Breaking News

ಬೆಳಗಾವಿಯಲ್ಲಿ ಭಾರತದ ಉಪರಾಷ್ಟ್ರಪತಿ ಹೇಳಿದ್ದೇನು ಗೊತ್ತಾ..??

ಪಾರಂಪರಿಕ ಔಷಧ ಪದ್ಧತಿ-ಹೆಚ್ಚಿನ ಸಂಶೋಧನೆಗೆ ಉಪ ರಾಷ್ಟ್ತಪತಿ ಜಗದೀಪ್ ಧನಕರ ಕರೆ

ಬೆಳಗಾವಿ, ಮೇ : ಪಾರಂಪರಿಕ ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದೇಶವನ್ನು ಮುಂಚೂಣಿಗೆ ಕರೆದೊಯ್ಯುವ ಹೊಣೆಗಾರಿಕೆ ವಿಜ್ಞಾನಿಗಳು/ಸಂಶೋಧಕರ‌ ಮೇಲಿದೆ. ಜೀವವೈವಿಧ್ಯ‌ವನ್ನು ಕಾಪಾಡುವ ಮೂಲಕ ಪಾರಂಪರಿಕ‌ ಔಷಧೀಯ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಘನತೆವೆತ್ತ ಉಪ ರಾಷ್ಟ್ರಪತಿಯವರಾದ ಜಗದೀಪ್ ಧನಕರ ಅವರು ಕರೆ ನೀಡಿದರು.

ನಗರದಲ್ಲಿ ಸೋಮವಾರ(ಮೇ 27) ನಡೆದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಧಾನ ಸಂಸ್ಥೆಯ 18 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಪ್ರತಿಯೊಬ್ಬರು ಪರಸ್ಪರ ಸಹಕರಿಸುವ ಮೂಲಕ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದು ಭಾರತೀಯ ಸಂಸ್ಕೃತಿಯಾಗಿದೆ ಎಂದರು.

ವಿಕಸಿತ ಭಾರತ-ಕನಸು ಸಾಕಾರಕ್ಕೆ ಕೈಜೋಡಿಸಿ:

ಕೋವಿಡ್ ಚಿಕಿತ್ಸೆ ಹಾಗೂ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಎಂಆರ್ ಕಾರ್ಯ ಅತ್ಯಂತ ಅಭಿನಂದನೀಯವಾಗಿದೆ.
ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯದ ಮೇಲೆಯೇ ದೇಶದ ಆರೋಗ್ಯ ಅವಲಂಬಿಸಿದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯ ಸದೃಢರಾಗುವ ಮೂಲಕ 2047 ರ ವೇಳೆಗೆ ವಿಕಸಿತ ಭಾರತ ಕನಸು ಸಾಕಾರಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಘನತೆವೆತ್ತ ಉಪ ರಾಷ್ಟ್ರಪತಿಯವರಾದ ಜಗದೀಪ್ ಧನಕರ ಅವರು ಕರೆ ನೀಡಿದರು.

ಭಾರತದ ಆರ್ಥಿಕತೆಯು ಒಂದು ಕಾಲದಲ್ಲಿ ಲಂಡನ್ ಹಾಗೂ ಪ್ಯಾರಿಸ್ ಗಿಂತ ಕಡಿಮೆ ಇತ್ತು. ಈಗ ಜಗತ್ತಿನ ಐದನೇ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶವು ರೂಪುಗೊಂಡಿದೆ.

ಐಸಿಎಂಆರ್-ಎನ್ಐಟಿಎಂ ಕಾರ್ಯ ಶ್ಲಾಘನೀಯ:

ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ, ಯೋಗ ಒಳಗೊಂಡ ಆಯುಷ್ ಪದ್ಧತಿ ಭಾರತದ ಹೆಗ್ಗಳಿಕೆಯಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಪಾರಂಪರಿಕ‌ ಔಷಧ ಚಿಕಿತ್ಸಾ ವಿಧಾನದ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟ ಉಪ ರಾಷ್ಟ್ರಪತಿ ಜಗದೀಪ್ ಧನಕರ ಅವರು, ಈ ನಿಟ್ಟಿನಲ್ಲಿ ಐಸಿಎಂಆರ್-ಎನ್ಐಟಿಎಂ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಬೆಳಗಾವಿಯಲ್ಲಿರುವ ಎನ್ಐಟಿಎಂ ಸಂಸ್ಥೆಯ 18 ನೇ ಸಂಸ್ಥಾಪನಾ ದಿನವು ಅತ್ಯಂತ ಸ್ಮರಣೀಯವಾಗಿದೆ. ಹದಿನೆಂಟರ ಪ್ರಾಯವು ವ್ಯಕ್ತಿಜೀವನದಲ್ಲಿ ಮಹತ್ತರ ಘಟ್ಟವಾಗಿದೆ. ಅದೇ ರೀತಿಯಲ್ಲಿ ಸಂಸ್ಥೆಯ ಸಾಧನೆಗೂ ಕೂಡ ಸಕಾಲವಾಗಿದೆ. ಇಂತಹ ಸುಸಂದರ್ಭದಲ್ಲಿ ಎನ್ಐಟಿಎಂ ಸಂಸ್ಥೆಯ ಸಂಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿರುವುದು ಸುದೈವ ಎಂದು ಉಪ ರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದರು.

ಪಾರಂಪರಿಕ ಔಷಧ-ಸಂಶೋಧನೆ ಸವಾಲು:

ಡಯಾಬಿಟಿಸ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪಾರಂಪರಿಕ ಔಷಧ ಕಂಡುಹಿಡಿಯುವುದು ಸವಾಲಾಗಿದೆ. ವಿಜ್ಞಾನಿಗಳು ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸುವ ಮೂಲಕ ಮಾನವ ಸಂಕುಲದ ಹಿತರಕ್ಷಿಸಬೇಕು ಎಂದು ಕರೆ ನೀಡಿದರು.

ದೇಶದ ಆಯುಷ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿದೆ.
ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಯು ದೇಶದ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ.

ಹೊಸ ಬಗೆಯ ಕಾಯಿಲೆಗಳು ಕಂಡುಬರುತ್ತಿವೆ. ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಸಂವಹನವು ಸಮಾಜವನ್ನು ಆರೋಗ್ಯಯುತವಾಗಿರಿಸಲು ಉತ್ತಮ ಸಾಧನವಾಗಿದ್ದು. ಇದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸರಕಾರದ ವೈದ್ಯಕೀಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾದ ಡಾ.ರಾಜೀವ್ ಬಹಲ್ ಅವರು, ಐಸಿಎಂಆರ್ ನ 27 ಸಂಶೋಧನಾ ಸಂಸ್ಥೆಗಳಲ್ಲಿ ಭಾರತೀಯ ಪಾರಂಪರಿಕ ಚಿಕಿತ್ಸಾ ವಿಧಾನ ಸಂಸ್ಥೆಯು ಒಂದಾಗಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಐಸಿಎಂ ಆರ್ ಪಾತ್ರ ಪ್ರಮುಖವಾಗಿದೆ. ಪಾರಂಪರಿಕ ಔಷಧ ವಿಜ್ಞಾನ ಸಂಸ್ಥೆಯು ಆಧುನಿಕ ತಂತ್ರಜ್ಞಾನಗಳ ಮೂಲಕ ಪಾರಂಪರಿಕ ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುತ್ತಿದೆ.
ಪಶ್ಚಿಮ ಘಟ್ಟದಲ್ಲಿರುವ ಔಷಧೀಯ ಸಸ್ಯಸಂಕುಲಗಳ ಅಧ್ಯಯನ ನಡೆಸುವ ಮೂಲಕ ಗಿಡಮೂಲಿಕೆ ಔಷಧಿ ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಘನತೆವೆತ್ತ ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಶ್ರೀಮತಿ ಡಾ.ಸುದೇಶ ಧನಕರ, ಬೆಳಗಾವಿಯ ಐಸಿಎಂಆರ್-ಎನ್.ಐ.ಟಿ.ಎಂ. ನಿರ್ದೇಶಕರಾದ ಡಾ.ಸುಬರ್ಣ ರಾಯ್ ಉಪಸ್ಥಿತರಿದ್ದರು.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಂಟಿ‌ ಕಾರ್ಯದರ್ಶಿ ಶ್ರೀಮತಿ ಅನು ನಾಗರ ಅವರು ಸ್ವಾಗತಿಸಿದರು.ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಐಸಿಎಂಆರ್-ಎನ್ಐಟಿಎಂ ವಿಜ್ಞಾನಿಗಳು, ಸಂಶೋಧಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
****

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *