ಬೆಳಗಾವಿ 27 : ಪ್ರತಿ ಮೂರು ವರ್ಷಕ್ಕೊಮ್ಮೆ
ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ “ಪ್ರಭಾತಕಾರ ವಾ.ರಾ,ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ” ಬೆಳಗಾವಿಯ ಹಿರಿಯ ಪತ್ರಕರ್ತರಾದ ಹಾಗೂ ಹಳ್ಳಿಯ ಸಂದೇಶ ಕನ್ನಡ ದಿನಪತ್ರಿಕೆ ಸಂಪಾದಕರಾದ ಕುಂತಿನಾಥ ಕಲಮನಿ ಇವರಿಗೆ ಲಭಿಸಿದೆ.
ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತ್ರೈವಾರ್ಷಿಕ ಅಧಿವೇಶನ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರನ್ನು ಗುರುತಿಸಿ ಅವರಿಗೆ ಪುರಸ್ಕಾರಗಳನ್ನು ನೀಡಲಾಗುತ್ತದೆ.
ಈ ಬಾರಿಯ ಒಟ್ಟು 24 ಪುರಸ್ಕಾರಗಳ ಪೈಕಿ ಕರ್ನಾಟಕ ನಾಲ್ವರಿಗೆ ಪುರಸ್ಕಾರಗಳನ್ನು ನೀಡಲಾಗಿದೆ. ವೃಷಭಶ್ರೀ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಂತಿನಾಥ ಕಲಮನಿ ಇವರಿಗೆ “ಪ್ರಭಾತಕಾರ ವಾ.ರಾ,ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ” ಲಭಿಸಿದೆ. ಕುಂತಿನಾಥ ಕಲಮನಿ ಇವರು ಕಳೆದ 22 ವರ್ಷಗಳಿಂದ ಬೆಳಗಾವಿ ಪತ್ರಿಕಾರಂಗದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಅದಲ್ಲದೇ 25 ವರ್ಷಗಳಿಂದ ಜೈನ ಸಮಾಜದ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಅವರ ಈ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
ಇದೇ ಮೇ 15 ರಂದು ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದಲ್ಲಿ ನಡೆಯಲಿರುವ ದಕ್ಷಿಣ ಭಾರತ ಜೈನ ಸಭೆಯ ತ್ರೈವಾರ್ಷಿಕ ಅಧಿವೇಶನದ ಶತಮಾನೋತ್ಸವ ಸಮಾರಂಭದಲ್ಲಿ ಈ ಪುರಸ್ಕಾರವನ್ನು ವಿತರಿಸಲಾಗುವುದು.