Breaking News

ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ

ರಾಜ್ಯ ಆಹಾರ ಆಯೋಗದ ಸಭೆ; ಉತ್ತಮ ಕೆಲಸಕ್ಕೆ ಪ್ರಶಂಸೆ
————————————————————–
ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ

ಬೆಳಗಾವಿ, ಆಹಾರ ಧಾನ್ಯಗಳ ವೈಜ್ಞಾನಿಕವಾಗಿ ಸಂಗ್ರಹಿಸಬೇಕು; ಅಂಗನವಾಡಿ, ವಸತಿನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುವುದರ ಜತೆಗೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎನ್.ಕೃಷ್ಣಮೂರ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ಗುರುವಾರ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಸಾರ ಆಯೋಗ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಆಹಾರದಿಂದ ವ್ಯಕ್ತಿ, ಕುಟುಂಬ, ಸಮಾಜ ಹಾಗೂ ದೇಶ ಉತ್ತಮವಾಗಿರಲು ಸಾಧ್ಯ. ಅದನ್ನು ಮನಗಂಡು‌ ಸರ್ಕಾರ‌ ಗುಣಮಟ್ಟದ ಆಹಾರವನ್ನು ದೊರಕಿಸಿ ಕೊಡಲು ಆಯೋಗವನ್ನು ರಚಿಸಿದೆ. ಆಯೋಗವು ರಾಜ್ಯದಲ್ಲಿ ಸಂಚರಿಸಿ ಆಹಾರದ ವಿತರಣೆ, ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಯಾವುದೇ ಇಲಾಖೆಯ ಅಧಿಕಾರಿಗಳ ಸಣ್ಣ ಸಣ್ಣ ನಿರ್ಲಕ್ಷ್ಯಗಳು ಸಮಾಜದ ‌ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕ ಮತ್ತು ಅಳತೆ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಕಡೆಗಳಲ್ಲಿ ದಾಖಲೆಗಳ ನಿರ್ವಹಣೆ ಅಸಮರ್ಪಕವಾಗಿ ಕಂಡುಬರುತ್ತದೆ.
ಆರೋಗ್ಯ ಇಲಾಖೆಯ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸುವಂತೆ ಸಲಹೆ ನೀಡಿದರು. ಶೌಚಾಲಯ, ಕುಡಿಯುವ ನೀರಿನ ಬಗ್ಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ, ವಸತಿ ನಿಲಯಗಳಲ್ಲಿ ಸಮರ್ಪಕವಾಗಿ ಮೂಲಸೌಕರ್ಯಗಳನ್ನು ಒದಗಿಸಿರುವ ಅಧಿಕಾರಿಗಳಿಗೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಂಸಾಪತ್ರ ನೀಡಬೇಕು ಎಂದು ತಿಳಿಸಿದರು.

ಆಹಾರ ಇಲಾಖೆಯ ವಿತರಣಾ ವ್ಯವಸ್ಥೆ; ಮಧ್ಯಾಹ್ನದ ಬಿಸಿಯೂಟ ವಿತರಣೆ; ಅಂಗನವಾಡಿಯಲ್ಲಿ ಮಕ್ಕಳಿಗೆ ಆಹಾರ ಪೂರೈಕೆ; ವಸತಿನಿಲಯಗಳಲ್ಲಿ ಆಹಾರ ವಿತರಣೆಯ ಸಮಸ್ಯೆಗಳು ಹಾಗೂ ಗೋದಾಮುಗಳಲ್ಲಿ ಆಹಾರ ಧಾನ್ಯ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಹೇಳಿದರು.
೨೦೧೭ ರ ಜುಲೈನಲ್ಲಿ ಆಯೋಗ ರಚನೆಯಾಗಿದ್ದು, ಈಗಾಗಲೇ ೨೫ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಆಹಾರಧಾನ್ಯ ವೈಜ್ಞಾನಿಕ ಸಂಗ್ರಹಕ್ಕೆ ಸೂಚನೆ:

ಸಾರ್ವಜನಿಕ ವಿತರಣೆಗೆ ಗೋದಾಮುಗಳಲ್ಲಿ ಸಂಗ್ರಹಿಸಲಾಗುವ ಆಹಾರ ಧಾನ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಇದಲ್ಲದೇ ಆಹಾರಧಾನ್ಯಗಳ ಸಂಗ್ರಹ ಮತ್ತು ವಿತರಣೆಗೆ ಸಂಬಂಧಿಸಿದಂತೆ ದೈನಂದಿನ ಮಾಹಿತಿಯನ್ನು ಸಮರ್ಪಕವಾಗಿ ಇಟ್ಟಿರಬೇಕು.
ಆದರೆ ಜಿಲ್ಲೆಯ ಗೋದಾಮುಗಳಲ್ಲಿ ಆಹಾರ ಪರೀಕ್ಷಾ ಉಪಕರಣಗಳು ಇಟ್ಟಿರುವುದು ಕಂಡುಬರಲಿಲ್ಲ ಎಂದು ಆಯೋಗದ ಸದಸ್ಯ ಡಿ.ಜಿ.ಹಸಬಿ ತಿಳಿಸಿದರು.

ಕೆಲವು ಪಡಿತರ ವಿತರಣಾ ಕೇಂದ್ರಗಳು ಸರಿಯಾದ ವೇಳೆಗೆ ತೆಗೆದಿರದಿರುವುದು ಕಂಡುಬಂದಿತಲ್ಲದೇ ಕೆಲವು ಕಡೆ ಹೆಚ್ಚುವರಿ ಹಣ ಪಡೆಯುವ ಬಗ್ಗೆ ದೂರುಗಳು ಕೇಳಿಬಂದಿರುತ್ತವೆ.
ಕೆಲವು ಗೋದಾಮುಗಳಲ್ಲಿ ಪಾಮ್ ಎಣ್ಣೆ ಮತ್ತು ಗೋದಿಯ ಹಳೆಯ ಸಂಗ್ರಹವನ್ನು ಹಾಗೇ ಇಡಲಾಗಿರುತ್ತದೆ. ಹೀಗೆ ಯಾವುದೇ ಆಹಾರಧಾನ್ಯ ಗೋದಾಮುಗಳಲ್ಲಿ ವ್ಯರ್ಥವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಸದಸ್ಯ ಡಿ‌.ಜಿ.ಹಸಬಿ ಹೇಳಿದರು.
ಪಡಿತರ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಆಹಾರಧಾನ್ಯಗಳ ಬಗ್ಗೆ ಮಾಹಿತಿ ಫಲಕ ಅಳವಡಿಸಬೇಕು. ಎಲ್ಲ ಕಡೆ ಆಹಾರ ಅದಾಲತ್ ನಡೆಸಬೇಕು ಎಂದು ಹೇಳಿದರು.
ಅಕ್ರಮವಾಗಿ ಹಣ ಪಡೆಯುವ ಮತ್ತು ಸಮಯಕ್ಕೆ ಸರಿಯಾಗಿ ಅಂಗಡಿ ಬಾಗಿಲು ತೆಗೆಯದ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ವಿವರಣೆ ಪಡೆಯುವಂತೆ ಆಯೋಗದ ಸದಸ್ಯ ಡಿ.ಜಿ.ಹಸಬಿ ತಿಳಿಸಿದರು.
ಜಿಲ್ಲೆಗಳ ಭೇಟಿಯನ್ನು ಆಧರಿಸಿ ಆಯೋಗವು ಸರ್ಕಾರಕ್ಕೆ ವಾರ್ಷಿಕ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಅಂಗನವಾಡಿಗಳ ಪರಿಶೀಲನೆ-ಕ್ರಮಕ್ಕೆ ನಿರ್ದೇಶನ:

ಅಂಗನವಾಡಿ ಭೇಟಿಯ ಬಗ್ಗೆ ತಿಳಿಸಿದ ಆಯೋಗದ ಸದಸ್ಯೆ ಮಂಜುಳಾಬಾಯಿ ಅವರು, ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು; ರೇಷನ್ ಅಸಮರ್ಪಕ ದಾಸ್ತಾನು; ಕೆಲವು ಕಡೆ ಮಕ್ಕಳಿಗೆ ಹಾಲು ವಿತರಿಸದಿರುವುದು ಗಮನಿಸಲಾಗಿರುತ್ತದೆ.
ಆಯೋಗ ಭೇಟಿ ನೀಡಿದ ಅಂಗನವಾಡಿಗಳ ಪೈಕಿ ಕೆಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಿರ್ಲಕ್ಷ್ಯ ವಹಿಸುತ್ತಿರುವ ಅಂಗನವಾಡಿ ಕೇಂದ್ರದ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಂಜುಳಾಬಾಯಿ ತಿಳಿಸಿದರು.

ಆಯೋಗದ ಸದಸ್ಯರಾದ ಶಿವಶಂಕರ ಮಾತನಾಡಿ, ಹಿರೇನಂದಿ ಅತ್ಯುತ್ತಮ ಅಂಗನವಾಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಜರಾತಿ, ಆಹಾರ ವಿತರಣೆ ಹಾಗೂ ಬೋಧನೆ ಎಲ್ಲವೂ ಅತ್ಯುತ್ತಮವಾಗಿರುವುದರಿಂದ ಸಂಬಂಧಿಸಿದವರಿಗೆ ಪ್ರಶಂಸಾಪತ್ರ ನೀಡಬೇಕು ಎಂದು ನಿರ್ದೇಶನ ನೀಡಿದರು.
ಕೆಲವು ಗೋದಾಮುಗಳಲ್ಲಿ ಸಂಗ್ರಹವಾಗುವ ಆಹಾರಧಾನ್ಯಗಳ ಎತ್ತುವಳಿ ಸಮರ್ಪಕವಾಗಿ ಕೈಗೊಳ್ಳಬೇಕು ಎಂದರು.
ಮಧ್ಯಾಹ್ನದ ಬಿಸಿಯೂಟ ಚಿಕ್ಕ ಬಾಗೇವಾಡಿ ಶಾಲೆಯ ಸ್ಟಾಕ್ ವಹಿಯಲ್ಲಿ ಯಾರದೂ ಸಹಿ ಇಲ್ಲದಿರುವುದು ಕಂಡುಬಂದಿತು.
ಕರೀಕಟ್ಟಿ ಪ್ರಾಥಮಿಕ ಶಾಲೆಯಲ್ಲಿ ೧೭ ರಂದು ೬೫ ವಿದ್ಯಾರ್ಥಿಗಳು ಗೈರುಹಾಜರಿ ಕಂಡುಬಂದಿತು. ಇದಕ್ಕೆ ಕಾರಣ ತಿಳಿದು ಸೂಕ್ತ ಕ್ರಮವಹಿಸಲು ಸೂಚನೆ ನೀಡಿದರು.
ಹಿರೇನಂದಿಯಲ್ಲಿ ಮೆನು ಪ್ರಕಾರ ಮಧ್ಯಾಹ್ನದ ಊಟ ಮಾಡದೇ ಬರೀ ಅನ್ನ ಸಾರು ಮಾತ್ರ ಮಾಡಲಾಗುತ್ತಿದೆ. ಸರ್ಕಾರ ನೀಡಿರುವ ಮೆನು ಪ್ರಕಾರವೇ ಆಹಾರ ತಯಾರಿಸುವಂತೆ ತಿಳಿಸಿದರು.
ಅತ್ಯುತ್ತಮ ಕಾರ್ಯನಿರ್ವಹಿಸಿದ ಶಾಲೆಗಳಿಗೆ ಪ್ರಶಂಸಾಪತ್ರ ನೀಡುವಂತೆ ತಿಳಿಸಿದರು.
ಎನ್.ಆರ್.ಸಿ. ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಕಂಡುಬರುತ್ತದೆ.

ಅಪೌಷ್ಟಿಕತೆ ಹೊಂದಿರುವ ಮಕ್ಕಳ ಸಂಖ್ಯೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾದ ಮಕ್ಕಳಲ್ಲಿ ಸಂಪೂರ್ಣ ಗುಣಮುಖ ಹೊಂದಿರುವ ಮಕ್ಕಳ ಸಂಖ್ಯೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಈ ಬಗ್ಗೆ ಸೂಕ್ತ ವರದಿ ನೀಡುವಂತೆ ಶಿವಶಂಕರ ತಿಳಿಸಿದರು.
ಅಂಗನವಾಡಿಗಳಿಗೆ ವೈದ್ಯರು ಭೇಟಿ ಮಾಡಿರುವ ಬಗ್ಗೆಯಾಗಲಿ ಅಥವಾ ಮಕ್ಕಳ ತಪಾಸಣೆಯ ಕುರಿತು ಯಾವುದೇ ದಾಖಲಾತಿ ಇಟ್ಟಿಲ್ಲ ಎಂದರು.
೫೨೦೦ ಅಂಗನವಾಡಿಗಳಲ್ಲಿ ಶೇ.೫೯ ಸ್ವಂತ ಕಟ್ಟಡ; ಶೇ.೫೦ ಅಂಗನವಾಡಿಗೆ ಕುಡಿಯುವ ನೀರಿಲ್ಲ ಎಂದು ಇಲಾಖೆಯ ವರದಿ ತಿಳಿಸುತ್ತದೆ. ಆದ್ದರಿಂದ ಅಂಗನವಾಡಿಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಬಗ್ಗೆ ಗಮನಹರಿಸುವಂತೆ ತಿಳಿಸಿದರು.

ವಸತಿನಿಲಯ ಮೂಲಸೌಕರ್ಯ ಒದಗಿಸಲು ಸೂಚನೆ:

ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ ಮಾತನಾಡಿ,
ಸುಭಾಷ್ ನಗರದ ದೇವರಾಜ ಅರಸು ಮೆಟ್ರಿಕ್ ನಂತರದ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವಸತಿನಿಲಯಗಳು ಅತ್ಯುತ್ತಮ ವಸತಿನಿಲಯಗಳು ಎಂದು ಅಭಿಪ್ರಾಯಪಟ್ಟರು.
ಕೆಲವೆಡೆ ಕುಡಿಯುವ ನೀರು, ಬಿಸಿನೀರು ಕೊರತೆ, ಶೌಚಾಲಯ ಅವ್ಯವಸ್ಥೆ ಮತ್ತಿತರ ಲೋಪದೋಷಗಳು ಕಂಡುಬಂದಿವೆ. ಇನ್ನು ಕೆಲವು ಕಡೆ ಮಿತಿಗಿಂತ ಜಾಸ್ತಿ ಮಕ್ಕಳಿಗೆ ಪ್ರವೇಶ ನೀಡಿದ್ದು, ಇದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಸತಿನಿಲಯಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿರುವ ಬಗ್ಗೆ ಆಯೋಗಕ್ಕೆ ಮಾಹಿತಿಯನ್ನು ನೀಡುವ ಮೊದಲು ಪರಿಸೀಲಿಸಿ ಮಾಹಿತಿಯನ್ನು ನೀಡಲು ಸಲಹೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಜಕ್ಕಪ್ಪಗೋಳ ಮಾತನಾಡಿ,
ಆಯೋಗದ ಸದಸ್ಯರು ತಮ್ಮ ಭೇಟಿ ವೇಳೆ ಕಂಡ ಲೋಪದೋಷಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದು, ಅವರು ನೀಡಿರುವ ಸಲಹೆ-ಸೂಚನೆಯಂತೆ ಎಲ್ಲ‌ ಸರಿಪಡಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಚನ್ನಬಸಪ್ಪ ಕೊಡ್ಲಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮ ಸಾಲಿಗೌಡರ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
******

Check Also

ಸದ್ಯಕ್ಕೆ ನಾನು ರೇಸ್ ನಲ್ಲಿ ಇಲ್ಲ, ನಂದೇನಿದ್ರೂ 2028 ರ ತಯಾರಿ…

ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ, 2028ಕ್ಕೆ ತಯಾರಿ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ನಾನು ಸಿಎಂ ಆಗುವ ಸಂಬಂಧ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.