Breaking News

ಬೆಳಗಾವಿಯಲ್ಲಿ ಪೂರ್ಣಾವಧಿ ಅಧಿವೇಶನ ಜರುಗಲಿ ಡಾ. ಪ್ರಭಾಕರ್ ಕೋರೆ

ಬೆಳಗಾವಿ-ಡಿಸೆಂಬರದಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನವು ಪೂರ್ಣಾವಧಿಯ ಅಧಿವೇಶನವಾದರೆ ಅದಕ್ಕೆ ಅರ್ಥ ಬರುತ್ತದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಅಡಿಪಾಯ ಹಾಕಿದ ಕೆಎಲ್ ಇ ಸಂಸ್ಥೆಯ ಮೂಲ ಉದ್ದೇಶ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವುದಾಗಿತ್ತು. ಆದರೆ ಒಂದು ದಶಕಕ್ಕೂ ಅಧಿಕ ಕಾಲದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಸಮಸ್ಯೆಗಳ ಪರಿಹಾರ ಮಾತ್ರ ಶೂನ್ಯ. ಆದ್ದರಿಂದ ಒಂದು ತಿಂಗಳ ಕಾಲ ಪೂರ್ಣ ಪ್ರಮಾಣದ ಅಧಿವೇಶನ ನಡೆಸುವದರೊಂದಿಗೆ ಈ ಭಾಗದ ಸಮಸ್ಯೆಗಳ ಸಂಪೂರ್ಣ ಚರ್ಚೆಯಾಗಬೇಕು. ಕೇವಲ ಪ್ರತಿಭಟನೆ ಹೋರಾಟಕ್ಕೆ ಸೀಮಿತಗೊಳಿಸದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಯ ಕನಸು ಇಟ್ಟುಕೊಂಡು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು 2012ರಲ್ಲಿ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಯಿತು. ಆತ್ಮವಲೋಕನವನ್ನು ಮಾಡಿಕೊಂಡರೆ ನಮ್ಮ ಸಾಧನೆ ಶೂನ್ಯವೆನಿಸುತ್ತಿದೆ. ಪ್ರತಿ ವರ್ಷ ಕೇವಲ 10 ದಿನಗಳ ಕಾಟಾಚಾರದ ಅಧಿವೇಶನವನ್ನು ಜರುಗಿಸುವ ಮೂಲಕ ಜನರ ಭಾವನೆಗಳಿಗೆ ತಣ್ಣೀರ್ ಎರಚಲಾಗಿದೆ. ಮಾತ್ರವಲ್ಲದೆ ಬೆಳಗಾವಿ ಅಧಿವೇಶನ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಅಧಿವೇಶನವು ವ್ಯಾಖ್ಯಾನವಾಗಬೇಕಾಗಿತ್ತು. ಆದರೆ ದಶಕಗಳಾದರೂ ಯಾವೊಂದು ಅಧಿವೇಶನವೂ ಕೂಡ ಯಶಸ್ಸನ್ನು ಪಡೆದುಕೊಳ್ಳದೆ ಇರುವುದು ದುರ್ದೈವದ ಸಂಗತಿ. ಬೆಳಗಾವಿಯ ಸುವರ್ಣ ವಿಧಾನಸೌಧದ ನಿರ್ಮಾಣದ ಹಿಂದೆ ಶಾಸಕರ ಭವನಗಳನ್ನು ನಿರ್ಮಿಸಬೇಕೆಂಬುದು ಈ ಭಾಗದ ಜನತೆಯ ಒತ್ತಾಸೆಯಾಗಿತ್ತು. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ಶಾಸಕರು 10 ದಿನಗಳ ಕಾಲಹರಣವನ್ನ ಮಾಡುವುದರ ಮೂಲಕ ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪೂರ್ಣಾವಧಿಯ ಅಧಿವೇಶನ ಜರುಗಬೇಕೆಂಬುವುದು ಈ ಭಾಗದ ಜನತೆಯ ಧ್ವನಿಯಾಗಿದೆ .

ಶಾಸಕರ ಭವನಗಳನ್ನು ನಿರ್ಮಿಸಿ ಸಿಬ್ಬಂದಿ ವರ್ಗದವರಿಗೆ ಸೂಕ್ತವಾದ ವಸತಿ ಸೌಕರ್ಯಗಳನ್ನು ಮಾಡಿ ದೀರ್ಘಾವಧಿಯ ಅಧಿವೇಶನಗಳನ್ನು ಜರಗಿಸಿದರೆ ಬೆಳಗಾವಿ ಅಧಿವೇಶನ ಸಫಲಗೊಳ್ಳಲು ಸಾಧ್ಯ. ಪಕ್ಷಭೇದಗಳನ್ನು ತೊಡೆದು ಹಾಕಿ ಪೂರ್ಣಾವಧಿಯ ಅಧಿವೇಶನಗಳನ್ನು ಸಂಘಟಿಸಿ ಈ ಭಾಗದ ರೈತರ ಕಾರ್ಮಿಕರ ಮೂಲಭೂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೆಲಸ ಈಗಲಾದರೂ ನಡೆಯಬೇಕಾಗಿದೆ. ಇಲ್ಲದಿದ್ದರೆ ಅಧಿವೇಶನ ದುಂದು ವೆಚ್ಚದ, ಕಾಟಾಚಾರದ , ಮೋಜು ಮಸ್ತಿಯ ಕ್ರೀಡೆಯಾಗುವುದರಲ್ಲಿ ಯಾವ ಅರ್ಥವೂ ಇಲ್ಲ. ಬಹಳಷ್ಟು ಹೋರಾಟಗಳ ಪ್ರತಿಫಲವಾಗಿ ರೂಪಗೊಂಡಿರುವ ಬೆಳಗಾವಿ ಸುವರ್ಣ ವಿಧಾನ ಸೌಧ ಉತ್ತರ ಕರ್ನಾಟಕದ ಧ್ವನಿಯಾಗಿ ಇಲ್ಲಿಯ ಸಮಸ್ಯೆಗಳನ್ನ ಬಗೆಹರಿಸುವ ಕಾರ್ಯವನ್ನು ಕೈಗೊಳ್ಳಲಿ ಎಂದು ಡಾ. ಪ್ರಭಾಕರ ಕೋರೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *