ಸರ್ವಜ್ಞನ ವಚನಗಳನ್ನು ಜಗತ್ತಿಗೆ ಪರಿಚಯಿಸಬೇಕು: ಕೇಂದ್ರ ಸಚಿವ ಸುರೇಶ ಅಂಗಡಿ
ಫೆಬ್ರುವರಿ 20 (ಕರ್ನಾಟಕ ವಾರ್ತೆ): ಸರ್ವಜ್ಞನ ವಚನಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಡಬೇಕು. ಅದೇ ರೀತಿ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ಸರ್ವಜ್ಞ, ಅಂಬೇಡ್ಕರ್, ಬಸವಣ್ಣನವರ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಮಾಡಬೇಕಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಫೆ.2೦) ಸರ್ವಜ್ಞನ ಜಯಂತಿ ಉತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತಕವಿ ಸರ್ವಜ್ಞರು ಯಾವುದೇ ಸಂಸ್ಕೃತ ಭಾಷೆ ಕಲಿಯದೇ ಕನ್ನಡವನ್ನು ಕಲಿತು ವಚನ ಸಾಹಿತ್ಯವನ್ನು ಇಡಿ ವಿಶ್ವಕ್ಕೆ ಸಾರಿದ ಮಹಾನ್ ಸಂತ ಸರ್ವಜ್ಞ ಎಂದು ಹೇಳಿದರು.
ವಚನಗಳನ್ನು ಮತ್ತು ಅದರ ಸಾರಾಂಶವನ್ನು ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ನೀಡಬೇಕು ಎಂದು ಸಚಿವ ಸುರೇಶ ಅಂಗಡಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಆಯ್.ಎಸ್.ಕುಂಬಾರ ಅವರು, ಜನರಿಗೆ ಜೀವನದ ಬಗ್ಗೆ ತಮ್ಮ ವಚನಗಳ ಮೂಲಕ ಮಾರ್ಗದರ್ಶನ ನೀಡಿದವರು ಸರ್ವಜ್ಞರು ಎಂದು ಹೇಳಿದರು.
ಸಂತಕವಿ ಸರ್ವಜ್ಞರು ಒಬ್ಬ ದಾರ್ಶನಿಕ, ವಿಶ್ವಕವಿ. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು ಎಂದರ್ಥ. ಸರ್ವಜ್ಞರು ಒಬ್ಬ ಕುಂಬಾರ ಸಮಾಜದ ಆದರ್ಶ ಕಾಯಕವಾದಿ ಮತ್ತು ಸಮಾಜದಲ್ಲಿನ ತೋಡಕುಗಳನ್ನು ತಿದ್ದಿದವರು ಎಂದು ಡಾ.ಆಯ್.ಎಸ್. ಕುಂಬಾರ ಹೇಳಿದರು.
ಸರ್ವಜ್ಞರು ರಚಿಸಿರುವ ವಚನಗಳ ಸಂಖ್ಯೆ ಏಳು ಕೋಟಿ ಎಂದು ಹೇಳಲಾಗುತ್ತದೆ. ಆದರೆ ಎರಡು ಸಾವಿರ ವಚನಗಳು ಮಾತ್ರ ಲಭ್ಯವಾಗಿವೆ. ವೇದ ಉಪನಿಷತ್ತುಗಳನ್ನು ಪಠಣ ಮಾಡುವಂತೆ ವಚನಗಳನ್ನು ನಿತ್ಯ ಜೀವನದಲ್ಲಿ ಪಠಣ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಜಿ.ಕುಂಬಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಶ್ರೀರಂಗ ಜೋಶಿ ಮತ್ತು ತಂಡದವರು ವಚನ ಗಾಯನ ಕಾರ್ಯಕ್ರಮ ನಡಸಿಕೊಟ್ಟರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಯ.ರು. ಪಾಟೀಲ, ಸರಳಾ, ಮೇಘಾ ಕುಂದರಗಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಭಾವಚಿತ್ರದ ಭವ್ಯ ಮೆರವಣಿಗೆ:
ಇದಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಸರ್ವಜ್ಞ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು, ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣ ತಲುಪಿತು.
****