ಬೆಳಗಾವಿ: ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ರಾಜ್ಯದ 9 ಪ್ರಮುಖ ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಿಸುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈ ಭಾಗದ ಮಠಾಧೀಶರು ಹಾಗೂ ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡರುಗಳು ಸಾಂಕೇತಿಕ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಅವರು, ರಾಜ್ಯ ಸರಕಾರ 9 ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿರುವದು ಸ್ವಾಗತಾರ್ಹ. ಇದೊಂದು ಉತ್ತಮ ಬೆಳವಣಿಗೆ. ಉತ್ತರ ಕರ್ನಾಟಕದ ಜನತೆಯ ಭಾವನೆಗಳಿಗೆ ಸ್ಪಂಧಿಸುವ ಕ್ರಮವಾಗಿದೆ. ಅದಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇವೆ ಎಂದರು.
ಆದರೆ, ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರವಷ್ಟೆ ನಮ್ಮ ಹೋರಾಟ ಅಲ್ಲ. ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿಗಳ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು. ಈ ಭಾಗದ ನಿರ್ಣಯಗಳನ್ನು ಸುವರ್ಣ ಸೌಧದಲ್ಲಿಯೇ ನಡೆಯಬೇಕು ಎಂಬುದು ನಮ್ಮ ಬೇಡಿಕೆ. ಈ ಬೇಡಿಕೆಗಳನ್ನು ಈಡೇರಿಸುವವರಗೆ ಹೋರಾಟ ನಿಲ್ಲುವದಿಲ್ಲ ಎಂದರು.
ರಾಜ್ಯ ಸರಕಾರ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಉತ್ತರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರಚಿಸುವ ಘೋಷಣೆ ಮಾಡಿರುವದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಆ ಮಾದರಿಯಲ್ಲಿಯೇ ಎಲ್ಲ ಕಚೇರಿಗಳನ್ನು ಪ್ರತ್ಯೇಕ ಎರಡು ಕಚೇರಿಗಳನ್ನಾಗಿ ಮಾಡಿ, ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣರಾವ ಮುಚಳಂಬಿ ಅವರು, ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಇತ್ತೀಚೆಗೆ ಸುವರ್ಣ ಸೌಧದ ಮುಂದೆ ಮಠಾಧೀಶರ ನೇತೃತ್ವದಲ್ಲಿ ನಡೆಸಿದ್ದ ಪಕ್ಷಾತೀತ ಹೋರಾಟಕ್ಕೆ ರಾಜ್ಯ ಸರಕಾರ ಪೂರಕವಾಗಿ ಸ್ಫಂಧಿಸಿರುವದಕ್ಕೆ ರಾಜ್ಯ ಸರಕಾರಕ್ಕೆ ಮತ್ತು ಮಠಾಧೀಶರಿಗೆ ಅಭಿನಂದಿಸುತ್ತೇವೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ರಾಜ್ಯ ಸರಕಾರ 9 ಕಚೇರಿಗಳ ಸ್ಥಳಾಂತರ ನಿರ್ಣಯ ಕೈಗೊಂಡಿರುವದಕ್ಕೆ ಮಠಾಧೀಶರ ಮತ್ತು ಈ ಭಾಗದ ಜನತೆಯ ಪರವಾಗಿ ಸಾಂಕೇತಿಕ ಅಭಿನಂದನೆ ಸಲ್ಲಿಸುತ್ತೇವೆ. ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆ ಪ್ರಮುಖ ಬೇಡಿಕೆ ಈಡೇರಿಸಿದರೆ, ಮುಖ್ಯಮಂತ್ರಿಗಳನ್ನು ಈ ಭಾಗದ ಮಠಾಧೀಶರ ಪರವಾಗಿ ದೊಡ್ಡ ಪ್ರಮಾಣದ ಗೌರವ ಸಲ್ಲಿಸುತ್ತೇವೆ ಎಂದರು.
ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳು ಸ್ಥಳಾಂತರವಾಗುವವರೆಗೆ ಸುವರ್ಣ ಸೌಧದ ಒಳಗೆ ಪ್ರವೇಶಿಸಬಾರದು ಎಂದು ಮಠಾಧೀಶರುಗಳು ಸಂಕಲ್ಪ ಮಾಡಿದ್ದೇವೆ. ಆದಷ್ಟು ಬೇಗ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಈ ಭಾಗದ ಮಠಾಧೀಶರ ಸಂಕಲ್ಪ ಈಡೇರಿಸಬೇಕು ಎಂದು ಆಗ್ರಹಿಸಿದರು.
ಆರ್.ಎಸ್.ದರ್ಗೆ ಮಾತನಾಡಿ, 9 ಕಚೇರಿಗಳ ಸ್ಥಳಾಂತರವನ್ನು ಕಾಲಮಿತಿಯಲ್ಲಿ ಮಾಡಬೇಕು. ಈ ಕುರಿತು ರಾಜ್ಯ ಸರಕಾರ ರಚಿಸಿರುವ ಉಪ ಸಮಿತಿಯು ಬೇಗ ಕ್ರಮ ಕೈಗೊಳ್ಳಬೇಕು. ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯದಂತೆ ಮುಖ್ಯಮಂತ್ರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿಗಳು, ಎಂ.ಟಿ.ಪಾಟೀಲ, ಬಸವರಾಜ ಬಾಗೋಜಿ ಮುಂತಾದವರು ಉಪಸ್ಥಿತರಿದ್ದರು.
Check Also
ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!
ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …