Breaking News
Home / Breaking News / ಖಾನಾಪೂರದಲ್ಲಿ ಅಂಜಲಿ ವಿರುದ್ಧ ಸೋನಾಲಿ. ಕಣಕ್ಕಿಳಿಸಲು ಬಿಜೆಪಿ ಚಿಂತನೆ!

ಖಾನಾಪೂರದಲ್ಲಿ ಅಂಜಲಿ ವಿರುದ್ಧ ಸೋನಾಲಿ. ಕಣಕ್ಕಿಳಿಸಲು ಬಿಜೆಪಿ ಚಿಂತನೆ!

ಬೆಳಗಾವಿ-ಒಂದು ಕಡೆ ಮಲೆನಾಡಿನ ಸೊಬಗು ಮತ್ತೊಂದು ಕಡೆ ಬಯಲುಸೀಮೆ ರಂಗು ಇವೆರಡ ಮಧ್ಯೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಹಂಚಿಕೊಂಡಿರುವ, ಬೆಳಗಾವಿಯ ದಕ್ಷಿಣ ಭಾಗದ ತಾಲ್ಲೂಕು ಖಾನಾಪುರದಲ್ಲಿ ಚುನಾವಣಾ ಕಾವು ಜೋರಾಗಿದೆ. ಸಧ್ಯ ಕಾಂಗ್ರೆಸ್ ಪಕ್ಷದ ಅಂಜಲಿ ನಿಂಬಾಳ್ಕರ್ ಶಾಸಕಿಯಾಗಿದ್ದು, ಕ್ಷೇತ್ರ ವಶಕ್ಕೆ ಬಿಜೆಪಿ ಚುನಾವಣಾ ರಣತಂತ್ರ ಹೆಣೆಯುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಹೆಸರು ಬಲವಾಗಿ ಕೇಳಿಬರುತ್ತಿದೆ.

ಈ ಹಿಂದೆ ಎಂಇಎಸ್ ಭದ್ರಕೋಟೆಯಾಗಿದ್ದ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನೆಲೆ ಕಂಡುಕೊಳ್ಳಲು ಯಶಸ್ವಿಯಾಗಿವೆ. ಕಳೆದ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಡಾ. ಅಂಜಲಿ ನಿಂಬಾಳ್ಕರ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದು, ಇಲ್ಲಿ ಯಾವುದೇ ಗೊಂದಲವಿಲ್ಲ. ಜೊತೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ್ ಭಾಗವಾನ್ ಅವರ ಹೆಸರು ಘೋಷಣೆಯಾಗಿದೆ.

ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿಯಲ್ಲಿ ಚಿಂತನೆ 

ಈಗಾಗಲೇ ಕಾಂಗ್ರೆಸ್ ನಿಂದ ಡಾ. ಅಂಜಲಿ ನಿಂಬಾಳ್ಕರ್ ಸ್ಪರ್ಧೆ ಖಚಿತವಾಗಿದ್ದು ಬಿಜೆಪಿಯಿಂದ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಖಾನಾಪುರ ಪ್ರಭಾರಿ ಡಾ. ಸೋನಾಲಿ ಸರ್ನೋಬತ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ ಖಾನಾಪುರ ಜನರ ಸಂಕಷ್ಟಕ್ಕೆ ಸ್ಪಂದಿಸುವ ಜೊತೆಗೆ ತಮ್ಮದೇ ಸ್ವಯಂ ಸೇವಾ ಸಂಘಟನೆ ಮೂಲಕ ಜನರ ಪರವಾಗಿ ಕೆಲಸ ಮಾಡಿದ್ದರ ಕಾರಣ ಬಿಜೆಪಿ ಹೈಕಮಾಂಡ್ ಡಾ. ಸೋನಾಲಿ ಪರವಾದ ಒಲವು ಹೊಂದಿದ್ದು ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.

ಡಾ. ಸೋನಾಲಿ ಪರ ಬಿಜೆಪಿ ಹೈಕಮಾಂಡ್ ಒಲವು : ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಸೋನಾಲಿ ಸರ್ನೋಬತ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿಜೆಪಿ ಹೈಕಮಾಂಡ್ ಕೇಂದ್ರ ಗೃಹ ಸಚಿವ ಅಮೀತ್ ಅವರನ್ನು ಭೇಟಿ ಮಾಡಿ ಸ್ಪರ್ಧೆಗೆ ಅವಕಾಶ ಕೇಳಿದ್ದಾರೆ. ಜೊತೆಗೆ ರಾಜ್ಯ ನಾಯಕರ ಜೊತೆ ನಿರಂತರ ಸಂಪರ್ಕ ಹೊಂದಿದ್ದು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಅನೇಕ ಅಭ್ಯರ್ಥಿಗಳು ಟಿಕೆಟ್ ಗಾಗಿ ಪೈಪೋಟಿ ಮುಂದುವರಿಸಿದ್ದಾರೆ‌.

ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಾಲು ದೊಡ್ಡದಿದ್ದು ಹೈಕಮಾಂಡ್ ಯಾರಿಗೆ ಅವಕಾಶ ಕಲ್ಪಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಕಳೆದ ಚುನಾವಣೆಯಲ್ಲಿ ಡಾ. ಅಂಜಲಿ ವಿರುದ್ಧ ಸೋಲು ಅನುಭವಿಸಿದ್ದ ವಿಠ್ಠಲ ಹಲಗೇಕರ, ಮುಖಂಡ ಪ್ರಮೋದ ಕೊಚೇರಿ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ್ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದು, ಬಿಜೆಪಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಮುಂದುವರಿದಿದೆ.

**************

ಕ್ಷೇತ್ರದ ವಿಶೇಷ

ಮಹಾರಾಷ್ಟ್ರ, ಗೋವಾ ರಾಜ್ಯದ ಗಡಿ ಹೊಂದಿರುವ ತಾಲ್ಲೂಕು

ಒಂದು ಕಾಲದಲ್ಲಿ ಎಂಇಎಸ್ ಪ್ರಾಭಲ್ಯ ಹೊಂದಿದ್ದ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಸ್ಪರ್ಧೆ ಖಚಿತ

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಬಿಜೆಪಿ ಟಿಕೆಟ್ ಪ್ರಭಲ ಆಕಾಂಕ್ಷಿ

ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ

***************

ಕಳೆದ ಮೂರು ಚುನಾವಣೆ ಫಲಿತಾಂಶ

2018

ಗೆಲುವು – ಕಾಂಗ್ರೆಸ್ – ಡಾ. ಅಂಜಲಿ ನಿಂಬಾಳ್ಕರ್ – 36,649

ಸೋಲು – ಬಿಜೆಪಿ – ವಿಠ್ಠಲ ಹಲಗೇಕರ – 31,516

2013

ಗೆಲುವು – ಎಂಇಎಸ್ – ಅರವಿಂದ ಪಾಟೀಲ್ – 37,055

ಸೋಲು – ಪಕ್ಷೇತರ – ಡಾ. ಅಂಜಲಿ ನಿಂಬಾಳ್ಕರ್ – 17,686

2008

ಗೆಲುವು – ಬಿಜೆಪಿ – ಪ್ರಹ್ಲಾದ್ ರೆಮಾನೆ – 36,288

ಸೋಲು – ಕಾಂಗ್ರೆಸ್ – ರಫೀಕ್ ಖಾನಾಪುರಿ – 24,634

**************

ಕಾಂಗ್ರೆಸ್ -ಡಾ. ಅಂಜಲಿ ನಿಂಬಾಳ್ಕರ್

ಬಿಜೆಪಿ – ಡಾ. ಸೋನಾಲಿ ಸರ್ನೋಬತ್, ಅರವಿಂದ್ ಪಾಟೀಲ್, ವಿಠ್ಠಲ ಹಲಗೇಕರ್, ಪ್ರಮೋದ ಕೊಚೇರಿ

ಜೆಡಿಎಸ್ – ನಾಸೀರ್ ಭಾಗವಾನ್

***************

ಒಟ್ಟು ಮತದಾರರು – 207047

ಪುರುಷ ಮತದಾರರು – 107094

ಮಹಿಳಾ ಮತದಾರರು – 99953

****************

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *