ಬೆಳಗಾವಿ
ಮದುವೆ ಸಮಾರಂಭಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಐದು ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳ ಜತೆ ಒಟ್ಟು 22 ಮಂದಿ ಗಾಯಗೊಂಡ ಘಟನೆ ನಗರದ ಹೊರವಲಯದ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ನಡೆದಿದೆ.
ಗೋಕಾಕ್ ತಾಲೂಕಿನ ಸಂಕನಕೇರಿ ಗ್ರಾಮದ ಸಿದ್ದಪ್ಪ ಮತ್ತು ಬಾಬಾಸಾಬ್ ಎನ್ನುವ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಊರಿನ ಐದು ತಿಂಗಳ ಮಗುವನ್ನು ಇಲ್ಲಿನ ವಿಜಯ ಆಸ್ಪತ್ರೆಗೆ ಹಾಗೂ ಉಳಿದವರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಅತಿಯಾದ ವೇಗದಿಂದ ಬಸ್ ಪಲ್ಪಿಯಾಗಿದ್ದು, ಘಟನೆ ನಡೆದ ತಕ್ಷಣ ಚಾಲಕ ಜುಲ್‍ಪುಕಾರ್ ಪರಾರಿಯಾಗಿದ್ದಾನೆ ಎಂದು ಗಾಯಾಳುಗಳು ಪೆÇಲೀಸರಿಗೆ ದೂರಿದ್ದಾರೆ.
ಬೆಳಗಾವಿಯಲ್ಲಿ ನಡೆಯಬೇಕಿದ್ದ ಮದುವೆಗೆ ಸಂಕನಕೇರಿಯ ಹುಡುಗನ ಸಂಬಂಧಿಕರು ನಾಲ್ಕು ಖಾಸಗಿ ಬಸ್‍ಗಳು ಹಾಗೂ ಕಾರುಗಳೊಂದಿಗೆ ಬರುತ್ತಿದ್ದರು. ವೇಗವಾಗಿ ಚಲಾಯಿಸುತ್ತಿದ್ದ ಬಸ್ ಚಾಲಕ ಎದುರಿನ ಟ್ರ್ಯಾಕ್ಟರ್ ಹಿಂದಿಕ್ಕಿ ಮುಂದೆ ಹೋಗಲು ಯತ್ನಿಸುವಾಗ ಬಸ್ ಎಡಕ್ಕೆ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಒಬ್ಬರ ಕಾಲು ಬಸ್‍ನ ಕೆಳಗೆ ಸಿಲುಕಿಕೊಂಡಿತ್ತು. ಬಳಿಕ ಅವರನ್ನು ರಕ್ಷಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಮಹಿಳೆಯರ ಗೋಳಾಟ:
ಬಸ್‍ನಲ್ಲಿ ಬೆರಳೆಣಿಕೆಯಷ್ಟು ಯುವಕರು ಬಿಟ್ಟರೆ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು. ಅವರೆಲ್ಲರಿಗೂ ತಲೆ, ಕೈ, ಕಾಲುಗಳಿಗೆ ಗಾಯವಾಗಿದ್ದು, ನೋವಿನಿಂದ ಗೋಳಾಡುತ್ತಿದ್ದರು. ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಅವರನ್ನೆಲ್ಲ ಸೇರಿಸಿದಾಗ ಇಡೀ ವಿಭಾಗ ಗಾಯಾಳುಗಳಿಂದ ತುಂಬಿ ಹೋಗಿತ್ತು. ಇರುವ ಬೆಡ್‍ಗಳು ಗಾಯಾಳುಗಳಿಗೆ ಸಾಲದೆ ಇದ್ದಾಗ ಕೆಲವರನ್ನು ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಕೋಣೆಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.