ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು ಸಾಮಾಜಿಕ ಸೇವೆಯಲ್ಲಿ ಸಕ್ರೀಯವಾಗಿದ್ದು ರಾಜಕೀಯ ರಂಗದಲ್ಲಿಯೂ ಅನುಭವ ಪಡೆದಿದ್ದಾರೆ.ತಂದೆ ಸತೀಶ್ ಅವರಂತೆ ಸರಳ ವ್ಯಕ್ತಿತ್ವವನ್ನು ಹೊಂದಿರುವ ಅವರು ಆಸ್ತಿ ಸಂಪಾದನೆಯಲ್ಲಿ ಕೋಟ್ಯಾಧೀಶರು ಅನ್ನೋದು ವಿಶೇಷ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು 7.29 ಕೋಟಿ ರೂ ಚರಾಸ್ತಿ ಮತ್ತು 1.82 ಕೋಟಿ ಸ್ಥಿರಾಸ್ತಿ ಇದೆ ಎನ್ನುವ ವಿಚಾರ ಗೊತ್ತಾಗಿದೆ.
ಕೈಯಲ್ಲಿ 4.87 ಲಕ್ಷ ನಗದು ಹಣ ಹೊಂದಿದ್ದಾರೆ. 6.24 ಲಕ್ಷ ರೂ ಚಿನ್ನಾಭರಣವಿದೆ. ಆದರೆ ಸಚಿವರ ಪುತ್ರಿ ಬಳಿ ಯಾವುದೇ ವಾಹನವಿಲ್ಲ. ವಾರ್ಷಿಕ 1.64 ಕೋಟಿ ಆದಾಯ ತೋರಿಸಿದ್ದಾರೆ. 2018 ರಲ್ಲಿ ಇವರ ಆದಾಯ 32.90 ಲಕ್ಷ ರೂ ಗಳಷ್ಟಿತ್ತು. ಆದಾಯದ ಜೊತೆಗೆ ಪ್ರಿಯಾಂಕಾ ಅವರಿಗೆ 1.57 ಕೋಟಿ ಸಾಲ ಇದೆ.
ಈ ಸಾಲ ತಂದೆ ಸತೀಶ ಜಾರಕಿಹೊಳಿ ಹಾಗೂ ತಾಯಿ ಎಸ್ ಎಸ್ ಜಾರಕಿಹೊಳಿ ಅವರ ಹೆಸರಿನಲ್ಲಿದೆ. ಸತೀಶ ಜಾರಕಿಹೊಳಿ ಅವರು 1.47 ಕೋಟಿ ಕೈ ಸಾಲ ನೀಡಿದ್ದಾರೆ.