ಬೆಳಗಾವಿ: ಬೆಳಗಾವಿ ನಗರದಲ್ಲಿ ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಯಲಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಕಮಲದ ಕಂಪು ಹರಡಿದೆ.
ಎರಡುದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಗೆ ಬರುತ್ತಿರುವ ಬಿಜೆಪಿ ನಾಯಕರನ್ನು ಸ್ವಾಗತಿಸಲು ಜಿಲ್ಲೆಯ ಕಾರ್ಯಕರ್ತರು ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು, ಕಟೌಟ್, ಬ್ಯಾನರ್‍ಗಳನ್ನು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ, ಪ್ರಹ್ಲಾದ ಜೋಶಿ, ಜಗದಶ್ ಶೇಟ್ಟರ ಸೇರಿದಂತೆ ರಾಜ್ಯದ ಎಲ್ಲ ಬಿಜೆಪಿ ನಾಯಕರು ಮತ್ತು ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿಯ ಈ ಕಾರ್ಯಕಾರಿಣಿ ಸಭೆಯಲ್ಲಿ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ. ರೈತರ ಕಬ್ಬಿನ ಬಾಕಿ ಬಿಲ್, ಮಹದಾಯಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ನವೆಂಬರ್ ಮೊದಲ ವಾರದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಲು ತಂತ್ರ ಹೆಣೆಯುವ ಕಾರ್ಯ ಈ ಸಭೆಯಲ್ಲಿ ನಡೆಯಲಿದೆ.
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಬಿಜೆಪಿ ಟಿಕೇಟ್‍ಗಾಗಿ ಈಗಿನಿಂದಲೇ ಗುದ್ದಾಟ ಆರಂಭಿಸುವ ಆಕಾಂಕ್ಷಿಗಳು ತಮ್ಮ ನಾಯಕರ ದೊಡ್ಡ ಬ್ಯಾನರ್‍ಗಳನ್ನು ಅಳವಡಿಸಿ ಅವರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ.
ಒಟ್ಟಾರೆ ಬೆಳಗಾವಿ ನಗರ ಕಮಲಮಯವಾಗಿದ್ದು, ಕಾರ್ಯಕಾರಿಣಿ ಸಭೆ ಜಿಲ್ಲೆಯಲ್ಲಿ ಮಹತ್ವ ಪಡೆದುಕೊಳ್ಳಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡೂರಪ್ಪ ಅಕ್ಟೋಬರ್ ಎರಡರಂದು ಬೆಳಗಾವಿ ನಗರಕ್ಕೆ ಆಗಮಿಸಲಿದ್ದು ಅಂದು ಚನ್ನಮ್ಮ ಹಾಗು ಅಂಬೇಡ್ಕರ ಪುತ್ಥಳಿಗೆ ಪುಷ್ಪ ಗೌರವ ಸಲ್ಲಿಸಲಿದ್ದಾರೆ ಅದೇ ದಿನ ಅವರು ಗೊಡಚಿ ವೀರಭದ್ರೇಶ್ವರನ ಆಶಿರ್ವಾದ ಪಡೆದು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ