Breaking News
Home / Breaking News / ಬೆಳಗಾವಿ ಜಿಲ್ಲೆಯಲ್ಲಿ 82.70 ರಷ್ಟು ಭರ್ಜರಿ ಮತದಾನ

ಬೆಳಗಾವಿ ಜಿಲ್ಲೆಯಲ್ಲಿ 82.70 ರಷ್ಟು ಭರ್ಜರಿ ಮತದಾನ

ಗ್ರಾಮ ಪಂಚಾಯತಿ ಚುನಾವಣೆ; ಮತದಾನ ಶಾಂತಿಯುತ
———————————————————-
ಜಿಲ್ಲೆಯಲ್ಲಿ ಮೊದಲ‌ ಹಂತದಲ್ಲಿ ಶೇ.82.70 ಮತದಾನ

ಬೆಳಗಾವಿ, ): ಗ್ರಾಮ ಪಂಚಾಯತಿ ಮೊದಲ ಹಂತದ ಚುನಾವಣೆ ಮಂಗಳವಾರ (ಡಿ.22) ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಯಿತು.

ಮೊದಲ‌ ಹಂತದಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು.
ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು.

ಒಟ್ಟಾರೆ ಶೇ.82.70 ಮತದಾನ:

ಏಳು ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ. 82.70 ರಷ್ಟು ಮತದಾನವಾಗಿರುತ್ತದೆ.

ಎರಡು ಹಂತಗಳಲ್ಲಿ ಜಿಲ್ಲೆಯ ಒಟ್ಟು ಒಟ್ಟು 477 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಏಳು ತಾಲ್ಲೂಕುಗಳ 259 ಗ್ರಾಮ ಪಂಚಾಯಿತಿಗಳ ಮತದಾನ ನಡೆಯಿತು.

259 ಗ್ರಾಮ ಪಂಚಾಯತಿಯ ಒಟ್ಟು 4259 ಸ್ಥಾನಗಳ ಪೈಕಿ 437 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, 14 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ಉಳಿದ 3808 ಸ್ಥಾನಗಳಿಗಾಗಿ ಮೊದಲ ಹಂತದಲ್ಲಿ ಮತದಾನ ನಡೆಯಿತು.
3808 ಸ್ಥಾನಗಳಿಗೆ ಒಟ್ಟು 11256 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳಗಾವಿಯಲ್ಲೇ ಅತೀ ಹೆಚ್ಚು ಮತದಾನ:

ಮೊದಲ ಹಂತದಲ್ಲಿ ಏಳು ತಾಲ್ಲೂಕುಗಳಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಬೆಳಗಾವಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ ಶೇ.86.60 ರಷ್ಟು ಮತದಾನವಾಗಿದೆ.
ಗೋಕಾಕ ತಾಲ್ಲೂಕಿನಲ್ಲಿ ಕಡಿಮೆ‌ ಅಂದರೆ ಶೇ.79.17 ರಷ್ಟು ಮತದಾನವಾಗಿದೆ.

ಬೆಳಗಾವಿ (ಶೇ.86.60); ಖಾನಾಪುರ (ಶೇ.79.21); ಹುಕ್ಕೇರಿ(ಶೇ.84.25); ಬೈಲಹೊಂಗಲ(ಶೇ.80); ಕಿತ್ತೂರು(ಶೇ.84.42); ಗೋಕಾಕ (ಶೇ.79.17) ಮತ್ತು ಮೂಡಲಗಿ(ಶೇ.82.21) ಮತದಾನವಾಗಿರುತ್ತದೆ.

ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ:

ಮತದಾನ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕಾಕತಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ ಎಂದು ತಿಳಿಸಿದರು.

ಅದೇ ರೀತಿ ಎರಡನೆಯ ಹಂತದ ಮತದಾನಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಬೆಳಿಗ್ಗೆಯಿಂದಲೇ ಮತದಾನ ಚುರುಕಾಗಿತ್ತು. ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.7.22 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

9 ರಿಂದ 11 ಗಂಟೆಯ ಅವಧಿಯಲ್ಲಿ ಒಟ್ಟಾರೆ ಶೇ.18.44 ರಷ್ಟಾಗಿದ್ದ ಮತದಾನ ಪ್ರಮಾಣವು ಮಧ್ಯಾಹ್ನ 1 ಗಂಟೆಯ ವೇಳೆಗೆ 33.4 ಕ್ಕೆ ಏರಿಕೆಯಾಯಿತು.

ಹೀಗೆ ಬಿರುಸಿನಿಂದ ನಡೆದ ಮತದಾನವು ಮಧ್ಯಾಹ್ನ 3 ಗಂಟೆಯ ವೇಳೆಗೆ 58.77 ರಷ್ಟಾಯಿತು. ಸಂಜೆ 5 ಗಂಟೆಗೆ ಮತದಾನ ಕೊನೆಗೊಂಡಾಗ ಏಳು ತಾಲ್ಲೂಕುಗಳಲ್ಲಿ ಒಟ್ಟಾರೆ ಶೇ.82.70 ರಷ್ಟು ಮತದಾನ ದಾಖಲಾಯಿತು.
ಉಳಿದ ಏಳು ತಾಲ್ಲೂಕುಗಳಲ್ಲಿ ಎರಡನೇ ಹಂತದಲ್ಲಿ ಡಿ.27 ರಂದು ಮತದಾನ ನಡೆಯಲಿದ್ದು, ಡಿ.30 ರಂದು ಫಲಿತಾಂಶ ಪ್ರಕಟವಾಗಲಿದೆ.
******

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *