Breaking News
Home / Breaking News / ಲಸಿಕೆ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ ಹಿರೇಮಠ

ಲಸಿಕೆ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ,: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡರು.

ಸೋಮವಾರ (ಮಾ.15) ಮಧ್ಯಾಹ್ನ ನಗರದ ಬಿಮ್ಸ್ ಆಸ್ಪತ್ರೆಗೆ ಆಗಮಿಸಿದ ಮೂವರು ಹಿರಿಯ ಅಧಿಕಾರಿಗಳು ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, “ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಂಡು ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು”  ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಪೊಲಿಸ್ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟಾರೆ 81,082 ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ.

ಲಸಿಕೆಯು ಸುರಕ್ಷಿತವಾಗಿದ್ದು, ಇದುವರೆಗೆ ಲಸಿಕೆ ಪಡೆದುಕೊಂಡವರಲ್ಲಿ ಯಾರಿಗೂ ಕೂಡ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಪ್ರತಿ ಲಸಿಕಾ ಕೇಂದ್ರದಲ್ಲಿ ತಜ್ಞ ವೈದ್ಯರನ್ನೊಳಗೊಂಡ ತಂಡ ರಚಿಸಲಾಗಿದೆ.

4.47 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ:

ಮಾರ್ಚ್ 1, 2021 ರಿಂದ ಎರಡನೇ ಹಂತದ ಲಸಿಕಾ ಅಭಿಯಾನ ಆರಂಭಗೊಂಡಿದೆ. ಈ ಹಂತದಲ್ಲಿ 60 ಮೇಲ್ಪಟ್ಟವರು ಹಾಗೂ ಸಹ ಅಸ್ವಸ್ಥತೆ (ಕೊಮಾರ್ಬಿಡಿಟಿ) ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯಸಂಬಂಧಿ ಮುಂತಾದ ಕಾಯಿಲೆ ಹೊಂದಿದವರಿಗೆ ಲಸಿಕೆ ನೀಡಲಾಗುತ್ತಿದೆ.

2 ನೇ ಹಂತದಲ್ಲಿ ಜಿಲ್ಲೆಯಲ್ಲಿ 4,47,953 ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಬೆಳಿಗ್ಗೆ10 ರಿಂದ ಸಂಜೆ 4.30 ರವರೆಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಇದಲ್ಲದೇ ಆಯ್ದ 28 ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಪ್ರತಿ ಲಸಿಕೆಗೆ 250 ರೂಪಾಯಿ ದರ ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಾತ್ರಾ-ಉತ್ಸವಗಳಿಗೆ ನಿರ್ಬಂಧ:

ಏಳು ಚೆಕ್ ಪೋಸ್ಟ್ ಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗಾ ವಹಿಸಲಾಗಿದೆ. ರಾಜ್ಯದ ಗಡಿ ಪ್ರವೇಶಿಸುವಾಗ ನೆಗೆಟಿವ್ ವರದಿ ಪರಿಶೀಲಿಸಲಾಗುತ್ತಿದೆ.

ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸವದತ್ತಿ ಹಾಗೂ ಚಿಂಚಲಿಯಲ್ಲಿ ದರ್ಶನ ನಿಷೇಧಿಸಲಾಗಿದ್ದು, ಜನದಟ್ಟಣೆ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಸಾಂಪ್ರಾದಾಯಿಕ ಪೂಜೆ-ಪುನಸ್ಕಾರಕ್ಕೆ ಮಾತ್ರ ಜಾತ್ರೆ-ಉತ್ಸವಗಳನ್ನು ಸೀಮಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಕುಟುಂಬ, ಸಮಾಜದ ಹಿತದೃಷ್ಟಿಯಿಂದ ಲಸಿಕೆ ಅಗತ್ಯ:

ನಾವು, ಕುಟುಂಬ ಹಾಗೂ ನಮ್ಮ ಸುತ್ತಮುತ್ತಲಿನ ಜನರ ಸುರಕ್ಷತೆ ದೃಷ್ಟಿಯಿಂದ ನಾವೆಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಆದ್ದರಿಂದ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿಕೊಂಡರು.

ಪೊಲೀಸ್ ಇಲಾಖೆಯಲ್ಲಿ ಶೇ.90 ರಷ್ಟು ಜನರು ಲಸಿಕೆ ಪಡೆದಿದ್ದು, ವೈದ್ಯಕೀಯ ಕಾರಣಗಳಿಂದಾಗಿ ಸ್ವಲ್ಪ ಜನರಿಗೆ ಮಾತ್ರ ಲಸಿಕೆ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ನಿಂಬರಗಿ ತಿಳಿಸಿದರು.

ಲಸಿಕೆ ಸುರಕ್ಷಿತವಾಗಿದ್ದು, ಬೆಳಗಾವಿ ಜಿಲ್ಲೆಯನ್ನು ಕೋವಿಡ್-೧೯ ಮುಕ್ತಗೊಳಿಸಲು ಎಲ್ಲರೂ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ‌. ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ, ಆರ್.ಸಿ.ಎಚ್. ಡಾ.ಐ.ಪಿ.ಗಡಾದ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *