ಬೆಳಗಾವಿ- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಭಾ.ಆ.ಸೇ. ರವರು ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪಾಸ್ ಕೌಂಟರ್, ಪ್ರತಿಷ್ಟಿತ ಸಾರಿಗೆ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ನಿಯಂತ್ರಣ ಬಿಂದುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಮರ್ಪಕ ಸಾರಿಗೆ ಸೌಲಭ್ಯದ ಜೊತೆಗೆ ಬಸ್ ನಿಲ್ದಾಣದ ಸ್ವಚ್ಛತೆಗೆ ಹಾಗೂ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಬೆಳಗಾವಿ ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ಮಾಡಿದರು. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕಾಮಗಾರಿ ಕಾರ್ಯವನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ನಿರ್ವಹಿಸಲು ಸಂಸ್ಥೆಯ ಕಾಮಗಾರಿ ಅಧಿಕಾರಿಗಳಿಗೆ ಮತ್ತು ಕಾಮಗಾರಿ ಗುತ್ತಿಗೆದಾರರಿಗೆ ನಿರ್ದೇಶನಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಮಾರ್ಟ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸೈಯದ್ ಆಫ್ರಿನ್ ಭಾನು.ಎಸ್.ಬಳ್ಳಾರಿ ಕ.ಆ.ಸೇ, ರವರು ಹಾಗೂ ಸಂಸ್ಥೆಯ ಬೆಳಗಾವಿ ವಿಭಾಗದ ಮತ್ತು ಘಟಕದ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬೆಳಗಾವಿ-1 ನೇ ಸಾರಿಗೆ ಘಟಕಕ್ಕೆ ಭೇಟಿ ನೀಡಿ ಅನುಸೂಚಿಗಳ ಕಾರ್ಯಾಚರಣೆ ಹಾಗೂ ವಾಹನಗಳ ತಾಂತ್ರಿಕ ನಿರ್ವಹಣೆಯನ್ನು ಪರಿಶೀಲನೆ ಮಾಡಿ, ಈ ಭಾಗದ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಯಾವುದೇ ರೀತಿಯ ಅನಾನುಕೂಲತೆ ಆಗದಂತೆ ಸುಗಮ ಸಾರಿಗೆ ಕಾರ್ಯಾಚರಣೆ ಮಾಡಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು.