Breaking News

ಎಲ್ಲರಿಗೂ ಸೂರು ಪ್ರಧಾನಿ ಆಶಯ-ಸುರೇಶ ಅಂಗಡಿ

ದಿಶಾ ಸಮಿತಿಯ ತ್ರೈಮಾಸಿಕ ಸಭೆ; ಎಲ್ಲರಿಗೂ ಸೂರು ಪ್ರಧಾನಿ ಆಶಯ
——————————————————————
ವಸತಿ ಯೋಜನೆ ಚುರುಕುಗೊಳಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ

ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ದೇಶದ ಪ್ರತಿ ಕುಟುಂಬಕ್ಕೂ ೨೦೨೨ ರ ವೇಳೆಗೆ ಮನೆ ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ(ಫೆ.೧೫) ನಡೆದ ೨೦೧೯-೨೦ ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಸತಿ ಹಾಗೂ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನೆಯೊಂದನ್ನು ಮಾರ್ಚ ೩೧ ರೊಳಗೆ ರೂಪಿಸಬೇಕು ಎಂದು ತಿಳಿಸಿದರು.

ನಗರ ವಸತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ೧೬೬೬೦ ಮನೆಗಳು ಅನುಮೋದನೆಗೊಂಡಿದ್ದು, ೨೬೨೪ ಮನೆಗಳು ಪ್ರಗತಿ ಹಂತದಲ್ಲಿವೆ. ಮಾರ್ಚ್ ಅಂತ್ಯಕ್ಕೆ ಶೇ.೧೦೦ ಗುರಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪರಿಶಿಷ್ಟ ಜಾತಿ ಪಂಗಡದವರಿಗೆ ೩.೫೦ ಲಕ್ಷ ಹಾಗೂ ಸಾಮಾನ್ಯ ವರ್ಗದವರಿಗೆ ಮನೆ ನಿರ್ಮಿಸಿಕೊಡಲು ೨.೭೦ ಲಕ್ಷ ನೆರವು ನೀಡಲಾಗುತ್ತದೆ ಎಂದು ವಿವರಿಸಿದರು.
ನಗರ ವಸತಿ ಯೋಜನೆ ಅನುಷ್ಠಾನ ಚುರುಕುಗೊಳಿಸಲು ಪ್ರತ್ಯೇಕ ಕಚೇರಿಯೊಂದನ್ನು ತೆರೆಯುವಂತೆ ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ೧೬ ಸಾವಿರ ಜನರು ಅರ್ಜಿಗಳನ್ನು ಸಲ್ಲಿಸಿದ್ದು, ಈಗಾಗಲೇ ಇವುಗಳನ್ನು ಪರಿಶೀಲಿಸಿ ಮೂರು ಸಮಗ್ರ ಯೋಜನೆಗಳನ್ನು ಅನುಮೋದನೆಗಾಗಿ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಮಾಹಿತಿಯನ್ನು ನೀಡಿದರು.
ಬೆಳಗಾವಿಯಲ್ಲಿ ನಿವೇಶನ ಹೊಂದಿಲ್ಲದೇ ಇರುವ ೧೯೬೫೬ ಜನರು ಮನೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಇದರಲ್ಲಿ ೧೮೦೮ ಜನರ ಅರ್ಜಿ ಪರಿಶೀಲಿಸಿ ಅನುಮೋದಿಸಲಾಗಿದೆ ಎಂದರು.
ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೨.೨೦ ಲಕ್ಷ ಮನೆಗಳ ನಿರ್ಮಾಣ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಯಾವುದೇ ಯೋಜನೆಗಳಿರಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ಪ್ರತಿ ಮೂರು ತಿಂಗಳು ಸಮನ್ವಯ ಸಭೆ ಕಡ್ಡಾಯವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.
ಯೋಜನೆಗಳ ಅನುಷ್ಠಾನ ಸುಗಮವಾಗಿ ನಡೆಸುವ ಉದ್ಧೇಶದಿಂದ ಸಭೆ ನಡೆಸಲಾಗುತ್ತಿದ್ದು, ಯೋಜನೆಗೆ ಸಂಬಂಧಿಸಿದಂತೆ ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ೩೩ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಿಶಾ ಸಮಿತಿಯ ಸಭೆಯಲ್ಲಿ ಚರ್ಚಿಸಿ, ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ೭೧.೪೬ ಲಕ್ಷ ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದ್ದು, ಪ್ರವಾಹದಿಂದ ೪೫ ಲಕ್ಷ ಮಾನವ ದಿನಗಳ ಸೃಜನೆ ಸಾಧ್ಯವಾಗಿರುವುದರಿಲ್ಲ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ವಿವರಣೆ ನೀಡಿದರು.
ಇನ್ನೊಂದು ತಿಂಗಳಲ್ಲಿ ಒಂದು ಕೋಟಿ ಮಾನವ ದಿನಗಳನ್ನು‌ ಸೃಜಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವೇತನ ಹಾಗೂ ಯಂತ್ರೋಪಕರಣಗಳ ಹಣ ಪಾವತಿ ವಿಳಂಬಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರಲ್ಲದೇ ಅನುದಾನ ಲಭ್ಯವಿದ್ದರೆ ತಕ್ಷಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಂದ ವೈಯಕ್ತಿಕವಾಗಿ ವ್ಯಾಪಾರ-ವಹಿವಾಟು ಆರಂಭಿಸುವ ಬದಲು ಸಾಮೂಹಿಕವಾಗಿ ತೊಡಗಿಕೊಂಡರೆ ದೊಡ್ಡ ಪ್ರಮಾಣ ವ್ಯವಹಾರ ಸಾಧ್ಯವಾಗಲಿದ್ದು, ಇದರಿಂದ ಇನ್ನೂ ಹೆಚ್ವಿನ ಉದ್ಯೋಗಾವಕಾಶ ಮತ್ತು ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಸಲಹೆ ನೀಡಿದರು.

ಪಿಎಂಜಿಎಸ್ ವೈ:
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳನ್ನು ಆಯ್ಕೆ ಮಾಡುವಾಗ ಸಂಬಂಧಪಟ್ಟ ಕ್ಷೇತ್ರದ ಸಂಸದರ ಸಲಹೆ ಪಡೆದುಕೊಳ್ಳಬೇಕು ಎಂದು ಸುರೇಶ್ ಅಂಗಡಿ ಸೂಚನೆ ನೀಡಿದರು.
ಈ ಯೋಜನೆಯಡಿ ಪ್ರತಿ ತಾಲ್ಲೂಕಿನಲ್ಲಿ ೩೦ ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದ್ದು, ಕೆಲವು ತಾಲ್ಲೂಕುಗಳಲ್ಲಿ ಮಾತ್ರ ೪೫ ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ ೩೩೦ ಕಿ.ಮೀ. ರಸ್ತೆ ನಿರ್ಮಿಸಲಾಗುವುದು. ಪ್ರತಿ ಕಿ.ಮೀ. ೬೦ ರಿಂದ ೭೦ ಸಾವಿರ ರೂಪಾಯಿ ಅನುದಾನ ಲಭ್ಯವಾಗಲಿದೆ ಎಂದರು.

ನಿರಂತರ ನೀರು ಯೋಜನೆ ಪೂರ್ಣಗೊಳಿಸಲು ಸೂಚನೆ:

ಬೆಳಗಾವಿ ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಬೇಕು. ಅದೇ ರೀತಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳಿಗೆ ಧಕ್ಕಯಾಗದಂತೆ ನೀರು ಪೂರೈಕೆ ಯೋಜನೆ ಜಾರಿಗೊಳಿಸಬೇಕು ಎಂದು ಸಚಿವ ಅಂಗಡಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮುಂಬರುವ ಬೇಸಿಗೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಪೂರೈಕೆ ಯೋಜನೆಗಳನ್ನು ಮಾರ್ಚ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಸ್ವಚ್ಛ ಭಾರತ ಯೋಜನೆ; ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ; ಕೃಷಿ ಸಿಂಚಾಯಿ ಯೋಜನೆ; ಮಳೆನೀರು ಕೊಯ್ಲು; ಡಿಜಿಟಲ್ ಇಂಡಿಯಾ; ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದು; ಬೆಳೆವಿಮಾ ಯೋಜನೆ; ಸ್ಮಾರ್ಟ್ ಸಿಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸ್ಮಾರ್ಟ ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ ೯೫೯ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಲಮಿತಿಯಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ಶಶಿಧರ್ ಕುರೇರ್ ತಿಳಿಸಿದರು.
ಕೋಟೆ(ಕಿಲ್ಲಾ) ಪ್ರದೇಶವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಅನುಮತಿ ನೀಡಲು ಹಿರಿಯ ಸೇನಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗನೇ ಪ್ರತ್ಯೇಕ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಬೆಳಗಾವಿ (ಉತ್ತರ) ಶಾಸಕ ಅನಿಲ್ ಬೆನಕೆ ಅವರು, ನಗರದಲ್ಲಿ ವಸತಿ ಹಾಗೂ ಕುಡಿಯುವ ನೀರು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಉಪಸ್ಥಿತರಿದ್ದರು.
*****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *