Breaking News

ಐತಿಹಾಸಿಕ ಗೋಕಾಕ ಚಳವಳಿಗೆ 40 ವರ್ಷ

ಐತಿಹಾಸಿಕ ಗೋಕಾಕ ಚಳವಳಿಗೆ
40 ವರ್ಷ!ಕನ್ನಡ ಪರ ಚಳವಳಿಗಳಿಗೆ
ಸ್ಪೂರ್ತಿಯ ಸೆಲೆಯಾದ ಆಂದೋಲನ!

ಕರ್ನಾಟಕದಲ್ಲಿ ನಾಡು,ನುಡಿ
ಮತ್ತು ಗಡಿಯ ಪರವಾದ ಚಳವಳಿಗಳ
ಚರ್ಚೆ ಬಂದಾಗಲೆಲ್ಲ ನಾವು ಗೋಕಾಕ
ಚಳವಳಿಯನ್ನು ನೆನೆಪಿಸಿಕೊಳ್ಳುತ್ತೇವೆ.
ರಾಜ್ಯದಾಧ್ಯಂತದ ಕನ್ನಡಿಗರನ್ನು
ಬಡಿದೆಬ್ಬಿಸಿದ ಮತ್ತು ಕನ್ನಡಿಗರಲ್ಲಿ
ಕನ್ನಡದ ಪ್ರಙ್ಞೆಯನ್ನು ಸಾವಿರಪಟ್ಟು
ಹೆಚ್ಚಿಸಿದ ಈ ಚಳವಳಿಗೆ ಈಗ
40 ವರ್ಷ.
1982 ರ ಮೇ 16 ರಂದು
ಕನ್ನಡದ ವರನಟ ಡಾ.ರಾಜಕುಮಾರ
ಅವರು ಬೆಳಗಾವಿಯಲ್ಲಿ ಬೃಹತ್
ಬಹಿರಂಗ ಸಭೆಯನ್ನು ಉದ್ದೇಶಿಸುವ
ಮೂಲಕ ರಾಜ್ಯವ್ಯಾಪಿ ಕನ್ನಡದ
ಕಿಚ್ಚನ್ನು ಹೊತ್ತಿಸಿದರು.ರಾಜ್ಯ
ಭಾಷೆಯ ಬಗ್ಗೆ ರಾಜ್ಯದ ಜನತೆಯಲ್ಲಿ
ಸಂಚಲನ ಮೂಡಿಸಿದ ಈ ಚಳವಳಿಯೇ
ಇಂದಿನ ಎಲ್ಲ ಕನ್ನಡ ಪರ ಚಳವಳಿಗಳ
ಮೂಲ ಬೇರು ಎಂದರೂ ತಪ್ಪಾಗಲಿಕ್ಕಿಲ್ಲ.
ಮಾಧ್ಯಮಿಕ ಶಿಕ್ಷಣದಲ್ಲಿ ಕನ್ನಡದ
ಸ್ಥಾನ ಮಾನ ಹೇಗಿರಬೇಕು ಎಂಬ ಬಗ್ಗೆ
ಅಧ್ಯಯನ ನಡೆಸಲು ಅಂದಿನ
ಗುಂಡೂರಾವ ನೇತೃತ್ವದ ಕಾಂಗ್ರೆಸ್
ಸರಕಾರ ಙ್ಞಾನಪೀಠ ಪ್ರಶಸ್ತಿ ವಿಜೇತ
ಶ್ರೀ ವಿನಾಯಕ ಕೃಷ್ಣರಾವ ಗೋಕಾಕ
ನೇತೃತ್ವದಲ್ಲಿ ಸಮಿತಿಯೊಂದನ್ನು
1980 ರ ಜುಲೈ 5 ರಂದು ನೇಮಿಸಿತು.
ಈ ಗೋಕಾಕ ಸಮಿತಿಯು ರಾಜ್ಯವ್ಯಾಪಿ
ಸಂಚರಿಸಿ ಸರಕಾರಕ್ಕೆ ವರದಿ ನೀಡಿತು.ಈ
ಕನ್ನಡಕ್ಕೆ ಮೊದಲ ಸ್ಥಾನ ನೀಡಬೇಕೆಂಬ
ಗೋಕಾಕರ ವರದಿಯನ್ನು ಒಪ್ಪಲು
ಸರಕಾರ ಮೀನಾಮೇಷ ಎಣಿಸಿತು.ಈ
ನಿಲುವನ್ನು ವಿರೋಧಿಸಿ ಧಾರವಾಡದಲ್ಲಿ
ಹಿರಿಯ ಸಾಹಿತಿಗಳು ಸಂಶೋಧಕ
ಡಾ.ಶಂಭಾ ಜೋಶಿ ನೇತೃತ್ವದಲ್ಲಿ
ಸತ್ಯಾಗ್ರಹ ಆರಂಭಿಸಿದರು.ಆದರೆ
ಸರಕಾರ ಬಗ್ಗಲಿಲ್ಲ.ಈ ಹಂತದಲ್ಲಿಯೇ
ಪಾಟೀಲ ಪುಟ್ಟಪ್ಪ ಮತ್ತಿತರರು
ರಾಜಕುಮಾರ ಅವರನ್ನು ಚಳವಳಿಯ
ನೇತೃತ್ವ ವಹಿಸಿಕೊಳ್ಳಲು ಆಹ್ವಾನಿಸಿದರು.
ಕನ್ನಡಕ್ಕಾಗಿ ಪ್ರಾಣ ಕೊಡಲೂ ಸಿದ್ಧ
ಎಂದು ಘೋಷಿಸಿದ ರಾಜ್ ಅವರು
ಬೆಳಗಾವಿಯಿಂದಲೇ ತಮ್ಮ ಆಂದೋಲನ
ಆರಂಭಿಸಿದರು.
1982 ರ ಮೇ 15 ರಂದು ಸಂಜೆ
ರಾಜಕುಮಾರ ಹಾಗೂ ಅವರ ತಂಡವು
ಬೆಳಗಾವಿಗೆ ಆಗಮಿಸಿತು.ಹಳೆಯ
ಗಾಂಧೀನಗರದ ಸೇತುವೆಯ ಬಳಿ
ಅವರನ್ನು ಡಾ.ಚಿದಾನಂದಮೂರ್ತಿ
ರಾಘವೇಂದ್ರ ಜೋಶಿ ಸ್ವಾಗತಿಸಿದಾಗ
22 ವರ್ಷ ವಯಸ್ಸಿನ ನಾನೂ ಅವರ
ಜೊತೆಗಿದ್ದೆ.ನನ್ನಂಥ ಯುವಕರು
ಕನ್ನಡ ಚಳವಳಿಯನ್ನು ಪ್ರವೇಶಿಸಿದ್ದೇ
ಈ ಗೋಕಾಕ ಚಳವಳಿಯಿಂದಲೇ.
ಮೇ 16 ರಂದು ಮುಂಜಾನೆ
ಬೆಳಗಾವಿಯ ಕಾಲೇಜು ರಸ್ತೆಯ
ಸನ್ಮಾನ ಹೊಟೆಲ್ ಹಿಂದಿದ್ದ
ಬಯಲಿನಲ್ಲಿ(ಈಗ ಗಾಂಧೀ ಭವನ
ಕಟ್ಟಲಾಗಿದೆ)ಸಹಸ್ರಾರು ಜನರನ್ನು
ಉದ್ದೇಶಿಸಿ ರಾಜಕುಮಾರ ಮಾತನಾಡಿದರು.
ಬೆಳಗಾವಿಯಿಂದ ಆರಂಭವಾದ
ಆಂದೋಲನ ಯಾತ್ರೆ ಉತ್ತರ ಕರ್ನಾಟಕದ
ಜಿಲ್ಲೆಗಳಲ್ಲಿ ಸಂಚರಿಸಿತು.ರಾಜ್
ಹೋದಲ್ಲೆಲ್ಲ ಸಾವಿರಾರು ಜನರು
ಸೇರತೊಡಗಿದರು.ಸವದತ್ತಿ ಸಹಿತ
ಅನೇಕ ಕಡೆಗಳಲ್ಲಿ ಜನರನ್ನು ನಿಯಂತ್ರಿಸಲು
ಪೋಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು!
ರಾಜಕುಮಾರ ಅವರ ಜೊತೆಗೆ
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ
ಚಂದ್ರಶೇಖರ ಪಾಟೀಲ,ರಾ.ಯ.
ಧಾರವಾಡಕರ,ಆರ್.ಸಿ.ಹಿರೇಮಠ
ಬಸವರಾಜ ಕಟ್ಟೀಮನಿ,ರಾಮ
ಜಾಧವ ಮತ್ತಿತರರೂ ಇದ್ದರು.
ಗೋಕಾಕ ಚಳವಳಿಗೆ ರಾಜ್ಯದಲ್ಲಿ
ನಿರೀಕ್ಷೆ ಮೀರಿ ಬೆಂಬಲ ಸಿಗತೊಡಗಿದಾಗ
ಗುಂಡೂರಾವ ಸರಕಾರ ಎಚ್ಚತ್ತುಕೊಂಡಿತು.
ರಾಜಕುಮಾರ ಹಾಗೂ ಇತರ
ಹೋರಾಟಗಾರರನ್ನು ಮಾತುಕತೆಗೆ
ಆಹ್ವಾನಿಸಿತು.ವರದಿಯ ಜಾರಿಗೆ
ಸಮ್ಮತಿಸಿತು.
ಮಾಧ್ಯಮಿಕ ಶಿಕ್ಷಣದಲ್ಲಿ
ಕನ್ನಡದ ಸ್ಥಾನಮಾನಕ್ಕೆ ವರದಿಯು
ಸೀಮಿತವಾಗಿದ್ದರೂ ಗೋಕಾಕ
ಚಳವಳಿಯು ರಾಜ್ಯದಲ್ಲಿ ಹೊಸ
ಅಲೆಯನ್ನು ಸೃಷ್ಟಿಸಿತು.1983 ರಲ್ಲಿ
ಅಧಿಕಾರಕ್ಕೆ ಬಂದ ಮೊಟ್ಟಮೊದಲ
ಕಾಂಗ್ರೆಸ್ಸೇತರ ಜನತಾ ಪಕ್ಷದ ಸರಕಾರದ
ನಾಯಕ ರಾಮಕೃಷ್ಣ ಹೆಗಡೆ ಅವರು
ಮೊದಲ ಬಾರಿಗೆ ಕನ್ನಡ ಕಾವಲು
ಸಮಿತಿಯನ್ನು ರಚಿಸಿದರು.ಇದರ
ಮೊದಲ ಅಧ್ಯಕ್ಷರಾಗಿ ಪಕ್ಷೇತರ ಶಾಸಕ
ಸಿದ್ದರಾಮಯ್ಯ ಅವರು ನೇಮಕಗೊಂಡರು.
1985 ರಲ್ಲಿ ಜನತಾ ಪಕ್ಷದ ಸರಕಾರವೇ
ಮರಳಿ ಅಧಿಕಾರಕ್ಕೆ ಬಂದಾಗ
ಪಾಟೀಲ ಪುಟ್ಟಪ್ಪ ಅಧ್ಯಕ್ಷರಾದರು
ಗೋಕಾಕ ಚಳವಳಿಯು
ಕರ್ನಾಟಕ ಕಂಡ ಐತಿಹಾಸಿಕ
ಚಳವಳಿಯಾಗಿತ್ತು.ನಾಡಿನಾದ್ಯಂತ
ಕನ್ನಡ ಪರ ಸಂಘಟನೆಗಳು ಬೆಳೆದು
ನಿಲ್ಲಲು ಈ ಚಳವಳಿಯೇ ಪ್ರೇರಣೆ
ಎನ್ನಬಹುದು.ಇದರಲ್ಲಿ ಭಾಗವಹಿಸಿದ
ಅನೇಕರು ರಾಜ್ಯದ ರಾಜಕೀಯದಲ್ಲಿ
ಸ್ಥಾನಮಾನಗಳನ್ನು ಪಡೆದರೆಂಬುದು
ಗಮನಾರ್ಹ ಸಂಗತಿಯಾಗಿದೆ.
ಗೋಕಾಕ ಚಳವಳಿ ನಡೆದು
ನಾಲ್ಕು ದಶಕಗಳಾಗಿದ್ದರೂ ಇಂದಿಗೂ
ಅದನ್ನು ಕೆಲವರಾದರೂ ಮೆಲುಕು
ಹಾಕುತ್ತಲೇ ಇರುತ್ತೇವೆ.ಕರ್ನಾಟಕ
ಏಕೀಕರಣಕ್ಕಾಗಿ ನಡೆದ ಚಳವಳಿಯ
ನಂತರ ನಾಡು ಕಂಡ ಚಳವಳಿಯೆಂದರೆ
ಗೋಕಾಕ ಚಳವಳಿ.

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
9620114466

Check Also

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ …

Leave a Reply

Your email address will not be published. Required fields are marked *