ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ
* ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ
ಬೆಂಗಳೂರು
ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷವಿದ್ದವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ – ದ ಮೇಕರ್ ಆಫ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಧಾನಿಯವರಿಗೆ ಅರ್ಪಿಸಲಾಯಿತು.
ಸೆನ್ಸ್ ಎಸೆನ್ಸ್ ಸಂಸ್ಥೆಯ ರುಷಾಲಿ ಭಂಡಾರಿ ಮತ್ತು ಯಶ್ವಿ ಭಂಡಾರಿ ಅವರು ಅತ್ಯಂತ ಕಾಳಜಿಯಿಂದ ಸಿದ್ಧಪಡಿಸಿದ ಈ ವಿಶೇಷ ಪುಸ್ತಕವನ್ನು ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಹೊರತರಲಾಗಿದೆ. ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು.
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ವಿಆರ್‌ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಾಣಿ ಆನಂದ ಸಂಕೇಶ್ವರ, ರುಷಾಲಿ, ಯಶ್ವಿ ಅವರು ಪುಸ್ತಕದ ಐದು ಪ್ರತಿಗಳನ್ನು ಅರ್ಪಿಸಿದರು.
ಪುಸ್ತಕದ ಮುಖಪುಟ ವೀಕ್ಷಿಸಿ, ಒಳಪುಟಗಳನ್ನು ತಿರುವಿ ಹಾಕುತ್ತ ಅತ್ಯಂತ ಆಸಕ್ತಿಯಿಂದ ವಿವರಗಳನ್ನು ಕೇಳಿ ತಿಳಿದುಕೊಂಡ ಮೋದಿಯವರು, ಇದೊಂದು ವಿಶಿಷ್ಟ ಕೃತಿಯಾಗಿದೆ. ನಿಜಕ್ಕೂ ವಿಶೇಷ ಸಾಧನೆ ಮಾಡಿದ್ದೀರಿ ಎಂದು ಪ್ರಶಂಸಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಬೆಂಬಲದಿಂದ ಪುಸ್ತಕ ಹೊರತರಲು ಸಾಧ್ಯವಾಯಿತು. ಇದನ್ನು ಅಂಧರ ಶಾಲೆಗಳಿಗೆ ತಲುಪಿಸಲಾಗಿದೆ. ಆಸಕ್ತ ಅಂಧರಿಗೆ ಲಭಿಸುವಂತೆ ಮಾಡಲಾಗಿದೆ. ನಮ್ಮ ದೇಶ ಮಾತ್ರವಲ್ಲ, ಅನ್ಯ ದೇಶಗಳ ಅಂಧರೂ ನಮ್ಮ ಪ್ರಧಾನಿಯವರ ಸಾಧನೆಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಆಸೆಯಿದ್ದು, ವಿವಿಧ ದೇಶಗಳಿಗೆ ಪುಸ್ತಕವನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದು ರುಷಾಲಿ ಮತ್ತು ಯಶ್ವಿ ವಿವರಿಸಿದರು. ನಿಮ್ಮ ಗುರಿ ಒಳ್ಳೆಯದು ಹಾಗೂ ವಿಶಾಲವಾಗಿದೆ. ವಿಆರ್‌ಎಲ್ ಸಮೂಹ ಸಂಸ್ಥೆ ಇಂತಹ ಒಳ್ಳೆಯ ಪ್ರಯತ್ನವನ್ನು ಬೆಂಬಲಿಸಿ ಯಶಸ್ವಿಗೊಳಿಸಿರುವುದು ಅಭಿನಂದನಾರ್ಹ ಎಂದು ಪ್ರಧಾನಿಯವರು ಹೇಳಿದರು.
ಡಾ. ಆನಂದ ಸಂಕೇಶ್ವರ ಅವರ ಕಾಳಜಿಯನ್ನು ಇದೇ ವೇಳೆ ಪ್ರಶಂಸಿಸಿದ ಮೋದಿಯವರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಲು ಪ್ರೋತ್ಸಾಹ ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಕುರಿತ ಈ ಪುಸ್ತಕವನ್ನು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರು ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.

ವಿಆರ್‌ಎಲ್ ಲಾಜಿಸ್ಟಿಕ್ ಲಿ. ವತಿಯಿಂದ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ನಾವು ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಲ್ಲಿ ಹಲವು ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗೆ ಪ್ರಯತ್ನಿಸಿದ್ದೇವೆ. ಈ ಕೆಲಸಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಸಮಾಜದ ಎಲ್ಲರ ಏಳಿಗೆಗೆ ಪೂರಕವಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರುತ್ತೇವೆ. ಪ್ರಧಾನಿ ಅವರ ಜೀವನ ಸಾಧನೆ ಮತ್ತು ಅವರ ಕೈಂಕರ್ಯಗಳು ಅಂಧರಿಗೂ ಪ್ರೇರಣೆ ಆಗಲಿ ಎನ್ನುವ ಸದುದ್ದೇಶದಿಂದ ಈ ಪುಸ್ತಕ ಪ್ರಕಟಿಸಲು ನೆರವಾಗಿದ್ದೇವೆ.

ಡಾ. ಆನಂದ ಸಂಕೇಶ್ವರ ವ್ಯವಸ್ಥಾಪಕ ನಿರ್ದೇಶಕರು, ವಿಆರ್‌ಎಲ್ ಸಮೂಹ ಸಂಸ್ಥೆ

ಉಷಾ ಕೃಷ್ಣಗೆ ಪುಸ್ತಕ ಕೊಡುಗೆ
ಜೀವನದಲ್ಲಿ ಒಮ್ಮೆಯಾದರೂ ಮೋದಿ ಅವರನ್ನು ನೋಡಲೇಬೇಕೆಂದು ಹಂಬಲಿಸುತ್ತಿದ್ದ ಬೆಂಗಳೂರಿನ ಉಷಾ ಕೃಷ್ಣ ಅವರ ಕನಸು ಮೊನ್ನೆ ಈಡೇರಿತು. ಶೇ.99 ದೃಷ್ಟಿದೋಷ ಇರುವ ಉಷಾ ಅವರೊಂದಿಗೆ ಮಾತನಾಡುತ್ತಲೇ ವಿಮಾನದಿಂದ ‘ಎ ಪ್ರಾಮಿಸ್ಡ್ ನೇಷನ್’ ಬ್ರೈಲ್ ಪುಸ್ತಕವನ್ನು ತರಿಸಿ ಹಸ್ತಾಂತರಿಸಿ ವಿಆರ್‌ಎಲ್ ಸಂಸ್ಥೆಯ ಶ್ರಮ ತಮಗೆ ಸಹಾಯವಾಗಲಿ ಎಂದು ಶುಭ ಹಾರೈಸಿದ್ದಾರೆ.

Check Also

ಚನ್ನಮ್ಮಾಜಿಯ ಮೂರ್ತಿ ತೆರವು ವಿವಾದ, ಸಂಧಾನ ಸಫಲ

ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ …

Leave a Reply

Your email address will not be published. Required fields are marked *