ಬೆಳಗಾವಿ-ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಸ್ಥಗತಗೊಳಿಸದಂತೆ ಸಂಸದೆ ಪ್ರಿಯಂಕಾ ಮನವಿ
ಬೆಳಗಾವಿ: ಬೆಳಗಾವಿ -ಬೆಂಗಳೂರು ಮಾರ್ಗವಾಗಿ ಪ್ರತಿದಿನ ಬೆಳಗ್ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಸಂಚಾರ ಸ್ಥಗತಗೊಳಿಸದಂತೆ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಪ್ರಯಾಣಿಕರ ದಟ್ಟಣೆಯ ನಡುವೆಯೂ, ಬೆಳಗಾವಿ-ಬೆಂಗಳೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ( ನಂ. 6ಇ 7285/7286 ) ತನ್ನ ಹಾರಾಟವನ್ನು ಅ. 27ರಿಂದ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ತಿಳಿದುಬಂದಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ರಾಜಧಾನಿಗೆ ತೆರಳಿ ಒಂದೇ ದಿನದಲ್ಲಿ ತುರ್ತು ಕೆಲಸ ಮುಗಿಸಿಕೊಂಡು ವಾಪಸ್ಸಾಗಲು ಆಸರೆಯಾಗಿದ್ದ, ಬೆಳಗಾವಿ-ಬೆಂಗಳೂರು ನಡುವಿನ ನೇರ ಇಂಡಿಗೋ ವಿಮಾನಯಾನ ಸ್ಥಗಿತಗೊಂಡರೆ ಈ ಭಾಗದ ವಾಣಿಜ್ಯೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಂಚಾರ ಸ್ಥಗಿತಗೊಳಿಸದೇ ಮುಂದುವರಿಸಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ ಬೆಂಗಳೂರಿಗೆ ಹೋಗಿ ಅಲ್ಲಿಂದ ಅಂತರ ರಾಷ್ಟ್ರೀಯ ವಿಮಾನ ಸಂಪರ್ಕ ಸಾಧಿಸಲು ಈ ವಿಮಾನದಿಂದ ಅನುಕೂಲವಾಗಿತ್ತು. ಎರಡು ವರ್ಷಗಳಿಂದ ಪ್ರತಿದಿನ ಶೇಕಡ 85ರಷ್ಟು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅದರ ಜೊತೆಗೆ ಕರ್ನಾಟಕ ಸರ್ಕಾರವು ಪ್ರತಿ ವರ್ಷ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಬೆಳಗಾವಿ ನಗರದಲ್ಲಿ ಆಯೋಜಿಸುತ್ತಿದೆ. ಅಲ್ಲಿ ಎಲ್ಲಾ ಸಚಿವರು, ಶಾಸಕರು ಮತ್ತು ಎಂಎಲ್‌ಸಿಗಳು, ರಾಜಕೀಯ ನಾಯಕರು ಮತ್ತು ಉನ್ನತ ವರ್ಗದ ಕಚೇರಿ ಹಾಗೂ ಅಧಿಕಾರಿಗಳು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಅದರ ಜೊತೆಗೆ ವಿದ್ಯಾರ್ಥಿಗಳಿಂದಲೂ ಭಾರಿ ಬೇಡಿಕೆಯಿದೆ. ಅಲ್ಲದೇ ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ್‌ನ ರಕ್ಷಣಾ ಅಧಿಕಾರಿಗಳು ಮತ್ತು ಉದ್ಯಮಿಗಳು ಈ ವಿಮಾನ ಸೇವೆಯನ್ನು ಮುಂದುವರಿಸಲು ವಿನಂತಿಸುತ್ತಿದ್ದಾರೆ. ಆದ್ದರಿಂದ ಇಂಡಿಗೋ ವಿಮಾನ ಸಂಚಾರ ಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರು ಕ್ರಮ ಕೈಗೊಳ್ಳಬೇಕೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಗೋವಾ, ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಸಾಧಿಸಲು ಇಂಡಿಗೋ ವಿಮಾನ ಅತ್ಯಂತ ಅನುಕೂಲವಾಗಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಪ್ರತಿದಿನ ಶೇ.85 ರಷ್ಟು ಪ್ರಯಾಣಿಕರು ಬೆಳಗ್ಗೆಯ ವಿಮಾನದಲ್ಲಿ ಸಂಚರಿಸುತ್ತಿದ್ದರು. ಆದರೂ, ಇದೀಗ ಇಂಡಿಗೋ ವಿಮಾನ ಹಾರಾಟವನ್ನು ಅ. 27ರಿಂದ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ತಿಳಿದ್ದು, ಕೂಡಲೇ ನಿರ್ಧಾರವನ್ನು ಕೈಬಿಟ್ಟು ಪ್ರಯಾಣಿಕರ ಹಿತದೃಷ್ಟಿಯಿಂದ ಇಂಡಿಗೋ ವಿಮಾನ ಸಂಚಾರ ಯಥಾಸ್ಥಿತಿ ಸಂಚಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.