ಬೆಳಗಾವಿ-ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ಪ್ರಗತಿಯಲ್ಲಿದ್ದು ಈ ಬಸ್ ನಿಲ್ಧಾಣಕ್ಕೆ ಮೊದಲು ರಾಣಿ ಚೆನ್ನಮ್ಮನ ಹೆಸರು ನಾಮಕರಣ ಮಾಡಿದ ಬಳಿಕವೇ ಈ ಹೈಟೆಕ್ ಬಸ್ ನಿಲ್ಧಾಣವನ್ನು ಉದ್ಘಾಟನೆ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಶ್ರೀನಿವಾಸ ತಾಳೂರಕರ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಧುರೀಣರು ಲಕ್ಷ್ಮಣ ಸವದಿ ಅವರನ್ನು ಸತ್ಕರಿಸಿದ ಸಂಧರ್ಭದಲ್ಲಿ ಸಚಿವರು ಈ ರೀತಿ ಭರವಸೆ ನೀಡಿದರು.
ಇದಾದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಮ್ಮ ನೆಲದಲ್ಲಿ ನಾವು ಕನ್ನಡ ಧ್ವಜ ಹಾರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಕನ್ನಡಕ್ಕೆ ದಕ್ಕೆ ಬರುವ ರೀತಿಯಲ್ಲಿ ಯಾರೇ ವರ್ತಿಸಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು ಎಂದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಮಹಾನಗರ ಪಾಲಿಕೆ ಕರ್ನಾಟಕದ ಸ್ವತ್ತು. ಅಲ್ಲಿ ಕನ್ನಡ ಧ್ವಜ ಹಾರುತ್ತಿದೆ ಹೊರತು ಬೇರೆ ಧ್ವಜ ಅಲ್ಲ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಯಾರ ಅನುಮತಿ ಬೇಕಾಗಿಲ್ಲ. ಧ್ವಜ ತೆರವಿಗೆ ಗಡುವು ನೀಡುವವರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ದುರ್ವರ್ತನೆ ಮಾಡಿದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ಕೋವೀಡ್ ನಿಂದಾಗಿ ವಿಳಂಬವಾಗಿದೆ,ಎಪ್ರೀಲ್ ಒಳಗಾಗಿ ಕಾಮಗಾರಿ ಮುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇವೆ.ಜನವರಿ 20 ಎಂದು ಸಭೆ ಕರೆದು ಮತ್ತೊಮ್ಮೆ ಗುತ್ತಿಗೆದಾರನಿಗೆ ತಾಕೀತು ಮಾಡುತ್ತೇವೆ.ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರನಿಗೆ ಪೆನಾಲ್ಟಿ ಹಾಕುತ್ತೇವೆ ಎಂದು ಡಿಸಿಎಂ ಸವದಿ ಎಚ್ಚರಿಕೆ ನೀಡಿದರು.
ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ರಾಜ್ಯದ ಯಾವ ಮೂಲೆಯಲ್ಲಿದ್ದರೂ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಜವಾಬ್ದಾರಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮಾಡಲಿದ್ದಾರೆ. ಸಾರಿಗೆ ಸಿಬ್ಬಂದಿ ಬೇಡಿಕೆಗಳ ವಿಷಯವಾಗಿ ಅವರ ಒಂಬತ್ತು ಬೇಡಿಕೆ ಈಡೇರಿಸಿದ್ದೇವೆ. ಇನ್ನೊಂದು ಸುತ್ತಿನ ಮಾತುಕತೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಿಸಿಎಂ ಸವದಿ ಹೇಳಿದರು.
ಈಚೆಗೆ ನಿಧನರಾದ ಬೆಳಗಾವಿಯ ಬಿಜೆಪಿ ಮುಖಂಡ ರಾಜು ಚಿಕ್ಕನಗೌಡರ ಸಾವಿನ ವಿಷಯದಲ್ಲಿ ಅನುಮಾನದ ಮಾತುಗಳು ಕೇಳಿಬರುತ್ತಿವೆ. ಈ ವಿಷಯದಲ್ಲಿ ಅವಶ್ಯಕತೆ ಇದ್ದರೆ ತನಿಖೆ ಕೈಗೊಳ್ಳಲಾಗುವುದು ಎಂದು ಸಚಿವ ಸವದಿ ಹೇಳಿದರು.
ಯುವರಾಜಸ್ವಾಮಿಗೂ ಬಿಜೆಪಿಗೂ ಸಂಬಂಧವಿಲ್ಲ. ಮಂಗಳೂರಿನಲ್ಲಿ ಮಠವೊಂದಕ್ಕೆ ಸ್ವಾಮಿ ಆಗಿದ್ದ ಅವರು ಆರ್.ಎಸ್.ಎಸ್. ಸಂಪರ್ಕ ಇದೆ ಎಂದು ಹಲವರಿಗೆ ಮೋಸ ಮಾಡಿರುವ ಮಾಹಿತಿ ಇದೆ.
ಈ ಕುರಿತು ಸಿಎಂ ಮತ್ತು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.