Breaking News

ಈ ಬಾರಿಯ ರಾಜ್ಯೋತ್ಸವದಲ್ಲಿ ಹೊಸದೇನಿದೆ ಗೊತ್ತಾ..??

ಬೆಳಗಾವಿ,-: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ವ್ಯವಸ್ಥಿತವಾಗಿ, ಅದ್ಧೂರಿಯಾಗಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಅ.10) ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವ್ಯವಸ್ಥಿತ ಪರೇಡ್ ಆಯೋಜನೆ:

ರಾಜ್ಯೋತ್ಸವ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ, ಎನ್.ಸಿ., ಸ್ಕೌಟ್ಸ್ ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪರೇಡ್ ನಡೆಸಲಾಗುವುದು.ಈ ಮೂಲಕ ರಾಜ್ಯೋತ್ಸವದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ರಾಜ್ಯೋತ್ಸವ ಕಳೆ ಹೆಚ್ಚಿಸಬೇಕು ಎಂದು ಶಿಕ್ಷಣ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ವೈಭವಪೂರ್ಣ ರೂಪಕಗಳ ಮೆರವಣಿಗೆ:

ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ತಮ್ಮದೇ ಶೈಲಿಯಲ್ಲಿ ವೈಭವಪೂರ್ಣ ರೂಪಕಗಳನ್ನು ಪ್ರದರ್ಶಿಸಬೇಕು. ಜೊತೆಗೆ ಕನ್ನಡ ಪರ ವಿವಿಧ ಸಂಘಟನೆಗಳು ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಿವೆ. ಭುವನೇಶ್ವರಿ ದೇವಿ ರೂಪಕಕ್ಕೆ ಪೂಜಿಸುವ ಮೂಲಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ನಗರದ ಪ್ರಮುಖ ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಮುಖ್ಯ ವೃತ್ತ, ರಸ್ತೆಗಳಲ್ಲಿ ರೂಪಕಗಳ ಮೆರವಣಿಗೆ ಸಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಅದ್ಭುತ ರೂಪಕಗಳಿಗೆ ಬಹುಮಾನ:

ಅತ್ಯಂತ ಅಲಂಕೃತ, ನಾಡ ಸಂಸ್ಕೃತಿ ಪ್ರತಿಬಿಂಬಿಸುವ ಅತ್ಯದ್ಭುತ ಮೂರು ರೂಪಕಗಳನ್ನು ಗುರುತಿಸಿ ಅವುಗಳನ್ನು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳೆಂದು ಗುರುತಿಸಲಾಗುವುದು. ಅವುಗಳಿಗೆ ಕ್ರಮವಾಗಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.

ನಾಡ ಸಂಸ್ಕೃತಿಗೆ ಒತ್ತು ನೀಡಿ:

ರೂಪಕಗಳ ಮೆರವಣಿಗೆ ಆಗಿರಬಹುದು ಅಥವಾ ಇನ್ನಿತರ ವೇದಿಕೆಯಲ್ಲಿ ಡಾಲ್ಬಿ, ಡಿಜೆಗಳನ್ನು ಅತಿಯಾಗಿ ಬಳಸಬೇಡಿ. ಇದರಿಂದ ಜನರಿಗೆ ವಿಪರೀತ ಕಿರಿಕಿರಿ ಆಗಬಹುದು. ಹೀಗಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳಿಗೆ ಒತ್ತು ನೀಡುವುದಕ್ಕಿಂತ ನಾಡು, ನುಡಿ, ಕಲೆ, ಸಂಸ್ಕೃತಿ ಬಿಂಬಿಸುವ ಚುಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಕಿವಿ ಮಾತು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ:

ಪ್ರತಿ ವರ್ಷದಂತೆ ಈ ವರ್ಷವೂ 5 ಜನ ಹಿರಿಯ ಪತ್ರಕರ್ತರಿಗೆ, 5 ಜನ ಕನ್ನಡ ಹೋರಾಟಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತೆ ಈ ವರ್ಷವೂ ನೀಡಲಾಗುವುದು. ಇದಕ್ಕಾಗಿ 5 ಜನರ ಸಮಿತಿ ರಚಿಸಿ ಸಮಿತಿಯ ಸಲಹೆ ಸೂಚನೆಯಂತೆ ಪತ್ರಕರ್ತರು ಹಾಗೂ ಹೋರಾಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ರೈಲ್ವೆ ಸೇತುವೆಗೆ ಅಪ್ಪು ನಾಮಕರಣಕ್ಜೆ ಒತ್ತಾಯ:

ನಗರದ ತಿಲಕವಾಡಿಯಲ್ಲಿರುವ ರೈಲ್ವೆ 3ನೇ ಸೇತುವೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ನಾಮಕರಣ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದವು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ರಾಜ್ಯೋತ್ಸವ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿಗಳಿಗೆ ಕನ್ನಡ ಸಂಘಟನೆಗಳು 2ನೇ ತಾರಿಖಿಗೂ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸೂಕ್ತ ಬಂದೋಬಸ್ತ್ ವ್ಯವಸ್ಥೆ:

ಈ ಬಾರಿ ವೈಭವಪೂರ್ಣ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸುವ್ಯವಸ್ಥಿತ ಆಚರಣೆಗಾಗಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು. ರೂಪಕಗಳ ಮೆರವಣಿಗೆ ಸೇರಿದಂತೆ ರಾಜ್ಯೋತ್ಸವ ಆಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಇಲಾಖೆ ಬದ್ಧತೆಯೊಂದಿಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಿದ ಎಂದು ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಅವರು ತಿಳಿಸಿದರು.

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಕ್ರಮ:

ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುವ ಸಂಘಟನೆಗಳು ಮುಂಚಿತವಾಗಿ ಸ್ಥಳ, ಸಂಘಟನೆ, ಮಾರ್ಗದ ಕುರಿತಾಗಿ ಮಾಹಿತಿ ನೀಡಿರಿ. ಇದರಿಂದ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸುವುದಕ್ಕೆ ಇನ್ನೀತರ ಅನಗತ್ಯ ಚಟುವಟಿಕೆಗಳನ್ನು ತಡೆಯುವುದಕ್ಕೆ ಅನುಕೂಲವಾಗಲಿದೆ ಎಂದು ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರು ತಿಳಿಸಿದರು.

ಡ್ರೆಸ್ ಕೋಡ್ ಬಳಸಿದರೆ ಉತ್ತಮ:

ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಾಡು, ಕುಣಿತ ಸಹಜ. ಈ ಹಿನ್ನೆಲೆಯಲ್ಲಿ ಒಂದಿಷ್ಟು ನೂಕು ನುಗ್ಗಲು, ಗುಂಪು ಚೇಷ್ಟೇಯೂ ಸಹಜ. ಇದೇ ನೆಪದಲ್ಲಿ ಯಾವುದೇ ಸಂಘಟನೆಯವರು ಸುಖಾಸುಮ್ಮನೇ ಗದ್ದಲ, ಗಲಾಟೆ ಮಾಡಬಾರದು ಜೊತೆಗೆ ನಿಮ್ಮ ಸಂಘಟನೆ ಹೆಸರಲ್ಲಿ ಬೇರೆ ಯಾರೂ ಅಹಿತರಕರ ಚಟುವಟಿಕೆಗಳನ್ನ ಕೈಗೊಳ್ಳಬಾರದು. ಹೀಗಾಗಿ ಇದನ್ನು ತಪ್ಪಿಸಲು ರೂಪಕಗಳ ಮೆರವಣಿಗೆಯಲ್ಲಿ ಭಾಗವಹಿಸುವ ಸಂಘಟನೆಯವರು ನಿಮ್ಮದೇ ಶೈಲಿಯ ಡ್ರೆಸ್ ಕೋಡ್‌ಗಳನ್ನು ಬಳಸಿದರೆ ಉತ್ತಮ ಎಂದು ಪೊಲೀಸ್ ಆಯುಕ್ತರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಘಟನೆಗಳ ಪದಾಧಿಕಾರಿಗಳು, ಅಧ್ಯಕ್ಷರು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
***********

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *