Breaking News

VTU ಯುನಿವರ್ಸಿಟಿ, ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಲು ಯೋಜನೆ…

`5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’

*ಬೆಳಗಾವಿ ಸಿಇಒ ಶೃಂಗಸಭೆಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ*

ಬೆಳಗಾವಿ: ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) `ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ `ಸಿಇಓಗಳ ದುಂಡುಮೇಜಿನ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, `ಬೆಳಗಾವಿಯು ಉದ್ಯಮಶೀಲತೆ, ಶೈಕ್ಷಣಿಕ ಸಂಸ್ಕೃತಿ ಮತ್ತು ಹಿತಕರ ಹವಾಮಾನ ಮೂರಕ್ಕೂ ಹೆಸರಾಗಿದೆ. ಇಲ್ಲಿ ಉದ್ದಿಮೆಗಳನ್ನು ಸಮೃದ್ಧವಾಗಿ ಪೂರ್ಣಪ್ರಮಾಣದಲ್ಲಿ ಬೆಳೆಸಲಾಗುವುದು’ ಎಂದರು.

ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದ್ದು, ರಾಜ್ಯದಲ್ಲಿ ಇದು ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಜಾರಿಗೆ ಬರುತ್ತಿದೆ. ಈಗಾಗಲೇ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಮತ್ತು ಪದವಿ ಹಂತಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯನ್ನು ಅಳವಡಿಸಿಕೊಂಡಿದ್ದು, ಉದ್ದಿಮೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಹೇರಳವಾಗಿ ಲಭ್ಯವಾಗಲಿದೆ ಎಂದು ಅವರು ನುಡಿದರು.

ರಾಜ್ಯದಲ್ಲಿ ಸರಕಾರಿ ಎಂಜಿನಿಯರಿಂಗ್ ಮತ್ತು ಇವು ಇಲ್ಲದ ಕಡೆಗಳಲ್ಲಿ ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ `ಸೂಪರ್-30’ ಯೋಜನೆಯನ್ನು ರೂಪಿಸಲಾಗಿದೆ. ಇದರ ಜತೆಗೆ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವದ ಯಾವುದೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಉದ್ದಿಮೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದನ್ನು ಉತ್ತೇಜಿಸಲಾಗುತ್ತಿದೆ. ಇದು ಸಮಾಜದಲ್ಲಿ ಪರಿವರ್ತನೆಯನ್ನು ತರಲಿದ್ದು, ಜಾಗತಿಕ ಮಟ್ಟದ ನಾಯಕತ್ವವನ್ನು ಸೃಷ್ಟಿಸಲಿದೆ’ ಎಂದು ಅವರು ವಿವರಿಸಿದರು.

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಇದೆ. ಈ ವಿಶ್ವವಿದ್ಯಾಲಯವನ್ನು ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಿ, ಉತ್ಕೃಷ್ಟ (ಆಂಕರ್) ಸಂಸ್ಥೆಯನ್ನಾಗಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯದ ಎಲ್ಲ ಭಾಗಗಳೂ ಸಮಾನವಾಗಿ ಬೆಳವಣಿಗೆ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಲೇ `ಬಿಯಾಂಡ್ ಬೆಂಗಳೂರು’ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಉದ್ದಿಮೆಗಳು ಬೆಂಗಳೂರಿನಲ್ಲಿ ಮಾತ್ರವೇ ನೆಲೆಗೊಳ್ಳಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರು ಕ್ಲಸ್ಟರ್ ಗಳನ್ನು ಮಾಡಲಾಗಿದ್ದು, ಬೆಳಗಾವಿಯಲ್ಲಿ ಕೂಡ ಉದ್ಯಮಗಳ ಸ್ಥಾಪನೆಗೆ ಎಲ್ಲ ನೆರವನ್ನೂ ಸರಕಾರ ನೀಡಲಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐಟಿ‌ ನಿರ್ದೇಶಕಿ‌ ಮೀನಾ ನಾಗರಾಜ, ಕೆ-ಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು, ಉದ್ಯಮಿಗಳಾದ ಸುನೀಲ್ ದೇಶಪಾಂಡೆ, ಜಯಂತ್ ಹುಂಬರವಾಡಿ, ರಾಜೇಂದ್ರ ಬೆಳಗಾಂವ್ಕರ್, ಚೈತನ್ಯ ಕುಲಕರ್ಣಿ, ಎನ್.ಜಿ.ಸುಬ್ರಹ್ಮಣ್ಯಂ, ವೆಂಕಟೇಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *