Breaking News

ಬೆಳಗಾವಿಯ ಹಳ್ಳಿಯಲ್ಲಿ ಕಂಡ ಕನಸು ಉಡುಪಿಯಲ್ಲಿ ನನಸಾಯಿತು…!!

ಬೆಳಗಾವಿ: ಇಂದಿನ ಕಾಲದಲ್ಲಿ ಮಹಿಳೆಯರು ರಾಜಕೀಯ ರಂಗದಲ್ಲಿ ಮುಂದೆ ಬರುವುದು ಅಪರೂಪ. ಆದರೆ, ಇದಕ್ಕೆ ಅಪವಾದವೆಂಬಂತೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪುಟ್ಟ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕಾರಣ ಆರಂಭಿಸಿ ರಾಜ್ಯಮಟ್ಟದ ನಾಯಕಿಯಾಗಿ ಹೊರಹೊಮ್ಮಿರುವುದು ಮಹತ್ಸಾಧನೆಯೇ ಸರಿ.

ಬಿಎ ಪದವಿ ಪಡೆದರೂ ಗೃಹಿಣಿಯಾಗಿ ಜೀವನ ಆರಂಭಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಅಕ್ಷರಸ್ಥೆಯಾಗಿದ್ದ ಹೆಬ್ಬಾಳ್ಕರ್ ಗೌಡ್ರ ಮನೆತನದ ಮಹಿಳೆಯಾಗಿ ಸಾಮಾಜಿಕ ವ್ಯವಸ್ಥೆ ಬಗ್ಗೆ ತಮ್ಮದೇ ಆದ ಒಲುವು ಹೊಂದಿದ್ದರು. ಇಂತಹ ಸಮಯದಲ್ಲಿ ಕೆನರಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾರ್ಗರೇಟ್ ಆಳ್ವಾ ಅವರ ಸಂಪರ್ಕ ಬೆಳೆದಿದ್ದೇ ಅವರು ರಾಜಕಾರಣಕ್ಕೆ ಬರಲು ವೇದಿಕೆಯಾಯಿತು. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಹಂತ ಹಂತವಾಗಿ ಒಂದೊಂದೆ ಹೆಜ್ಜೆ ಇರಿಸುತ್ತ ಕಷ್ಟಪಟ್ಟು ರಾಜಕಾರಣದಲ್ಲಿ ಮೇಲೆ ಬಂದವರು.

ಪಕ್ಷ ನಿಷ್ಠೆಗೆ ಒಲಿಯಿತು ಉನ್ನತ ಹುದ್ದೆ:

ರಾಜಕೀಯ ರಂಗಕ್ಕೆ ಕಾಲಿರಿಸಿದ ಪ್ರತಿಯೊಬ್ಬರೂ ಉನ್ನತ ಸ್ಥಾನಮಾನ ಪಡೆಯಬೇಕು. ಸಚಿವರಾಗಿ ಧ್ವಜಾರೋಹಣ ನೆರವೇರಿಸಬೇಕೆಂಬ ಅಧಮ್ಯ ಹಂಬಲ ಹೊಂದಿರುತ್ತಾರೆ. ಆದರೆ, ಇದರಲ್ಲಿ 100 ರಲ್ಲಿ ಶೇ.1ರಷ್ಟು ಜನರ ಕನಸು ಮಾತ್ರ ನನಸಾಗುತ್ತದೆ. ಇಂತಹದೊಂದು ಕನಸು ಕಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಸಾಗಿ ಬಂದ ದಾರಿಯೇ ರೋಚಕ. ಕಾರ್ಯಕರ್ತೆಯಾಗಿ ಹಲವು ವರ್ಷ ಪಕ್ಷಸಂಘಟನೆ ಮಾಡಿದ್ದರ ಫಲವಾಗಿ ಪಕ್ಷ ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿತು. ಜೂನ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯದ ಏಕೈಕ ಮಹಿಳಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ವಿಕಲಚೇತನರ ಸಬಲೀಕರಣ ಸೇರಿ ಒಟ್ಟು ಮೂರು ಇಲಾಖೆಗಳ ಸಚಿವೆಯಾಗಿ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

ಕೊನೆಗೂ ಕನಸು ನನಸಾಯಿತು:

ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕಾರಣಕ್ಕೆ ಧುಮುಕಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ನಾನೂ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ರಾಷ್ಟçಧ್ವಜಾರೋಹಣ ನೆರವೇರಿಸಬೇಕೆಂಬ ಕನಸು ಕಂಡಿದ್ದರು. ಇಂದು ಆ ಕನಸು ನನಸಾಗಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬೆಳಗಾವಿಯ ಮಹಿಳೆಯೊಬ್ಬಳು ಹಳ್ಳಿಯಲ್ಲಿ ಕಂಡ ಕನಸು ಇವತ್ತು ಉಡುಪಿಯಲ್ಲಿ ನನಸಾಗಿದ್ದು ಸ್ಪೂರ್ತಿ ಪ್ರೇರಣಾದಾಯಕವಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *