Breaking News
Home / LOCAL NEWS / ನೋಟಿನ ಗಲಾಟೆ..ಮೋದಿ ವಿರುದ್ಧ ಕಾಂಗ್ರೆಸ್ ತಮಟೆ

ನೋಟಿನ ಗಲಾಟೆ..ಮೋದಿ ವಿರುದ್ಧ ಕಾಂಗ್ರೆಸ್ ತಮಟೆ

ಬೆಳಗಾವಿ:
ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆ ಖಂಡಿಸಿ ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ತಮಟೆ ಚಳುವಳಿ ನಡೆಸುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ನಗರದ ಕನ್ನಡ ಸಾಹಿತ್ಯ ಭವನದಿಂದ ತಮಟೆ ಮೆರವಣಿಗೆಯನ್ನು ಆರಂಭಿಸಿದ ಪ್ರತಿಭಟನಾಕಾರರು ಚನ್ನಮ್ಮ ವೃತ್ತದಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮಟೆ ಬಾರಿಸಿ ಮೋದಿ ವಿರುದ್ದದ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಕೇಂದ್ರ ಸರ್ಕಾರ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ದೇಶದ ಜನ ಸಾಮಾನ್ಯರು ತೊಂದರೆ ಪಡುತ್ತಿದ್ದಾರೆ. ಹಗಲಿರುಳು ಶ್ರಮವಹಿಸಿ ಗಳಿಸಿದ ಬಡವರ ಹಣ ಬ್ಯಾಂಕ್‍ನಲ್ಲಿ ಬಂದಿಯಾಗಿದೆ. ದೇಶದ ಕೈಗಾರಿಕಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಕುಸಿದಿದೆ. ಶೇ.30 ರಷ್ಟು ಜನ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂದು ಹೆಬ್ಬಾಳಕರ ಆರೋಪಿಸಿದರು.
ನೋಟು ಅಮಾನ್ಯದಿಂದ ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರ ಸ್ಥಬ್ದಗೊಂಡಿದೆ. ಸಂಪೂರ್ಣವಾಗಿ ನಗದು ಹಣದಿಂದಲೆ ನಡೆಯುವ ಕೃಷಿ ಕ್ಷೇತ್ರದ ಕೂಲಿ ಕಾರ್ಮಿಕರಿಗೆ ರೈತರ ಬಳಿ ಕೂಲಿ ಕೊಡಲು ಹಣ ಇಲ್ಲ. ರೈತರ ಬೆಳೆಗಳ ಬೆಲೆಗಳು ನೆಲ ಕಚ್ಚಿವೆ. ಗ್ರಾಮೀಣ ಕ್ಷೇತ್ರದ ಜೀವನಾಡಿಯಾಗಿರುವ ಸಹಕಾರಿ ಬ್ಯಾಂಕುಗಳ ವ್ಯವಹಾರ ಸ್ಥಬ್ದಗೊಂಡಿದ್ದು, ಕೇಂದ್ರ ಹಠಮಾರಿ ಧೋರಣೆಯಿಂದ ದೇಶದ ಬಡವ ಜನಸಾಮಾನ್ಯ, ರೈತ, ಸೇರಿದಂತೆ ಎಲ್ಲ ಕ್ಷೇತ್ರಗಳ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೆಬ್ಬಾಳಕರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ದೇಶದ ಆರ್ಥಿಕ ಪರಿಸ್ಥಿತಿ ಹೋಪ್ಲೇಸ್, ಬೇಸ್ಲೆಸ್ ಆಗಿದ್ದರೂ ಸಹ ಮೋದಿ ಸರ್ಕಾರ ದೇಶದಲ್ಲಿ ಕ್ಯಾಶ್‍ಲೆಸ್ ಮಂತ್ರ ಜಪಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಜನಸಾಮಾನ್ಯರು ಎರಡು ಸಾವಿರ ರೂಪಾಯಿಯ ನೋಟು ಹಿಡಿದುಕೊಂಡು ಚಿಲ್ಲರೆ ಹಣಕ್ಕಾಗಿ ನಗರ ಪ್ರದಕ್ಷಣೆ ಮಾಡುವ ಪರಿಸ್ಥಿತಿ ಎದುರಾಗಿದ್ದರೂ ಕೇಂದ್ರ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಬ್ಯಾಂಕುಗಳಿಗೆ ನಗದು ಹಣ ಪೂರೈಸದೇ ಜನಸಾಮಾನ್ಯರ ಜೊತೆ ಚಲ್ಲಾಟವಾಡುತ್ತಿದೆ ಎಂದು ಹೆಬ್ಬಾಳಕರ ಟೀಕಾಪ್ರಹಾರ ನಡೆಸಿದರು.
ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಸೇಠ್, ನಗರ ಸೇವಕಿ ಜಯಶ್ರೀ ಮಾಳಗಿ, ನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಹಿರೇಮಠ, ಲತಾ ಮಾನೆ, ಪುರಿಷಿದ್ ಮುಲ್ಲಾ, ಮೀನಾಕ್ಷೆ ಗಲಗಲಿ, ಲತಾ ಅನಸ್ಕರ, ಅಜುಂ ಸೇಖ್, ಆಯಿಷಾ ಸನದಿ, ಕಸ್ತೂರಿ ಪಾಟೀಲ, ಭುವನೇಶ್ವರಿ ಹಿರೇಮಠ ಸೇರಿದಂತೆ ನೂರಾರು ಜನ ಮಹಿಳೆರು ಭಾಗವಹಿಸಿದ್ದರು.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *