Breaking News
Home / Breaking News / ಮಹಾದಾಯಿ ವಿವಾದ ,ಪ್ರಧಾನಿ ಮಧ್ಯಸ್ಥಿಕೆಗೆ ಮುಖ್ಯಮಂತ್ರಿ ಆಶಯ

ಮಹಾದಾಯಿ ವಿವಾದ ,ಪ್ರಧಾನಿ ಮಧ್ಯಸ್ಥಿಕೆಗೆ ಮುಖ್ಯಮಂತ್ರಿ ಆಶಯ

ಸವದತ್ತಿ- ಮಹಾದಾಯಿ ನೀರು ಹಂಚಿಕೆ ವಿವಾದದ ಪರಿಹಾರಕ್ಕೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಮಹಾರಾಷ್ಟ್ರದಲ್ಲಿ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿಗಳು ಭಾಗವಹಿಸದ ಕಾರಣ ಸಭೆ ನಡೆಯಲಿಲ್ಲ. ಈ ಮತ್ತು ಸಭೆ ನಡೆಯುವುದಾದರೆ ಸಮಸ್ಯೆ ಪರಿಹಾರ ಕುರಿತು ಚರ್ಚಿಸಲು ನಾನು ಸಿದ್ದನಿದ್ದೆನೆ. ಇತ್ತೀಚೆಗೆ ದೆಹಲಿಯಲ್ಲಿ ಗೋವಾ ಮುಖ್ಯಮಂತ್ರಿಗಳನ್ನು ಭೆಟ್ಟಿಯಾದಾಗ ವಿಷಯ ಕುರಿತು ತಿಳಿಸಿದಾಗ ಸಭೆ ನಡೆಸುವುದಾದರೆ ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಹಾದಾಯಿ ಸಮಸ್ಯೆ ನಿವಾರಣೆಗೆ ಮೂರೂ ಮುಖ್ಯಮಂತ್ರಿಗಳಲ್ಲಿ ಯಾರದರೂ ಸಭೆ ನಡೆಸಬಹುದಾಗಿದ್ದು, ಬೇಕಾದರೆ, ಸಭೆ ನಡೆಸಲು ನಾನೂ ಸಿದ್ದನಿದ್ದೇನೆ. ಅವಶ್ಯವಿದ್ದರೆ ಗೋವಾ ಮುಖ್ಯಮಂತ್ರಿಗಳು ನಡೆಸಲಿ. ಅಥವಾ  ಪ್ರಧಾನಿ ನರೇಂದ್ರ ಮೋದಿ ಅವರು ಮುರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ನಿವಾರಣೆಗೆ ಮುಂದಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪರಿಹಾರ ಕಾಮಗಾರಿಗಳಿಗೆ ತಲಾ 50 ಲಕ್ಷ ಬಿಡುಗಡೆ

ರಾಜ್ಯದಲ್ಲಿ ಈಗಾಗಲೇ ಘೋಷಿಸಲಾಗಿರುವ ಎಲ್ಲ 139 ಬರಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿ ತಾಲ್ಲೂಕಿಗೆ ತಲಾ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಅತೀವೃಷ್ಟಿಯಾದರೆ ಬೇರೆ ಜಿಲ್ಲೆಗಳಲ್ಲಿ ಅನಾವೃಷ್ಟಿಯಾಗಿದೆ. ಬರ ಪರಿಸ್ಥಿತಿಯ ಬಗ್ಗೆ ಈಗಾಗಲೇ ಕಂದಾಯ ಸಚಿಯ ಕಾಗೋಡು ತಿಮ್ಮಪ್ಪ ಹಾಗೂ ಕೃಷಿ ಸಚಿವ ಕೃಷ್ಣ ಭೈರೆಗೌಡ ಅವರು ಕೇಂದ್ರ ಸರಕಾರದ ಸಂಬಂಧಪಟ್ಟ ಮಂತ್ರಿಗಳನ್ನು ಭೆಟ್ಟಿ ಮಾಡಿ ಮನವರಿಕೆ ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿ ಬರಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದೆ. ಈಗಾಗಲೇ ಬರ ಪರಿಸ್ಥಿತಿ ಕುರಿತಂತೆ  3 ಸಾವಿರದ 375 ಕೊಟಿ ರೂಪಾಯಿಗಳ ಹಾನಿಯಾದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಸದ್ಯ ಅಂತಿಮವಾದ ಇನ್ನೊಂದು ಮನವಿ ತಯಾರಿ ಮಾಡಲಾಗಿದ್ದು , ಇದು ರಾಷ್ಟ್ರೀಯ ಬರ ನಿರ್ವಹಣೆ ಸಮಿತಿಯ ಪ್ರಕಾರ  ಸಿದ್ದಮಾಡಲಾಗಿದ್ದು, ಇದು  4 ಸಾವಿರದ 656 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ. ಆದರೆ, ರಾಜ್ಯದಲ್ಲಿ ಬರದಿಂದಾಗಿ ವಾಸ್ತವವಾಗಿ ಹಾನಿಯಾದದ್ದು ಸುಮಾರು ಹದಿನಾರು ಸಾವಿರ ಕೋಟಿ ಎಂದು ಹೇಳಿದರು.

ಅತೀವೃಷ್ಟಿಯಿಂದಾಗಿ ರಾಜ್ಯದಲ್ಲಿ 386 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದ್ದು, ಮನವಿ ಸಲ್ಲಿಸಲಾಗಿದೆ. ಅತೀವೃಷ್ಟಿ ಹಾನಿಯ ಬಗ್ಗೆ ಸದ್ಯದಲ್ಲಿ ಇನ್ನೊಂದು ಮನವಿ ಸಿದ್ದಪಡೆಸಲಾಗುತ್ತಿದೆ.  ಎರಡು ಅಂತಿಮ ಮನವಿಗಳನ್ನು ಕೇಂದ್ರಕ್ಕೆ ಮುಂದಿನವಾರ ಸಲ್ಲಿಸಲಾಗುತ್ತಿದೆ  ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡತ ಎಂದು ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ 1 ಲಕ್ಷ ಎರಡು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಒಟ್ಟು 605 ಕೋಟಿಯಷ್ಟು ನಷ್ಟವಾಗಿದೆ. ರಾಷ್ಟ್ರೀಯ ಬರನಿರ್ವಹಣೆ ಸಮಿತಿಯ ಪ್ರಕಾರ ಸುಮಾರು 70 ಕೋಟಿ ಆಗಿದೆ. ಬೆಳಗಾವಿಯ ಇತಿಹಾಸದಲ್ಲಿಯೇ ಕಳೆದವರ್ಷ ಹಿಂಗಾರು ಮತ್ತು ಮುಂಗಾರು ಬರಪರಿಸ್ಥಿತಿಯ ಪರಿಹಾರ ಹಾಗೂ ಬೆಳೆವಿಮೆ ಸೇರಿ 295 ಕೋಟಿ ರೂಪಾಯಿಗಳ ಸಬ್ಸಿಡಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬರನಿರ್ವಹಣೆ ಕುರಿತು ಇಂದು ಅಧಿಕಾರಗಳ ಸಭೆ ನಡೆಸಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಮತ್ತು ಉದ್ಯೋಗಕ್ಕೆ ಭರವಸೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಬರನಿರ್ವಹಣೆಗೆ ಹಣಕಾಸಿನ ಕೊರತೆಯಿಲ್ಲ. ಬೆಳಗಾವಿ ಜಿಲ್ಲಾಧಿಕಾರಿಗಳ ಹತ್ತಿರ ಈಗಾಗಲೇ 12 ಕೋಟಿ ರೂಪಾಯಿಗಳಿದ್ದು, ಅದರಲ್ಲಿನ ಒಂಬತ್ತು ಕೊಟಿ ರೂಪಾಯಿಗಳನ್ನು ಬರನಿರ್ವಹಣೆಗೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬುರಾಜು ಯೋಜನೆಗಳನ್ನು ಪೂರ್ಣಗೊಳಿಸಿದರೆ ಜಿಲ್ಲೆಯ 166 ಗ್ರಾಮಗಳ ಸುಮಾರು ಐದುವರೆ ಲಕ್ಷದಷ್ಟು ಜನರಿಗೆ ನೀರಿನ ಅನುಕೂಲವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ 21 ಯೋಜನೆಗಳ ಪೈಕಿ ಹದಿನೆಂಟು ಯೋಜನೆಗಳನ್ನು ಬರುವ ಮಾರ್ಚ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಉಳಿದ ಮೂರು ಯೋಜನೆಗಳನ್ನು ಮುಂದಿನ ಡಿಸೆಂಬರ ಒಳಗಾಗಿ ಪೂರ್ತಿಗೊಳಿಸಲು ತಿಳಿಸಿಲಾಗಿದೆ. ಬೆಳಗಾವಿಯ ದೈದ್ಯಕೀಯ ಸಂಸ್ಥೆಯ ಕಟ್ಟಡಗಳ ನವೀಕರಣಕ್ಕೆ ಹದಿನೈದು ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ನೀಡಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಇದೇ ವರ್ಷದಲ್ಲಿ ಇದರ ಕಾಮಗಾರಿಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *