ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹುಟ್ಟೂರಾದ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ “ಶೌರ್ಯ ಆಕಾಡೆಮಿ” ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶೌರ್ಯ ಅಕಾಡೆಮಿಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಕಾಡೆಮಿ ಸ್ಥಾಪನೆಗೆ ಬೇಕಾದ 100 ಎಕರೆ ಜಮೀನಿನ ಸ್ವಾಧೀನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ರಾಯಣ್ಣ ಹೊಂದಿದ್ದ ಸ್ವಾಮಿ ನಿಷ್ಠೆ, ಶೌರ್ಯ, ದೇಶಾಭಿಮಾನ, ವಿಶ್ವಮಾನವ ಮೌಲ್ಯ, ಗುಣಗಳನ್ನು ಯುವ ಜನತೆಗೆ ಪರಿಚಯಿಸುವುದು ಅಕಾಡೆಮಿ ಸ್ಥಾಪನೆಯ ಉದ್ದೇಶ. ಜೊತೆಗೆ ಈ ಆಕಾಡೆಮಿ ಯುವ ಸಬಲೀಕರಣ ಕೇಂದ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಹೇಳಿದರು.
ರಾಯಣ್ಣ ಅವರ ಹುಟ್ಟೂರು, ಅವರನ್ನು ನೇಣುಗಂಬಕ್ಕೆ ಏರಿಸಿದ ಹಾಗೂ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ಪ್ರತಿಷ್ಠಾನ ರಚಿಸಲಾಗಿತ್ತು. ಇಂದಿನ ಸಭೆಯಲ್ಲಿ ಪ್ರತಿಷ್ಠಾನವನ್ನು ಪ್ರಾಧಿಕಾರವನ್ನಾಗಿ ಬದಲಿಸುವ ನಿರ್ಣಯಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
ರಾಯಣ್ಣರ ಜನ್ಮಸ್ಥಳ ಸಂಗೊಳ್ಳಿ ಮತ್ತು ನೇಣು ಹಾಕಿದ ನಂದಗಡದ ಆಲದ ಮರದ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಅಗತ್ಯ ಅನುದಾನÀು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ತಿಳಿಸಿದರು.
ಆಲದಮರ ಮತ್ತು ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಲು, ಇದಕ್ಕಾಗಿ ಇತಿಹಾಸ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಯಿತು. ಪ್ರಾಧಿಕಾರದ ಕಚೇರಿ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾವನ್ನು ಪ್ರಾಧಿಕಾರವನ್ನಾಗಿ ಬದಲಿಸಿ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿ ರೂ. ಒದಗಿಸುವುದಾಗಿ ಮುಖ್ಯಮಂತ್ರಿಗಳು 2015-16ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದ್ದರು. ಅದರಂತೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಮುಖ್ಯಮಂತ್ರಿಯವರು ಸಭೆಯಲ್ಲಿ ಪರಿಶೀಲನೆ ನಡೆಸಿದರು.
ನಂದಡಗಡದ ಎಪಿಎಂಸಿ ಯಾರ್ಡ್‍ನಲ್ಲಿ ರಾಯಣ್ಣ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ 190 ಲಕ್ಷ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಿದೆ. ಈ ವರೆಗೆ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ ಆಂಜನೇಯ, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ, ಬೆಳಗಾವಿ ಜಿಲ್ಲಾಧಿಕಾರಿ ಜಯರಾಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ದಯಾನಂದ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
Check Also
ಮೂವರ ಜೀವ ಉಳಿಸಿದ ಬಾಲಿಕಾಗೆ ಮಿನಿಸ್ಟರ್ ಶಹಬ್ಬಾಶ್….!
ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ …