿಕಾರ ಬಳಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದರು.
ನಿಯೋಗ
ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯದ ಎಲ್ಲ ಪಕ್ಷದ ನಾಯಕರ ನಿಯೋಗದೊಂದಿಗೆ ಗೋವಾಕ್ಕೆ ತೆರಳಿ ಮಾತುಕತೆ ನಡೆಸುವ ಪ್ರಯತ್ನ ಮಾಡಲಾಗುವುದು. ಈ ಮೂಲಕ ಗೋವಾಕ್ಕೆ ಕರ್ನಾಟಕಕ್ಕೆ ಬೇಕಿರುವ ಕುಡಿಯುವ ನೀರಿನ ಅಗತ್ಯತೆಯನ್ನು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …