Breaking News
Home / Breaking News / ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ.

ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ.

ಬೆಳಗಾವಿ, ಅ.9( ಕರ್ನಾಟಕ ವಾರ್ತೆ ) : ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಅ.9) ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವಿಯತೆಯೇ ಧರ್ಮ ಎಂಬದನ್ನು ಪ್ರತಿಪಾದಿಸಿದ್ದರು. ವಾಲ್ಮೀಕಿ ರಾಮಾಯಣ ಪ್ರತಿನಿತ್ಯ ನಡೆಯುವ ಘಟನೆಗಳಾಗಿದ್ದು, ಶಾಂತಿ, ಸಹಬಾಳ್ವೆ, ಅಹಿಂಸೆಯನ್ನು ತೋರಿಸಿಕೊಟ್ಟಿದೆ. ಅದೇ ರೀತಿಯಲ್ಲಿ ಬುಧ, ಬಸವ, ಅಂಬೇಡ್ಕರ್ ಅವರು ಕೂಡು ಮನವಿತೆಯ ಮೌಲ್ಯಗಳನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮಾನವ ಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಾಯಣದಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು.

ಮೀಸಲಾತಿ ಸದುಪಯೋಗ ಪಡೆದುಕೊಳ್ಳಿ:

ಈಗಾಗಲೇ ಸರ್ಕಾರ ಘೋಷಣೆ ಮಾಡಿದ ಪ್ರಕಾರ ವಾಲ್ಮೀಕಿ ಸಮುದಾಯಕ್ಕೆ 3% ಮೀಸಲಾತಿಯನ್ನು ಶೇ.4ರಷ್ಟು ಹೆಚ್ಚಿಸಿ ಶೇ.7 ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾಜವನ್ನು ಮುಂದೆ ತರುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಜಯ ಸಿಕ್ಕಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಳೆದ 2 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಲು ಆಗಿಲ್ಲ. ಆದರೆ ಈ ವರ್ಷ ವಿಶೇಷವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಸರ್ಕಾರ ನಿಯೋಜಿಸಿದ ಸಮಿತಿಯ ವರದಿಯ ಪ್ರಕಾರ ಕರ್ನಾಟಕ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿ ಈಗಾಗಲೇ ಘೋಷಣೆ ಮಾಡಿರುವುದರಿಂದ ವಿಶೇಷ ಜಯಂತಿ ಆಚರಣೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳ ಮೂಲಕ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಅನುಕೂಲ ಮಾಡಿ ಕೊಟ್ಟಿದೆ. 3% ಮೀಸಲಾತಿಯಿಂದ 7% ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಸರ್ಕಾರ ಘೋಷಣೆ ಮಾಡಿದೆ. ಎಲ್ಲರೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ವಾಗಿ ಬೆಳವಣಿಗೆ ಆಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ, ಜೀವನದಲ್ಲಿ ಬದಲಾವಣೆಯ ಸನ್ನಿವೇಶಗಳು ಹಾಗೂ ರಾಮಾಯಣದಲ್ಲಿ ಅವರು ಬರೆದ ಮಾನವೀಯ ಮೌಲ್ಯಗಳ ಕುರಿತು ಪೋ. ದೊಡ್ಡನಗೌಡ ಎನ್. ಪಾಟೀಲ ಅವರು ಉಪನ್ಯಾಸ ನೀಡಿದರು.

ಫಲಾನುಭವಿಗಳಿಗೆ ಚೆಕ್ ವಿತರಣೆ:

ವೇದಿಕೆ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅದೇ ರೀತಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳು ಚೆಕ್ ಗಳನ್ನು ವಿತರಿಸಲಾಯಿತು.

ಪೊಲೀಸ್ ಆಯುಕ್ತರಾದ ಡಾ.ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್.ವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷ್ಮಣ ಬಬಲಿ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ತಳವಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಅವರು ಸ್ವಾಗತ ಕೋರಿದರು. ಸೋಮು ಮಾಳಗಿ ನಿರೂಪಿಸಿ, ವಂದಿಸಿದರು.

ವಾಲ್ಮೀಕಿ ಭಾವಚಿತ್ರದ ಮೆರವಣಿಗೆ:

ಇದಕ್ಕೂ ಮುಂಚೆ ನಗರದ ಕೋಟೆ ಕೆರೆ ಆವರಣದಿಂದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್.ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ತಳವಾರ ಹಾಜರಿದ್ದರು.
***

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *