ಬೆಳಗಾವಿ- ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗಳಾಗಿ,ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಸಂಜೀವ ಪಾಟೀಲ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ನಿನ್ನೆ ರಾತ್ರಿ ಆದೇಶ ಹೊರಡಿಸಿದೆ.
ಇವರ ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ ಭೀಮಾಶಂಕರ ಗುಳೇದ ಅವರನ್ನು ನೇಮಿಸಲಾಗಿದ್ದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಬೆಳಗಾವಿ ಜಿಲ್ಲೆ,ಕರ್ನಾಟಕ, ಮಹಾರಾಷ್ಟ್ರ, ಮತ್ತು ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ.ಇಲ್ಲಿ ಅಗಣಿತ ಸಮಸ್ಯೆಗಳಿವೆ,ಅಪರಾಧಗಳ ಸಂಖ್ಯೆಯೂ ಹೆಚ್ಚಿದೆ.ಇಂತಹ ಜಿಲ್ಲೆಯ ಎಸ್ಪಿಯಾಗಿ ಸಂಜೀವ ಪಾಟೀಲ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ ಪರಿ ನಿಜವಾಗಿಯೂ ಎಲ್ಲರಿಗೂ ಮಾದರಿಯಾಗಿದೆ.
ಬೆಳಗಾವಿ ಜಿಲ್ಲೆಯ ಎಸ್ಪಿ ಆದಾಗಿನಿಂದ ಬೆಳಗಾವಿಯಲ್ಲಿ ವಾರಕ್ಕೊಮ್ಮೆ ಫೋನ್ ಇನ್ ಕಾರ್ಯಕ್ರಮ ನಡೆಸಿ,ಸಾರ್ವಜನಿಕರಿಂದ ಮಾಹಿತಿ ಪಡೆದು,ಬೆಳಗಾವಿ ಜಿಲ್ಲೆಯ ಹಳ್ಳಿ,ಹಳ್ಳಿಗಳಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಿಗೆ ಲಗಾಮು ಹಾಕಿದ ಕೀರ್ತಿ ಸಂಜೀವ ಪಾಟೀಲ ಅವರಿಗೆ ಸಲ್ಲುತ್ತದೆ.
ಕೋವೀಡ್ ಸಂಕಷ್ಟದ ಅವಧಿಯಲ್ಲಿ ಲಾಕ್ ಡೌನ್ ಸಂಧರ್ಭ ಇರಬಹುದು,ಕೊಲೆ ಸುಲಿಗೆ ಯಾವುದೇ ಅಪರಾಧ ಪ್ರಕರಣಗಳೇ ಇರಲಿ,ತ್ವರಿತಗತಿಯ ತನಿಖೆ, ಅಲ್ಪಾವಧಿಯಲ್ಲೇ ಅಪರಾಧಿಗಳನ್ನು ಪತ್ತೆ ಮಾಡಿದ ಅನೇಕ ಯಶಸ್ವಿ ಕಾರ್ಯಾಚರಣೆಗಳನ್ನು ಮಾಡುವ ಮೂಲಕ,ಯಾವುದೇ ಟೀಕೆ ಟಿಪ್ಪಣಿಗಳಿಗೆ ಅವಕಾಶ ಮಾಡಿಕೊಡದೇ ಯಾವುದೇ ಕಪ್ಪು ಚುಕ್ಕೆ ಇಲ್ಲದ ಕರ್ತವ್ಯ ನಿಭಾಯಿಸಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಿದ ಸಂಜೀವ ಪಾಟೀಲ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.