Breaking News

ನೇಕಾರರಿಂದ ಸಮವಸ್ತ್ರ ಖರೀದಿ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಭರವಸೆ

*ನೇಕಾರರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್ ಗೆ ಕ್ರಮ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 19 :ಇಳಕಲ್ ಸೀರೆ ಸೇರಿದಂತೆ ನೇಕಾರರ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಬ್ರ್ಯಾಂಡಿಂಗ್ ದೊರೆತಾಗ ಉತ್ಪಾದನೆ ಹಾಗೂ ಆರ್ಥಿಕತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸರ್ಕಾರವು ನೇಕಾರರ ಬೇಡಿಕೆಗಳನ್ನು ಈಡೇರಿಸಿರುವ ಸಲುವಾಗಿ ನೇಕಾರ‌ರಿಂದ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ‌ಬಸವರಾಜ ಬೊಮ್ಮಾಯಿ ಅವರು ವಿಶೇಷ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಜವಳಿ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗುವುದು. ಅತಿಹೆಚ್ಚು ಜವಳಿ ರಫ್ತು ಮಾಡುವ ರಾಜ್ಯ ಕರ್ನಾಟಕವಾಗಿದೆ. ಇಳಕಲ್ ಸೇರೆ ಸಾಕಷ್ಟು ಪ್ರಸಿದ್ದಿ ಹೊಂದಿದೆ. ಈ ಸೀರೆಗಳು ರಾಷ್ಟ್ರಮಟ್ಟಕ್ಕೆ ಬ್ರ್ಯಾಂಡಿಂಗ್ ಆಗಬೇಕು. ಅದಕ್ಕಾಗಿ ಅಮೇಜಾನ್ ನಂತಹ ಆನ್ ಲೈನ್ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

*ಜನವರಿ 14 ರಂದು ಪವರ್ ಲೂಮ್ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ :

ನೇಕಾರ ಸಮ್ಮಾನ ಯೋಜನೆಯನ್ನು ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುವ ನೇಕಾರರಿಗೂ ವಿಸ್ತರಿಸಲಾಗಿದೆ. ಜನವರಿ 14 ರಂದು ನೇಕಾರರಿಗೆ ಸಂಕ್ರಾಂತಿ ಹಬ್ಬದ ಕಾಣಿಕೆಯಾಗಿ ನೀಡಲಾಗುವುದು. ವೃತ್ತಿಪರ ನೇಕಾರ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ. 30 ರ ಸಹಾಯಧನವನ್ನು ಶೇ. 50 ಕ್ಕೆ ಹೆಚ್ಚಿಸಲಾಗಿದೆನೇಕಾರರ ಕಾಲೋನಿಗಳಲ್ಲಿ ವಾಸಿಸುವವರಿಗೆ ರಹವಾಸಿ ಪತ್ರಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ನೇಕಾರರಿಂದ ಸಮವಸ್ತ್ರ ಖರೀದಿ:

ಮನೆಯಲ್ಲಿ ನೇಕಾರಿಕೆ ಮಾಡುವುದನ್ನು ಗುಡಿಕೈಗಾರಿಕೆ ಎಂದು ಪರಿಗಣಿಸಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯ್ತಿ ಮಾಡಲಾಗಿದೆ. ನೇಕಾರರ ಉತ್ಪನ್ನಗಳು ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡಲಾಗುವ ಸಮವಸ್ತ್ರಗಳ ತಯಾರಿಕೆಗೆ ಡಿಸೆಂಬರ್ ನಲ್ಲಿಯೇ ಆದೇಶ ನೀಡಲಾಗುವುದು. ಸರ್ಕಾರ ನೇಕಾರ ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲಾಗುವುದು. ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ. 25 ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.

*ನೇಕಾರರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ :*
ನೇಕಾರರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. ತಮಿಳುನಾಡು ಮಾದರಿಯಲ್ಲಿ ವಿದ್ಯುತ್ ಮಗ್ಗ ಹಾಗು ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಹಾಗೂ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡಲು ತೀರ್ಮಾನಿಸಲಾಗಿದೆ. ಅಸಂಘಟಿತ ವಲಯದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ವೃತ್ತಿಪರ ಕೂಲಿ ನೇಕಾರರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಈ ಸೌಲಭ್ಯಗಳನ್ನು ದೊರೆಯುವ ಯೋಜನೆಯನ್ನು ಮುಂದಿನ ಆಯವ್ಯಯದಲ್ಲಿ ರೂಪಿಸಲಾಗುವುದು. ಘೋಷಣೆ ಮಾಡಿರುವ ಯೋಜನೆಗಳಿಗೆ ತತ್ಕ್ಷಣವೇ ಆದೇಶಗಳನ್ನು ಹೊರಡಿಸಲಾಗುವುದು ಎಂದರು.

*ಜನವರಿಯಲ್ಲಿ ನೇಕಾರರ ಮಕ್ಕಳಿಗೆ ವಿದ್ಯಾನಿಧಿ :*
ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಜನವರಿ ಮೊದಲ ವಾರದಲ್ಲಿ ವಿತರಿಸಲಾಗುವುದು. ಆರ್ಥಿಕ ನೆರವುಗಳನ್ನು ನಿಗದಿತ ಅವಧಿಯೊಳಗೆ ಪೂರೈಸಲಾಗುವುದು.ನಮ್ಮ‌ ಸರ್ಕಾರ ನೇಕಾರರಿಗೆ ಸ್ಪಂದಿಸದಂತೆ ಬೇರೆ ಯಾವ ಸರ್ಕಾರವೂ ಮಾಡಿಲ್ಲ. ನೇಕಾರರ ಕಷ್ಟದ ಅರಿವು ಸರ್ಕಾರಕ್ಕಿದೆ ಎಂದರು.

*ನೇಕಾರರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ :*
ತಮ್ಮ ವೃತ್ತಿಯಿಂದಾಗಿ ನೇಕಾರರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ನೇಕಾರರ ತಯಾರು ಮಾಡಿದ ಸೀರೆ ೫೦ ಸಾವಿರಕ್ಕೆ ಮಾರಾಟವಾಗಬಹುದು. ಆದರೆ ನೇಕಾರರಿಗೆ ಲಾಭಾಂಶ ದೊರೆಯುವುದಿಲ್ಲ. ನೇಕಾರಿಕೆ ಒಂದು ಕಲೆ. ನೇಕಾರರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರ ಈ ಎಲ್ಲ ಯೋಜನೆಗಳನ್ನು ಕಟ್ಟಕಡೆಯ ನೇಕಾರನಿಗೂ ತಲುಪುವಂತೆ ಸಮುದಾಯದ ಮುಖಂಡರು ನೋಡಿಕೊಳ್ಳಬೇಕು ಎಂದರು.

*ನೇಕಾರರಿಗೆ ನೂರಾರು ವರ್ಷಗಳ ಇತಿಹಾಸವಿದೆ:*
ನೇಕಾರರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ವಿದೇಶಿ ಬಟ್ಟೆಯನ್ನು ತ್ಯಜಿಸುವ ಸಂದರ್ಭದಲ್ಲಿ ಸ್ವದೇಶಿ ಬಟ್ಟೆ ತಯಾರಿಕೆಯಲ್ಲಿ ಸಂಪೂರ್ಣ ಬೆಂಬಲ ನೀಡಿದರು. ನೇಕಾರಿಕೆ ಸಮಾಜ ಅತ್ಯಂತ ಪ್ರಾಮಾಣಿಕ ಹಾಗೂ ಸರಳ ಸಜ್ಜನ ಸಮಾಜ. ದೊಡ್ಡ ಪ್ರಮಾಣದ ಕೈಗಾರಿಕೆಗಿಂತ, ಹೆಚ್ಚು ಜನರಿಗೆ ಉದ್ಯೋಗ ನೀಡುವ ಕೆಲಸವೇ ಮೇಲು ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಪಾರಂಪರಿಕವಾದ, ನವೀಕರಣಗೊಳ್ಳುತ್ತಿರುವ ನೇಕಾರಿಕೆಯನ್ನು ಪೋಷಿಸುವುದು ದೇಶ ಹಾಗೂ ರಾಜ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.