Breaking News
Home / Breaking News / ಕರೋನಾ ಕೇರ್… ಡಾಕ್ಟರ್ ಗಳ ಜೊತೆ ಪ್ರಾದೇಶಿಕ ಆಯುಕ್ತರ ಮೀಟೀಂಗ್

ಕರೋನಾ ಕೇರ್… ಡಾಕ್ಟರ್ ಗಳ ಜೊತೆ ಪ್ರಾದೇಶಿಕ ಆಯುಕ್ತರ ಮೀಟೀಂಗ್

ಕೋವಿಡ್ ೧೯ ನಿಯಂತ್ರಣ, ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪ್ರಾದೇಶಿಕ ಆಯುಕ್ತ ಬಿಸ್ವಾಸ್ ಸೂಚನೆ

ಬೆಳಗಾವಿ, ಮಾ.೧೯(ಕರ್ನಾಟಕ ವಾರ್ತೆ): ಸಾಮಾನ್ಯ ಫ್ಲೂ ಲಕ್ಷಣಗಳು ಹಾಗೂ ಕೋವಿಡ್ ೧೯ ರಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದಿರುವುದರಿಂದ ಸೋಂಕಿತರನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ. ಇಂತಹ ಸನ್ನಿವೇಶದಲ್ಲಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈದ್ಯರೂ ಸೇರಿದಂತೆ ಎಲ್ಲರೂ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಕೋವಿಡ್ ೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳು, ಸಿದ್ಧತೆ, ಮುನ್ನೆಚ್ಚರಿಕೆ ಹಾಗೂ ಲಭ್ಯವಿರುವ ಚಿಕಿತ್ಸಾ ಕ್ರಮಗಳ ಕುರಿತು ಬಿಮ್ಸ್ ನಲ್ಲಿ ಗುರುವಾರ(ಮಾ.೧೯) ನಡೆದ ಬಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕರೋನಾ ನಿಯಂತ್ರದಣಲ್ಲಿ ಗಣನೀಯ ಸಾಧನೆ ಕಂಡು ಬಂದಿದೆ. ಇನ್ನೂ ಹೆಚ್ಚು ಹರಡದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದ್ದರಿಂದ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಳ್ಳುವ ಮೆಡಿಕಲ್ ಸ್ಟೋರ್ಸ್ ಮತ್ತಿತರ ಮಳಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಅಗತ್ಯ ವಸ್ತುಗಳ ಪಟ್ಟಿಗೆ ಇವುಗಳನ್ನು ಸೇರ್ಪಡೆ ಮಾಡಿರುವುದರಿಂದ ಎಂ.ಆರ್.ಪಿ. ದರಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ ಎಂದರು.

ಆಸ್ಪತ್ರೆ ಮತ್ತು ಚೆಕ್ ಪೋಸ್ಟ್ ಗಳಲ್ಲಿ ನಿಗಾ ವಹಿಸಲು ಸಮರ್ಪಕ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸೂಕ್ತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಬೇಕು. ಇಂತಹ ಮಾಹಿತಿಯನ್ನು ವಿಶ್ಲೇಷಿಸಬೇಕು ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ರೋಗಿಗಳ ಭೇಟಿ ನಿರ್ಬಂಧಿಸಲು ಸೂಚನೆ:

ಬೇರೆ ಬೇರೆ ಕಾರಣಗಳಿಂದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಭೇಟಿಗೆ ಆಗಮಿಸುವವರನ್ನು ನಿರ್ಬಂಧಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಮದುವೆ, ಇತರೆ ಸಭೆ-ಸಮಾರಂಭಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಕೂಡ ಕಟ್ಟುನಿಟ್ಟಾಗಿ ನಿರ್ಬಂಧಿಸುವಂತೆ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ಬೆಡ್ ಗಳನ್ನು ಸಿದ್ಧವಾಗಿಟ್ಟುವ ಸಾಧ್ಯತೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ತಿಳಿಸಿದರು.
ಎಲ್ಲ ಈಜುಕೊಳಗಳನ್ನು ಬಂದ್ ಮಾಡಿಸುವಂತೆ ಪಾಲಿಕೆಯ ಆಯುಕ್ತರಿಗೆ ಹೇಳಿದರು.
ಎಲ್ಲವನ್ನೂ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂಬ ಆತ್ಮವಿಶ್ವಾಸ ಬೇಡ. ಪ್ರತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸವಾಲು ಎದುರಿಸಲು ಪ್ರತಿದಿನ ನಮ್ಮ ಸಿದ್ಧತೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಬಿಸ್ವಾಸ್ ಸಲಹೆ ನೀಡಿದರು.
ವೈರಾಣು ಹರಡುವಿಕೆ ತಡೆಗಟ್ಟಲು ಯಾವ ರೀತಿಯ ಕ್ರಮಗೊಳ್ಳಬೇಕು ಎಂದು ಖಾಸಗಿ ವೈದ್ಯರಿಂದಲೂ ಅವರು ಮಾಹಿತಿಯನ್ನು ಪಡೆದುಕೊಂಡರು.

ಯಾವುದೇ ವೈದ್ಯರ ಬಳಿ ಕೋವಿಡ್ ೧೯ ಲಕ್ಷಣ ಹೊಂದಿರುವ ವ್ಯಕ್ತಿಗಳು ಚಿಕಿತ್ಸೆಗೆ ಬಂದರೆ ಅಂತಹವರನ್ನು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವೈದ್ಯರಲ್ಲಿ ಮನವಿ ಮಾಡಿಕೊಂಡರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಹೊರತುಪಡಿಸಿ ಭೇಟಿಗೆ ಅನಗತ್ಯವಾಗಿ ಆಗಮಿಸುವ ಇತರರನ್ನು ತಡೆಗಟ್ಟಬೇಕು. ಇದರಿಂದ ವೈರಾಣು ಹರಡುವಿಕೆ ತಡೆಗಟ್ಟುವಿಕೆ ಸಾಧ್ಯ ಎಂದು ವಿವಿಧ ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಕೋವಿಡ್ ೧೮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿ ಕೂಡ ನೀಡಲಾಗಿದೆ.

ಎಲ್ಲ ಇಲಾಖೆಯ ಸಮನ್ವಯ ಸಭೆ ನಡೆಸಲಾಗಿದ್ದು, ಮಾಹಿತಿ ಸಂಗ್ರಹ, ತುರ್ತು ಚಿಕಿತ್ಸೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೆ.ಎಲ್.ಇ ಕ್ವಾರೆಂಟೈನ್ ೬೩ ಹಾಸಿಗೆಯ ಪ್ರತ್ಯೇಕ ಕಟ್ಟಡವನ್ನು ಸಿದ್ಧಪಡಿಸಲಾಗಿದೆ. ವಿವಿಧ ಕಡೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕೂಡ ತುರ್ತು ಸಂದರ್ಭದಲ್ಲಿ ಬಳಸಲು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.
ಅಂತರಾಜ್ಯ ಗಡಿಗಳಲ್ಲಿ ಆರೋಗ್ಯ ತಪಾಸಣೆಗೆ ತಂಡಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ ಬಸ್ಸು ಹಾಗೂ ರೈಲು ನಿಲ್ದಾಣ ಹಾಗೂ ನ್ಯಾಯಾಲಯದ ಆವರಣದಲ್ಲಿ ಥರ್ಮಲ್ ಸ್ಕ್ಯಾನರ್ ಕೂಡ ಅಳವಡಿಸಲಾಗಿರುತ್ತದೆ.
ಔಷಧಿ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಡಾ.ಮುನ್ಯಾಳ ವಿವರಿಸಿದರು.

ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್, ಬಿಮ್ಸ್ ನಿರ್ದೇಶಕರಾದ ಡಾ.ದಾಸ್ತಿಕೊಪ್ಪ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಬಿಮ್ಸ್ ಮುಖ್ಯ ಆಡಳಿತ ಅಧಿಕಾರಿ ಸಯೀದಾ ಅಫ್ರೀನ್ ಬಾನು ಬಳ್ಳಾರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
***

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *