ಡಾ.ಸೋನಾಲಿ ಸರ್ನೋಬತ್ ಅವರು ಕಳೆದ ಐದು ವರ್ಷಗಳಿಂದ ಖಾನಾಪೂರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯ ಬಲವರ್ದನೆಗೆ ಶ್ರಮಿಸುವ ಜೊತೆಗೆ,ವಯಕ್ತಿಕವಾಗಿ ಖಾನಾಪೂರ ಕ್ಷೇತ್ರದ ಜನರಿಗೆ ಸಹಾಯ ಮಾಡಿ,ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ,ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿ ಕ್ಷೇತ್ರದಲ್ಲಿ ಅಪಾರ ಜನಮೆಚ್ವುಗೆ ಗಳಿಸಿದ್ದ ಡಾ.ಸೋನಾಲಿ, ಖಾನಾಪೂರ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಪಕ್ಷ ವಿಠ್ಠಲ ಹಲಗೇಕರ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ ಬಳಿಕ ಬಂಡಾಯದ ಆಲೋಚನೆಯನ್ನೂ ಮಾಡದೇ ಡಾ.ಸೋನಾಲಿ,ಬಿಜೆಪಿ ಅಭ್ಯರ್ಥಿ ವಿಠ್ಠಲ ಹಲಗೇಕರ ಬೆನ್ನಿಗೆ ನಿಂತು ಹಲಗೇಕರ ಗೆಲುವಿಗೆ ಶ್ರಮಿಸುತ್ತಿದ್ದಾರೆ.ಸೋನಾಲಿ ಅವರ ಪಕ್ಷ ನಿಷ್ಠೆಗೆ ಬಿಜೆಪಿ ಕಾರ್ಯಕರ್ತರಿಂದ ಅಪಾರ ಜನಮೆಚ್ಚುಗೆ ವ್ಯಕ್ತವಾಗಿದೆ.
ಪಕ್ಷ ವಹಿಸುವ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ – ಡಾ.ಸೋನಾಲಿ ಸರ್ನೋಬತ್
ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಹಿಸುವ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಖಾನಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಹಿರಿಯ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾನು ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟೆಕೆಟ್ ಕೇಳಿದ್ದೆ. ಇಡೀ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಕ್ಷೇತ್ರಾದ್ಯಂತ ಓಡಾಡಿ ಬಿಜೆಪಿ ಸರಕಾರದ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದೇನೆ. ಕುಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಿದ್ದೇನೆ. ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇನೆ. ಮನೆ ಬಾಗಿಲಿಗೆ ಪಡಿತರ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದ್ದೇನೆ. ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸಂಘಟಿಸಿದ್ದೇನೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಜನ ಸ್ಪಂದನೆ ಕಚೇರಿ ತೆರೆದು ಸಾವಿರಾರು ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ.
ಆದರೆ ಅಲ್ಲಿ ವಿಠ್ಠಲ ಹಲಗೇಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ಸಿಗದ್ದರಿಂದ ನನ್ನ ಬೆಂಬಲಿಗರು ಬೇಸರಗೊಂಡಿದ್ದರು. ಅವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿ ಅವರನ್ನೆಲ್ಲ ಸಮಾಧಾನಪಡಿಸಿದ್ದೇನೆ. ಎಲ್ಲರೂ ಎಂದಿನಂತೆ ಬಿಜೆಪಿ ಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಖಾನಾಪುರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಬಿಜೆಪಿ ಪರ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಸದೃಢವಾಗಿ ಬೆಳೆಯಲಿದೆ. ರಾಜ್ಯದಲ್ಲಿ ಭಾರತೀಯ ಜನತಾಪಾರ್ಟಿಯ ಸರಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಡಾ.ಸೋನಾಲಿ ಸರ್ನೋಬತ್ ವ್ಯಕ್ತಪಡಿಸಿದ್ದಾರೆ