Breaking News
Home / Breaking News / ಬೆಳಗಾವಿ ನಗರದಲ್ಲಿ 1ಕೋಟಿ ರೂ ವೆಚ್ಚದಲ್ಲಿ ಹೊಸ ಪಿಶ್ ಮಾರ್ಕೆಟ್ ನಿರ್ಮಾಣ

ಬೆಳಗಾವಿ ನಗರದಲ್ಲಿ 1ಕೋಟಿ ರೂ ವೆಚ್ಚದಲ್ಲಿ ಹೊಸ ಪಿಶ್ ಮಾರ್ಕೆಟ್ ನಿರ್ಮಾಣ

ಬೆಳಗಾವಿ, ಫೆ.೨೫(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ‌ ಮೀನು ಬಿತ್ತನೆ ಹಾಗೂ ಆದಾಯ ಪ್ರಮಾಣ ಸೇರಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ‌ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಫೆ.೨೫) ನಡೆದ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷದ ಮೀನು ಉತ್ಪಾದನೆ ಪ್ರಮಾಣ, ಆದಾಯ ಮತ್ತು ಸರ್ಕಾರದ ಸೌಲಭ್ಯಗಳ ವಿತರಣೆ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಹೊಂದಿರಬೇಕು. ಹೀಗಿದ್ದಾಗ ಮಾತ್ರ ಲಭ್ಯವಿರುವ ಕೆರೆಗಳನ್ನು ಅರ್ಹ ಮೀನುಗಾರ ಕುಟುಂಬಗಳಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ.
ಸರ್ಕಾರದ ವತಿಯಿಂದ ಬಲೆ ಮತ್ತು ಹರಿಗೋಲು ವಿತರಣೆ ಮಾಡುವಾಗ ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಕೆಲಸ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಇರುವ ಅಧಿಕಾರಿಗಳು ಇಡೀ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸವನ್ನು ಮಾಡಬೇಕು.
ಸೌಲಭ್ಯಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಶಾಸಕರ ಸಮ್ಮುಖದಲ್ಲಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ಅಧಿಕಾರಿಗಳು ವಿಧಾನಸಭಾ ಕ್ಷೇತ್ರದ ಶಾಸಕರನ್ನು ಕಡ್ಡಾಯವಾಗಿ ಭೇಟಿ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದರು.
ಸೌಲಭ್ಯ ಹಂಚಿಕೆ ಹಾಗೂ ಗುರಿಸಾಧನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಕಂಡುಬಂದರೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

೨೨೦ ಕೆರೆಗಳಲ್ಲಿ ಮೀನು ಅಭಿವೃದ್ಧಿ ಕಾರ್ಯ ನಡೆದಿದ್ದು, ಇದರಲ್ಲಿ ೮೪ ಕೆರೆಗಳಲ್ಲಿ ಇಡೀ ವರ್ಷ ನೀರು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಮೀನಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿ ಒಂದು‌ ಸಂಘಕ್ಕೆ ಗರಿಷ್ಠ ಮೂರು‌ ಕೆರೆಗಳನ್ನು ಗುತ್ತಿಗೆ ನೀಡಬಹುದು ಎಂದು ವಿವರಿಸಿದರು.

ಅತಿಕ್ರಮಣ ತೆರವಿಗೆ ಸೂಚನೆ:

ರಾಯಬಾಗದಲ್ಲಿರುವ ಮೀನುಗಾರಿಕೆ ಇಲಾಖೆಯ ೨೦ ಗುಂಟೆ ಕಚೇರಿಯ ಆವರಣದಲ್ಲಿ ಕೆಲವರು ಅತಿಕ್ರಮ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಸಭೆಯಲ್ಲಿ ಸಚಿವರ ಎದುರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬಗ್ಗೆ‌ ಕೂಲಂಕುಶವಾಗಿ ಪರಿಶೀಲಿಸಿ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ಒಂದು ವೇಳೆ ಅತಿಕ್ರಮಣ ತೆರವುಗೊಳಿಸದಿದ್ದರೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಶ್ನಿಸುತ್ತೇನೆ ಎಂದು‌ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಇದಕ್ಕೆ ಉತ್ತರಿಸಿದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಕಟ್ಟಡ ಇರುವ ಜಾಗೆ ಮಾತ್ರ ಇಲಾಖೆಯ ಹೆಸರಿನಲ್ಲಿದೆ ಎಂದು ಮಾಹಿತಿಯನ್ನು ನೀಡಿದರು.
ಹಿಡಕಲ್ ಜಲಾಶಯದಲ್ಲಿ ಇಲಾಖೆಯ ವತಿಯಿಂದ ೯.೪೪ ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಮಲಪ್ರಭಾ ೪.೭೨ ಲಕ್ಷ ಮರಿಗಳನ್ನು ಬಿಡಲಾಗಿದೆ ಮಾರ್ಕಂಡೇಯ ಜಲಾಶಯದಲ್ಲಿ ೧.೪೪ ಲಕ್ಷ ಮರಿಗಳನ್ನು ಬಿಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಎಸ್.ವಿ.ಕುಲಕರ್ಣಿ ತಿಳಿಸಿದರು.
ಕೃಷಿಹೊಂಡದಲ್ಲಿ ಕೂಡ ಮೀನುಮರಿಗಳನ್ನು ಬಿಡಲು ಸರ್ಕಾರ ನಿರ್ದೇಶನ ನೀಡಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ನಗರದಲ್ಲಿ ಕನಿಷ್ಠ ಎರಡು ಸುಸಜ್ಜಿತವಾದ ಹೊಸ ಮೀನು ಮಾರುಕಟ್ಟೆ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.
ಅದೇ ರೀತಿ ಇಲಾಖೆಯ ಮತ್ಸ್ಯ ಮಾರಾಟ ಕೇಂದ್ರ ಆರಂಭಿಸಬೇಕು. ಇದಕ್ಕೆ ಅಗತ್ಯವಿರುವ ಜಾಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಬೇರೆ ಕಡೆ ಮಂಜೂರಾಗಿರುವ ಕಟ್ಟಡಗಳು ಇನ್ನೂ ಕೆಲಸ ಆರಂಭಗೊಳ್ಳದಿದ್ದರೆ ಆ ಯೋಜನೆಯಡಿ ಬೆಳಗಾವಿ ನಗರದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ಸ್ಥಾಪನೆಗೆ ಪ್ರಸ್ತಾವ ಕಳಿಸುವಂತೆ ಸಚಿವ ಪೂಜಾರಿ ಅವರಿಗೆb ಸೂಚನೆ ನೀಡಿದರು.

ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಇಲಾಖೆಯ ಅಧಿಕಾರಿಗಳು ಇದುವರೆಗೆ ಶಾಸಕರು ಅಥವಾ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ಅನಿಲ್ ಬೆನಕೆ, ದುರ್ಯೋಧನ ಐಹೊಳೆ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಉಪ ವಿಭಾಗಾಧಿಕಾರಿಗಳಾದ ಶಿವಾನಂದ‌ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ‌ ರವಿ ಕೋಟಾರಗಸ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
***

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *