Breaking News
Home / Breaking News / ಗಡಿನಾಡಿನಲ್ಲಿ , ಮತ್ತೆ ಬಾಲ ಬಿಚ್ವಿದ ಕಂಗಾಲ್ ಕಂಪನಿ…!!

ಗಡಿನಾಡಿನಲ್ಲಿ , ಮತ್ತೆ ಬಾಲ ಬಿಚ್ವಿದ ಕಂಗಾಲ್ ಕಂಪನಿ…!!

ಬೆಳಗಾವಿ-ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರಿಗೆ ಎಲ್ಲ ರೀತಿಯ ಸವಲತ್ತು ನೀಡಿದ್ರೂ ನಾಡದ್ರೋಹಿ ಎಂಈಎಸ್ ಗಡಿಯಲ್ಲಿ ಪುಂಡಾಟಿಕೆ ನಿಲ್ಲಿಸುತ್ತಿಲ್ಲ,ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ಅದು ತಿಪ್ಪೆ ಸವರುವದನ್ನು ಬಿಡೋದಿಲ್ಲ ಎನ್ಮುವಂತೆ ಎಂಈಎಸ್ ಮತ್ತು ಶಿವಸೇನೆಯ ಕಿತಾಪತಿ ಮುಂದುವರೆದಿದೆ,ಈ ನಾಡದ್ರೋಹಿಗಳು ಮತ್ತೆ ಬಾಲ ಬಿಚ್ಚಿದ್ದಾರೆ.

ಕಾಲು ಕೆರೆದು ಜಗಳಕ್ಕೆ ಬರ್ತಿರುವ ಎಂಇಎಸ್, ಶಿವಸೇನೆ ಪುಂಡರು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಇಂದೂ ಸಹ ಪುಂಡಾಟಿಕೆ ಪ್ರದರ್ಶಿಸಿದರು‌. ಮನವಿ ಸ್ವೀಕರಿಸಲು ಬಂದ ಡಿಸಿ ಎದುರೇ ಉದ್ಧಟತನ ಪ್ರದರ್ಶಿಸಿದ ಪ್ರಸಂಗ ನಡೆಯಿತು.

ನಿಪ್ಪಾಣಿ ಗಡಿಯಲ್ಲಿ ಮಹಾರಾಷ್ಟ್ರ ಶಿವಸೇನೆ ಪುಂಡರು ಪುಂಡಾಟಿಕೆ ಮೆರೆದರು.ಕುಗನೋಳಿ ಚಕ್ ಪೋಸ್ಟ್ ಬಳಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿ ಪ್ರವೇಶ ಮಾಡಲು ಯತ್ನಿಸಿದರು.ಬೆಳಗಾವಿ ಮಹಾನಗರ ಪಾಲಿಕೆ ಎದುರುಗಿನ ಕನ್ನಡ ಧ್ಚಜ ತೆರವಿಗೆ ಆಗ್ರಹ ಮಾಡುವ ಮೂಲಕ ಕನ್ನಡ ನೆಲದಲ್ಲೇ ನಿಂತು ಕನ್ನಡ ಧ್ವಜ ತೆರವು ಮಾಡುವಂತೆ ಆಗ್ರಹಿಸುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಸವಾಲ್ ಹಾಕಿದ್ರು..

ಬೆಳಗಾವಿ ಮಹಾನಗರ ಪಾಲಿಕೆ ಎದುರಿರುವ ಕನ್ನಡ ಧ್ಚಜ ತೆರವಿಗೆ ಆಗ್ರಹಿಸಿ ಇಂದು ಎಂಇಎಸ್ ಹಾಗೂ ಶಿವಸೇನೆ ಪುಂಡರು ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಿದ್ರು‌. ಎಂಇಎಸ್ ಪ್ರತಿಭಟನೆಯಲ್ಲಿ ಭಾಗಿಯಾಗ್ತೇವೆ ಎಂದಿದ್ದ ಮಹಾರಾಷ್ಟ್ರದ ಕೊಲ್ಲಾಪುರದ ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ದೇವಣೆ ಸೇರಿ ಇತರರಿಗೆ ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇದರ ಮಧ್ಯೆಯೂ ಕರ್ನಾಟಕ ಮಹಾರಾಷ್ಟ್ರ ಗಡಿಯಾದ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ನೂರಾರು ಶಿವಸೇನೆ ಗೂಂಡಾಗಳು ಗಡಿ ಪ್ರವೇಶಕ್ಕೆ ಯತ್ನಿಸಿದರು. ಗಡಿ ಪ್ರವೇಶಕ್ಕೆ ನಿಷೇಧ ಹೇರಿ ಹೊರಡಿಸಿದ್ದ ಆದೇಶ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುಂಡಾಟಿಕೆ ಪ್ರದರ್ಶಿಸುತ್ತಿದ್ದ ಶಿವಸೇನೆ ಗೂಂಡಾಗಳು ಕರ್ನಾಟಕ ಪ್ರವೇಶಿಸದಂತೆ ತಡೆ ಹೇರಿದ್ರು. ಬಳಿಕ ಮಹಾರಾಷ್ಟ್ರ ಪೊಲೀಸರು ಶಿವಸೇನಾ ಗೂಂಡಾಗಳನ್ನು ವಶಕ್ಕೆ ಪಡೆದು ಕರೆದೊಯ್ದರು.

ಇತ್ತ ಬೆಳಗಾವಿ ನಗರದ ಸಂಭಾಜಿ ವೃತ್ತದಲ್ಲಿ ಜಮಾವಣೆಗೊಂಡ ಎಂಇಎಸ್ ಶಿವಸೇನೆ ಪುಂಡರು ಸರ್ದಾರ್ ಮೈದಾನ ಮಾರ್ಗವಾಗಿ ಮಹಾನಗರ ಪಾಲಿಕೆಯತ್ತ ಮೆರವಣಿಗೆ ಹೊರಟ್ರು. ಈ ವೇಳೆ ಬೆಳಗಾವಿ, ಕಾರವಾರ ನಿಪ್ಪಾಣಿ ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಲೇಬೇಕು ಅಂತಾ ನಾಡದ್ರೋಹಿ ಘೋಷಣೆ ಕೂಗಿದ್ರು. ಸರ್ದಾರ್ ಮೈದಾನ ಬಳಿ ಪ್ರತಿಭಟನಾ ಮೆರವಣಿಗೆ ಬರುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದ್ರು. ಈ ವೇಳೆ ಪ್ರತಿಭಟನಾ ನಿರತರ ಮನವಿ ಆಲಿಸಲು ಬಂದ ಡಿಸಿ ಎಂ.ಜಿ.ಹಿರೇಮಠಗೆ ಎಂಇಎಸ್ ಪುಂಡರು ಅಗೌರವ ತೋರಿದ್ರು. ಮನವಿ ಸ್ವೀಕರಿಸಿ ಕನ್ನಡದಲ್ಲಿ ಡಿಸಿ ಎಂ.ಜಿ.ಹಿರೇಮಠ ಮಾತನಾಡಲು ಶುರು ಮಾಡುತ್ತಿದ್ದಂತೆ ಹಿಂದಿ ಇಲ್ಲವೇ ಮರಾಠಿಯಲ್ಲಿ ಮಾತನಾಡುವಂತೆ ಘೋಷಣೆ ಕೂಗಿದ್ರು. ಬಳಿಕ ಹಿಂದಿ ಭಾಷೆಯಲ್ಲಿ ಮಾತನಾಡಿದ ಡಿಸಿ ಎಂ.ಜಿ.ಹಿರೇಮಠ ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಸಹೋದರರಂತೆ ಸಹಬಾಳ್ವೆ ಮಾಡುತ್ತಿದ್ದಾರೆ. ಪಾಲಿಕೆ ಎದುರಿರುವ ಕನ್ನಡ ಧ್ವಜ ವಿಚಾರ ಕನ್ನಡ ಸಂಘಟನೆಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದರು.

ಒಂದೆಡೆ ಸರ್ದಾರ್ ಮೈದಾನದ ಬಳಿ ಕಾಲೇಜು ರಸ್ತೆಯ ಮೇಲೆ ಕುಳಿತು ಎಂಇಎಸ್ ಪ್ರತಿಭಟನೆ ನಡೆಸುತ್ತಿದ್ರೆ ಮತ್ತೊಂದೆಡೆ ಮಹಿಳೆಯರ ಕೈಗೆ ಭಗವಾ ಧ್ವಜ ಇರುವ ಧ್ಚಜಸ್ತಂಭ ನೀಡಿ ಮಹಾನಗರ ಪಾಲಿಕೆ ಬಳಿ ಕಳುಹಿಸಿ ಎಂಇಎಸ್ ತನ್ನ ನರಿಬುದ್ದಿ ಪ್ರದರ್ಶಿಸಿತು‌. ಎಂಇಎಸ್‌ ನಾಯಕಿಯರಾದ ಸರಿತಾ ಪಾಟೀಲ್, ರೇಣು ಕಿಲ್ಲೇಕರ್ ನೇತೃತ್ವದಲ್ಲಿ ಐವರು ಮಹಿಳೆಯರು ಕೈಯಲ್ಲಿ ಭಗವಾ ಧ್ವಜ ಸ್ತಂಭ ಹಿಡಿದು ಮಹಾನಗರ ಪಾಲಿಕೆ ಬಳಿ ಧಾವಿಸುತ್ತಿದ್ರು. ಈ ವೇಳೆ ಮಾರ್ಕೆಟ್ ಠಾಣೆ ಎಸಿಪಿ ಸದಾಶಿವ ಕಟ್ಟಿಮನಿ ಹಾಗೂ ಎಂಇಎಸ್ ಕಾರ್ಯಕರ್ತೆಯರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಎಂಇಎಸ್ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ದರು. ಇತ್ತ ಡಿಸಿ ಮನವಿ ಸ್ಚೀಕರಿಸಿ ತೆರಳಿದ ಬಳಿಕವೂ ಸರ್ದಾರ್ ಮೈದಾನ ಬಳಿ ಎಂಇಎಸ್, ಶಿವಸೇನೆ ಪುಂಡರು ಪ್ರತಿಭಟನೆ ಮುಂದುವರೆಸಿದ್ರು. ಈ ವೇಳೆ ಪ್ರತಿಭಟನಾ ನಿರತರನ್ನು ಚದುರಿಸಿ ಪೊಲೀಸರು ವಾಪಸ್ ಕಳಿಸಿದ್ರು. ಈ ವೇಳೆ ಪು‌ಂಡನೋರ್ವ ಭಗವಾ ಧ್ವಜ ಹಿಡಿದು ಪಾಲಿಕೆ ಕಚೇರಿಯತ್ತ ಹೊರಡಲು ಮುಂದಾಗಿದ್ದ. ಆತನನ್ನು ಪೊಲೀಸರು ತಡೆದು ವಾಪಸ್ ಕಳಿಸಿದರು. ಪೊಲೀಸರ ಸರ್ಪಗಾವಲಿಗೆ ಹೆದರಿ ಎಂಇಎಸ್, ಶಿವಸೇನೆ ಪುಂಡರು ಪ್ರತಿಭಟನಾ ಸ್ಥಳದಿಂದ ಜಾಗ ಖಾಲಿ ಮಾಡಿದ್ರು.

ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡ ಎಂಇಎಸ್ ಬೆಳಗಾವಿ ಲೋಕಸಭಾ ಉಪಚುನಾವಣೆ ಹಾಗೂ ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ, ಜಿ.ಪಂ., ತಾ.ಪಂ.ಚುನಾವಣೆಯಲ್ಲಿ ಅಸ್ತಿತ್ವ ಸಾಧಿಸಲು ತನ್ನ ನರಿಬುದ್ಧಿ ಪ್ರದರ್ಶಿಸುತ್ತಾ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *