Breaking News
Home / Breaking News / ಸರಳತೆ, ತಾಳ್ಮೆಯ ಗುಣಗಾನ; ಚಪ್ಪಾಳೆಗಳ ಅಭಿಮಾನ!

ಸರಳತೆ, ತಾಳ್ಮೆಯ ಗುಣಗಾನ; ಚಪ್ಪಾಳೆಗಳ ಅಭಿಮಾನ!

ಎಂ.ಜಿ.ಹಿರೇಮಠರ ಸಮಯಪ್ರಜ್ಞೆ, ಸರಳತೆ, ತಾಳ್ಮೆಯ ಗುಣಗಾನ; ಚಪ್ಪಾಳೆಗಳ ಅಭಿಮಾನ!

ಬೆಳಗಾವಿ,- ತವರು ಜಿಲ್ಲೆಯಲ್ಲಿ ಯಶಸ್ವಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಅವರ ಮದುವೆ ವಾರ್ಷಿಕೋತ್ಸವದ ದಿನವೇ ಜಿಲ್ಲಾಡಳಿತದ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಳಿಬಂದ ಎಂ.ಜಿ.ಹಿರೇಮಠರ ಸಮಯಪ್ರಜ್ಞೆ, ಸರಳತೆ, ತಾಳ್ಮೆಯ ಗುಣಗಾನಕ್ಕೆ; ಚಪ್ಪಾಳೆಗಳ ಅಭಿಮಾನ ದೊರೆಯಿತು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಮೇ 11) ನಡೆದ ನಿಕಟಪೂರ್ವ ಜಿಲ್ಲಾಧಿಕಾರಿ ಎಂಜಿ.ಹಿರೇಮಠ ಅವರಿಗೆ ಬೀಳ್ಕೊಡುಗೆ; ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲರ ಸ್ವಾಗತ ಸಮಾರಂಭ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಹಿರೇಮಠ ಅವರು, ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು ವೃತ್ತಿಜೀವನದ ಬಹುದೊಡ್ಡ ಸೌಭಾಗ್ಯ ಎಂದರು.
ತಾನು ತಿರುಗಾಡಿದ ಆಡಿ‌ಬೆಳೆದ ಊರಿಗೆ ಜಿಲ್ಲಾಧಿಕಾರಿಯಾಗಿ ಬರುವುದು ಅಪರೂಪ. ಅಂತಹ ಭಾಗ್ಯ‌ ನನಗೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಜನರು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಸಹಕಾರ, ಜನಪ್ರತಿನಿಧಿಗಳ ಪ್ರೋತ್ಸಾಹವನ್ನು ಅವರು ಸ್ಮರಿಸಿದರು.

ತಮ್ಮ ಆಡಳಿತಾವಧಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೀಡಿದ ಪ್ರೋತ್ಸಾಹ ಸ್ನರಿಸಿಕೊಂಡರು.
ಎಂತಹದೇ ಕ್ಲಿಷ್ಟಕರ ಸಂದರ್ಭಗಳಲ್ಲಿ ಕೂಡ ಸಹೋದ್ಯೋಗಿ ಅಧಿಕಾರಿಗಳಾದ ಸಿಇಓ, ಎಸ್.ಪಿ., ಅಪರ ಜಿಲ್ಲಾಧಿಕಾರ ಮತ್ತಿತರ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಎಂ.ಜಿ.ಹಿರೇಮಠ ಹೇಳಿದರು.

ಗುರಿಗಳು ನಮಗೆ ಅವಕಾಶಗಳು:

ವೃತ್ತಿಜೀವನದಲ್ಲಿ ನಮಗೆ ಬರುವ ಗುರಿಗಳು ನಮಗೆ ದೊರಕುವ ಅವಕಾಶಗಳು.‌ ಒಬ್ಬ ಜಿಲ್ಲಾಧಿಕಾರಿಯಾಗಿ ನನಗೆ ದೊರೆತ ಗುರಿಗಳನ್ನು ಸಾಧಿಸುವ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಿದ ತೃಪ್ತಿ ನನಗಿದೆ ಎಂದು ಎಂ.ಜಿ.ಹಿರೇಮಠ ಹೇಳಿದರು.

ಪ್ರತಿಯೊಂದು ಕೆಲಸವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡಿದರೆ ಉನ್ನತ ಹುದ್ದೆ ಕೈಬೀಸಿ ಕರೆಯುತ್ತದೆ. ಇದಕ್ಕೆ ನಾನೇ ಉದಾಹರಣೆ ಎಂದರು.

ಇದೇ ವೇಳೆ ಮಾತನಾಡಿದ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೆಲಸ ಮಾಡುವುದು ಸಂತಸದ ಸಂಗತಿಯಾಗಿದೆ. ಹಿಂದಿನ ಅನುಭವದ ಆಧಾರದ ಮೇಲೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ವರ್ಗಾವಣೆಗೊಂಡಿರುವ ಎಂ.ಜಿ.ಹಿರೇಮಠರು ಮಾಡಿರುವ ಉತ್ತಮ ಕೆಲಸಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.

ಬಿಸ್ವಾಸ್ ವ್ಯಕ್ತಪಡಿಸಿದರು ವಿಶ್ವಾಸ:

ಗದಗ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ, ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಶ್ರೇಯ ಎಂ.ಜಿ.ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಶ್ಲಾಘಿಸಿದರು.
ಬಿಮ್ಸ್ ಸುಧಾರಣೆ, ಲಸಿಕಾಕರಣ ಮತ್ತಿತರ ಕೆಲಸಗಳನ್ನು ಅವರು ಅತ್ಯುತ್ತಮವಾಗಿ ಮಾಡಿದ್ದಾರೆ ಎಂದು ಹೇಳಿದರು.

ಯಾವುದೇ ಕೆಲಸವನ್ನು ಸಿಟ್ಟುರಹಿತವಾಗಿ ನಿರ್ವಹಿಸುವ ಕಲೆಯನ್ನು ಹಿರೇಮಠ ಅವರಿಂದ ನಾವು ಕಲಿಯಬೇಕಿದೆ ಎಂದು ಆಮ್ಲಾನ್ ಬಿಸ್ವಾಸ್ ಹೇಳಿದರು.
ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರ ಸ್ಥಾನವನ್ನು ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಕಟಪೂರ್ವ ಜಿಲ್ಲಾಧಿಕಾರಿ ಹಿರೇಮಠರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಜತೆಗಿನ ಅವರ ಮಧುರ ಒಡನಾಟವು ಎಲ್ಲರಿಗೂ ಮಾದರಿಯಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಮುಂಬರುವ ದಿನಗಳಲ್ಲಿ ಕೂಡ ಅವರು ಇದೇ ರೀತಿ ಸೇವೆಯನ್ನು ನೀಡುವಂತಾಲಿ ಎಂದು ಶುಭ ಹಾರೈಸಿದರು.
ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕ್ರಿಯಾಶೀಲ ಅಧಿಕಾರಿಯಾಗಿದ್ದು, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.

ಹಿರೇಮಠರ ಸರಳ-ಸಜ್ಜನಿಕೆ ಅನುಕರಣೀಯ:

ಹಿರೇಮಠರ ಸರಳ-ಸಜ್ಜನಿಕೆಯ ವ್ಯಕ್ತಿತ್ವವು ಅನುಕರಣೀಯವಾಗಿದೆ. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಜಿಲ್ಲೆಯ ಸಮರ್ಥ ಕ್ಯಾಪ್ಟನ್ ಆಗಿ ಕೆಲಸ ಮಾಡಿದರು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹೇಳಿದರು.

ಸಹೋದ್ಯೋಗಿಗಳು ಹಾಗೂ ಕಿರಿಯ ಅಧಿಕಾರಿಗಳಿಗೆ ಬೆನ್ತಟ್ಟಿ ಅವರು ನೀಡುತ್ತಿದ್ದ ಪ್ರೋತ್ಸಾಹ ಮರೆಯಲಾಗುವುದಿಲ್ಲ.

ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಎಂ.ಜಿ.ಹಿರೇಮಠರ ತಾಳ್ಮೆ ಹಾಗೂ ಸಮಯಪ್ರಜ್ಞೆ ನಮಗೆಲ್ಲ ಮಾದರಿಯಾಗಿದೆ; ಕೆಳ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅವರು ಎಂದಿಗೂ ಮಾಡದೇ ತಾವೇ ಹೊಣೆಯನ್ನು ಹೊತ್ತುಕೊಳ್ಳುವ ಮೂಲಕ ದೊಡ್ಡತನವನ್ನು ಪ್ರದರ್ಶಿಸಿದ್ದಾರೆ ಎಂದು ದರ್ಶನ್ ನೆನಪಿಸಿಕೊಂಡರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು, ಕೋವಿಡ್ ಸಾಂಕ್ರಾಮಿಕದ ಅಟ್ಟಹಾಸ ಇರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಹಾಜರಾದ ಎಂ.ಜಿ.ಹಿರೇಮಠ ಅವರು ಆಕ್ಸಿಜನ್, ಹಾಸಿಗೆ ವ್ಯವಸ್ಥೆ ಹಾಗೂ ಕೋವಿಡ್ ಆರೈಕೆ‌ ಕೇಂದ್ರಗಳನ್ನು ಆರಂಭಿಸುವ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ನೆನಪಿಸಿಕೊಂಡರು.

ಕೋವಿಡ್ ಲಸಿಕಾಕರಣಕ್ಜೆ 37 ಲಕ್ಷ ಗುರಿ ನಿಗದಿಪಡಿಸಲಾಗುತ್ತು. ಇಂತಹ ಸಂದರ್ಭದಲ್ಲಿ ಗುರಿ ಮೀರಿ‌ ಸಾಧನೆಗೈಯುವ ಮೂಲಕ ಜಿಲ್ಲೆಯನ್ನು ದೇಶದಲ್ಲಿಯೇ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ದಿದ್ದರು.

ಕಚೇರಿಯ ಸಮಯಪ್ರಜ್ಣೆ ಹಾಗೂ ಆಯಾ ದಿನದ ಕಡತಗಳನ್ನು ಅಂದೇ ವಿಲೇವಾರಿ ಮಾಡುವ ಮೂಲಕ ಇತರ ಅಧೀನ ಅಧಿಕಾರಿಗಳಿಗೆ ಮಾದರಿಯಾಗಿದ್ದರು.
ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಸರಕಾರಿ ಸಂಸ್ಥೆಗಳಲ್ಲೇ ವಾಸ್ತವ್ಯ ಮಾಡುವ ಮೂಲಕ ಗ್ರಾಮದ ಜನರ ಅಹವಾಲುಗಳನ್ನು ಆಲಿಸಿದರು. ಅವರ ಕಾರ್ಯವೈಖರಿಯು ಎಲ್ಲರಿಗೂ ಮಾದರಿಯಾಗಿತ್ತು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.

ಅದೇ ರೀತಿ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಆಶಯದಂತೆ ಬೆಳಗಾವಿ ಜಿಲ್ಲೆಯನ್ನು ನಂಬರ್ ಒನ್ ಸ್ಥಾನಕ್ಜೆ ಕೊಂಡೊಯ್ಯಲು ಎಲ್ಲ ಅಧಿಕಾರಿ ವರ್ಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ದುಡಗುಂಟಿ ಭರವಸೆ ನೀಡಿದರು.

ಇದೇ ವೇಳೆ ಅನಿಸಿಕೆಯನ್ನು ವ್ಯಕ್ತಪಡಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ನಿಕಟಪೂರ್ವ ಜಿಲ್ಲಾಧಿಕಾರಿ ಹಿರೇಮಠರು ತವರು ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಉತ್ಕಟ ಬಯಕೆಯನ್ನು ಹೊಂದಿದ್ದರು. ಎಲ್ಲ ಅಧಿಕಾರಿಗಳ ಜತೆ ಸಹೋದರನಂತೆ‌ ನಡೆದುಕೊಂಡರು ಎಂದು ಸ್ಮರಿಸಿದರು.
ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಎಚ್ಓ ಡಾ.ಶಶಿಕಾಂತ ಮುನ್ಯಾಳ, ಹುಕ್ಕೇರಿ ತಹಶೀಲ್ದಾರ ಶಿವಾನಂದ ಹೂಗಾರ, ಆರ್.ಟಿ.ಓ. ಶಿವಾನಂದ ಮಗ್ದುಂ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಹಿರೇಮಠ ಅವರ ಸರಳತೆ, ನಾಯಕತ್ವ ಗುಣ ಹಾಗೂ ಕಿರಿಯರಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಕೊಂಡಾಡಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರಗೌಡ, ಬುಡಾ ಆಯುಕ್ತ‌ ಪ್ರೀತಂ ನಸಲಾಪುರೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಯವರು ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿ ಬೀಳ್ಕೊಟ್ಟರು. ಸುನೀತಾ ದೇಸಾಯಿ ನಿರೂಪಿಸಿದರು.
*****

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *