Breaking News

ಬೆಳಗಾವಿಯಲ್ಲಿ, ಯುವಕನ ಬಲಿ ಪಡೆದ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌

 

*• ಬೆಳಗಾವಿಯ ಮಹಾಂತೇಶ ನಗರದಲ್ಲಿವೆ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳು*

*• ಸ್ಪೀಡ್ ಬ್ರೇಕರ್ ನಿರ್ಮಾಣಗೊಂಡ ಕೆಲ ಘಂಟೆಗಳಲ್ಲಿ ಅಪಘಾತ – ಯುವಕ ದುರ್ಮರಣ*

*• ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ*

ಬೆಳಗಾವಿ: ಬೆಳಗಾವಿಯ ಮಹಾಂತೇಶ ನಗರ ಸೆಕ್ಟೆರ್ ನಂಬರ್ 12ರಲ್ಲಿ ಖಾಸಗಿ ಶಾಲೆಯ ಬಳಿ ನಿರ್ಮಿಸಿದ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ ಯುವಕನೋರ್ವನ ಬಲಿ ಪಡೆದಿದೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ನಿನ್ನೆ ಸಂಜೆಯಷ್ಟೇ ಈ ಸ್ಪೀಡ್ ಬ್ರೇಕರ್ ನಿರ್ಮಾಣ ಮಾಡಲಾಗಿತ್ತು. ನಿನ್ನೆ ತಡರಾತ್ರಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮಹಾಂತೇಶ ನಗರ ನಿವಾಸಿ 23 ವರ್ಷದ ಪ್ರತೀಕ್ ಫಕೀರಪ್ಪ ಹೊಂಗಲ ಸ್ಪೀಡ್ ಬ್ರೇಕರ್ ಇದ್ದಿದ್ದು ಗಮನಕ್ಕೆ ಬಾರದೇ ನಿಯಂತ್ರಣ ತಪ್ಪಿ ಕೆಲವೇ ಮೀಟರ್ ಅಂತರದಲ್ಲಿ ರಸ್ತೆ ಬದಿ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ತಡರಾತ್ರಿ ಅಪಘಾತ ನಡೆದಿದ್ದರಿಂದ ಯಾರೂ ಗಮನಿಸಿಲ್ಲ. ಬೆಳಗ್ಗೆ 5.30ರ ಸುಮಾರಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಸ್ಥಳೀಯ ನಿವಾಸಿ ಎಸ್.ಎಸ್.ಹಿರೇಮಠ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನ ಗಮನಿಸಿದ್ದಾರೆ. ತಮ್ಮ ಬಳಿ ಫೋನ್ ಇಲ್ಲದ್ದರಿಂದ ಬೇರೆಯವರ ಬಳಿ ಫೋನ್ ಕೇಳಿದರೂ ಯಾರೂ ಸಹ ಸಹಾಯಕ್ಕೆ ಬರಲಿಲ್ಲವಂತೆ‌‌. ಕೊನೆಗೆ ಮೃತ ಯುವಕ ಪ್ರತೀಕ್‌ನ ಮೊಬೈಲ್‌ಗೆ ತಾಯಿ ಫೋನ್ ಮಾಡಿದಾಗ ಯುವಕನ ಫೋನ್ ಪಡೆದು ಮಾತನಾಡಿ ವಿಷಯ ತಿಳಿಸಿ ಆ್ಯಂಬುಲೆನ್ಸ್‌ ಕರೆಸುವಷ್ಟರಲ್ಲಿ ಯುವಕನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಇನ್ನು ಮಹಾಂತೇಶ ನಗರದ ಹಲವು ಕಡೆ ಈ ರೀತಿ ಅವೈಜ್ಞಾನಿಕವಾಗಿ ಸ್ಪೀಡ್ ಬ್ರೇಕರ್‌‌ಗಳನ್ನು ಅಳವಡಿಸಿದ್ದು ಅವುಗಳೆಲ್ಲ ಬೋನ್ ಬ್ರೇಕರ್‌ಗಳಾಗುತ್ತಿವೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಮಹಾಂತೇಶ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ರಸ್ತೆ ಬದಿ ಬೇಕಾಬಿಟ್ಟಿಯಾಗಿ ಟಿಪ್ಪರ್ ಹಾಗೂ ಇತರ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಳೆದ ವರ್ಷವಷ್ಟೇ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ ಮೃತ ಪ್ರತೀಕ್ ಹೊಂಗಲರವರ ಅಣ್ಣ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಜೊತೆ ಪ್ರತೀಕ್ ಒಬ್ಬನೇ ವಾಸವಿದ್ದ. ಬದುಕಿ ಬಾಳಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ತಮಗಾದ ಸ್ಥಿತಿ ಯಾರಿಗೂ ಆಗಬಾರದು, ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳನ್ನು ತೆರವು ಮಾಡಿ ಜನರ ಜೀವ ಉಳಿಸಿ ಎಂದು ಆಗ್ರಹಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Check Also

ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ

ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ …

Leave a Reply

Your email address will not be published. Required fields are marked *