Breaking News
Home / Breaking News / ಇಂಟರ್ ಸಿಟಿ 13.5ಎಂ ಮಾದರಿಯ ಎಸಿ ಸ್ಲೀಪರ್ ಬಸ್ ಖರೀಧಿಸಿದ VRL

ಇಂಟರ್ ಸಿಟಿ 13.5ಎಂ ಮಾದರಿಯ ಎಸಿ ಸ್ಲೀಪರ್ ಬಸ್ ಖರೀಧಿಸಿದ VRL

3 ವರ್ಷದಲ್ಲಿ ಸಾವಿರ ಬಸ್ ಖರೀದಿ

*ಇಂಟರ್ ಸಿಟಿ 13.5ಎಂ ಮಾದರಿಯ ಎಸಿ ಸ್ಲೀಪರ್ ಬಸ್‌ಗಳ ಹಸ್ತಾಂತರ

ಬೆಂಗಳೂರು-
ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಮುಂದಿನ ಮೂರು ವರ್ಷದಲ್ಲಿ 1,000 ಹೊಸ ಐಷಾರಾಮಿ ಬಸ್‌ಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಹೇಳಿದ್ದಾರೆ.

ವೋಲ್ವೊ ಐಷರ್ ವಾಣಿಜ್ಯ ವಾಹನಗಳ ಕಂಪನಿ ಸೋಮವಾರ ಆಯೋಜಿಸಿದ್ದ ‘ಐಷರ್ ಇಂಟರ್ ಸಿಟಿ 13.5 ಎಂ ಕೋಚ್’ ಮಾದರಿ ಬಸ್‌ಗಳನ್ನು ವಿಜಯಾನಂದ ಟ್ರಾವೆಲ್ಸ್‌ಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಈ ಮಹತ್ವದ ತೀರ್ಮಾನ ಪ್ರಕಟಿಸಿದರು.
ಪ್ರಸ್ತುತ 100 ಬಸ್‌ಗಳ ಖರೀದಿಗೆ ಆರ್ಡರ್ ನೀಡಲಾಗಿದೆ. ತಲಾ 50 ಬಸ್‌ಗಳು ಹವಾನಿಯಂತ್ರಿತ ಸ್ಲೀಪರ್, ಉಳಿದ 50 ಬಸ್ ನಾನ್ ಎಸಿ ವಾಹನಗಳಾಗಿವೆ. ವೋಲ್ವೊ ಐಷರ್ ಕಂಪನಿಯಿಂದ ಖರೀದಿಸುವ 50 ಎಸಿ ಸ್ಲೀಪರ್ ಬಸ್ ಖರೀದಿಸಿದರೆ ಉಳಿದ 50 ಬಸ್‌ಗಳನ್ನು ಟಾಟಾ ಕಂಪನಿಯಿಂದ ಖರೀದಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೊಸದಾಗಿ ಖರೀದಿಸುವ ಬಸ್‌ಗಳು ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ರಾಜ್ಯಗಳ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಭವಿಷ್ಯದಲ್ಲಿ ಇತರ ರಾಜ್ಯ ಹಾಗೂ ಹೊಸ ಮಾರ್ಗಗಳಲ್ಲೂ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ ಇದೆ ಎಂದರು.

ಶೇ.21 ವಹಿವಾಟು ವೃದ್ಧಿ:

ವಿಆರ್‌ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ವಿಆರ್‌ಎಲ್ ಲಾಜಿಸ್ಟಿಕ್ಸ್ ದೇಶದ ಮುಂಚೂಣಿ ಕಂಪನಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ 6,300 ಟ್ರಕ್‌ಗಳಿದ್ದು, ದೇಶಾದ್ಯಂತ 1250 ಶಾಖೆಗಳನ್ನು ಹೊಂದಿದೆ. ಇತ್ತೀಚಿಗೆ ಲಡಾಕ್‌ನಲ್ಲೂ ಹೊಸ ಶಾಖೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 160 ಶಾಖೆಗಳನ್ನು ಪ್ರಾರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ ದಾಖಲೆಯ ಶೇ.21 ವಹಿವಾಟು ವೃದ್ಧಿಯಾಗಿದ್ದು, 2023-24ರಲ್ಲಿ ಶೇ.25 ವೃದ್ಧಿ ಗುರಿ ಇದೆ ಎಂದು ತಿಳಿಸಿದರು

ವೋಲ್ವೋ-ಐಷರ್ ವಾಣಿಜ್ಯ ವಾಹನಗಳ ಬಸ್ ವಿಭಾಗದ ಅಧ್ಯಕ್ಷ ಆಕಾಶ್ ಪಾಸಿ ಮಾತನಾಡಿ, ನಮ್ಮ ಕಂಪನಿಯು ವಿಶ್ವದರ್ಜೆಯ ಗುಣಮಟ್ಟದ ಬಸ್‌ಗಳನ್ನು ತಯಾರಿಸುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರಸ್ತುತ ದೇಶದಲ್ಲಿ ಬಸ್ ತಯಾರಿಕೆ ಕ್ಷೇತ್ರದ ಶೇ.24 ಪಾಲನ್ನು ಹೊಂದಿದೆ. ಸ್ಲೀಪರ್ ಸೌಲಭ್ಯವುಳ್ಳ ಬಸ್‌ಗಳನ್ನು ಪ್ರಯಾಣಿಕರು ಇಷ್ಟಪಡುತ್ತಾರೆ. ಮುಂದಿನ 5 ವರ್ಷದಲ್ಲಿ ತಯಾರಾಗುವ ಬಹುತೇಕ ಬಸ್‌ಗಳು ಇಂತಹ ಸೌಲಭ್ಯವನ್ನು ಹೊಂದಿರುತ್ತವೆ ಎಂದರು.
ಇದೇ ವೇಳೆ ವ್ವೋಲ್ವೊ ಐಷರ್ ಕಂಪನಿ ವತಿಯಿಂದ ಡಾ.ವಿಜಯ್ ಸಂಕೇಶ್ವರ ಹಾಗೂ ಶಿವ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವ್ವೋಲ್ವೊ ಐಷರ್ ಕಂಪನಿ ಉಪಾಧ್ಯಕ್ಷ ಸುರೇಶ್ ಚೆಟ್ಟಿಯಾರ್ ಅವರು ನೂತನ ಬಸ್‌ಗಳ ವಿಶೇಷತೆಯನ್ನು ವಿವರಿಸಿದರು.

ಸರಕಾರದ ಫ್ರೀ ಬೀಸ್‌ಗೆ ಮೆಚ್ಚುಗೆ

ರಾಜ್ಯ ಸರ್ಕಾರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಸೌಲಭ್ಯ ಒದಗಿಸುತ್ತಿರುವುದರಿಂದ ನಮ್ಮ ಸಂಸ್ಥೆ ಮೇಲೆ ಪರಿಣಾಮ ಆಗಿಲ್ಲ. ವಹಿವಾಟಿಗೂ ಯಾವುದೇ ಧಕ್ಕೆ ಆಗಿಲ್ಲ. ಬದಲಾಗಿ ವಿುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪ್ರಯಾಣಿಕರಿಗೆ ಇನ್ನಷ್ಟು ಸೇವೆ ಒದಗಿಸಲಾಗುವುದು ಎಂದು ಶಿವ ಸಂಕೇಶ್ವರ ಪ್ರತಿಕ್ರಿಯಿಸಿದರು.
ಇದಕ್ಕೆ ದನಿಗೂಡಿಸಿದ ಸಿಎಂಡಿ ಡಾ. ವಿಜಯ ಸಂಕೇಶ್ವರ, ರಾಜ್ಯ ಸರಕಾರದ ಶಕ್ತಿ ಯೋಜನೆ ಅತ್ಯುತ್ತಮವಾಗಿದೆ. ಮಹಿಳೆಯರಿಗೆ ಆರ್ಥಿಕ ಸದೃಢತೆ ಸಿಕ್ಕಿದೆ. ಫ್ರೀ ಬೀಸ್‌ನಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ನಮ್ಮ ಗ್ರಾಹಕರು ಬೇರೆ ವರ್ಗದಡಿ ಬರುವುದರಿಂದ ಪರಿಣಾಮ ಬೀರಿಲ್ಲ. ದೂರದ ಪ್ರಯಾಣಕ್ಕೆ ಬಸ್ ಸೌಲಭ್ಯ ಉತ್ತಮ ಎಂಬ ಮನೋಭಾವ ಹಲವು ಪ್ರಯಾಣಿಕರಲ್ಲಿದೆ. ಮುಂದೆಯೂ ಇನ್ನಷ್ಟು ಸೌಲಭ್ಯಗಳು ಕೈಗೆಟಕುವ ಹಿನ್ನೆಲೆಯಲ್ಲಿ ಬಸ್ ಸೇವೆ ಮತ್ತಷ್ಟು ವಿಸ್ತರಣೆ ಆಗಲಿದೆ ಎಂದರು.
ವೋಲ್ವೊ ಕಂಪನಿ ತಯಾರಿಸುವ ಬಸ್‌ಗಳು ವಿಶ್ವದರ್ಜೆಯನ್ನು ಹೊಂದಿವೆ. ಸುರಕ್ಷತೆ ಸೇರಿದಂತೆ ಇತರ ಸೌಲಭ್ಯಗಳು ಪ್ರಯಾಣಿಕರ ಸ್ನೇಹಿಯಾಗಿವೆ. ವಿಜಯಾನಂದ ಟ್ರಾವೆಲ್ಸ್ ಹಾಗೂ ವೋಲ್ವೊ ಮಧ್ಯೆ 20 ವರ್ಷಗಳ ಸಂಬಂಧ ಇದೆ. ಬಸ್‌ಗಳ ತಯಾರಿಕೆ, ವಿನ್ಯಾಸ ಹಾಗೂ ತಾಂತ್ರಿಕತೆಯಲ್ಲಿ ವೋಲ್ವೊಗೆ ಬೇರ‌್ಯಾರೂ ಸರಿಸಾಟಿ ಇಲ್ಲ. ಆ ಸಂಸ್ಥೆ ತಯಾರಿಸುವ ಹೊಸ ಮಾದರಿಯ ಬಸ್‌ಗಳನ್ನು ನಾವು ಖರೀದಿಸಿ ಪ್ರಯಾಣಿಕರ ಸೇವೆಗೆ ನೀಡಿದ್ದೇವೆ. ಮುಂದೆಯೂ ಕೂಡ ಭಾರತೀಯ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ವೋಲ್ವೊ ಮುಂದಾಗಲಿದೆ ಎಂಬ ವಿಶ್ವಾಸ ಇದೆ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.

ಶೇ. 15 ರಿಯಾಯಿತಿಗೆ ಬದ್ಧ

ಸದ್ಯ ನಮ್ಮಲ್ಲಿರುವ ಅಂದಾಜು 270 ಬಸ್‌ಗಳನ್ನು ಹಂತಹಂತವಾಗಿ ತೆಗೆದು ಹೊಸ ಬಸ್‌ಗಳಿಗೆ ಬದಲಾವಣೆ ಮಾಡಲಾಗುವುದು ಎಂದು ಶಿವ ಸಂಕೇಶ್ವರ ಹೇಳಿದರು. ನಮ್ಮ ಆಡಳಿತ ಮಂಡಳಿ ಅನೇಕ ಕಂಪನಿಗಳ ಜತೆ ಮಾತುಕತೆ ನಡೆಸುತ್ತಿದ್ದು ಸುರಕ್ಷಿತ, ಪ್ರಯಾಣಿಕ ಸ್ನೇಹಿ ಬಸ್‌ಗಳಿಗಷ್ಟೇ ನಮ್ಮ ಆದ್ಯತೆ ಇದೆ. ಇನ್ನು ಪ್ರತಿಯೊಬ್ಬರಿಗೂ ನಮ್ಮ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸಿದರೆ ಶೇ. 15 ರಿಯಾಯಿತಿ ನೀಡುವುದಕ್ಕೆ ಯಾವತ್ತೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಜಯಾನಂದ ಟ್ರಾವೆಲ್ಸ್‌ಗೆ ಗ್ರಾಹಕರೇ ದೇವರು. ಪ್ರಯಾಣಿಕರ ಸುರಕ್ಷತೆ, ಗುಣಮಟ್ಟದ ಸೇವೆ ಒದಗಿಸಲು ಸದಾ ಸಿದ್ಧವಿದೆ. ನಮ್ಮ ಸಂಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಅತ್ಯುತ್ತಮ ಸೇವೆ ಒದಗಿಸುವಲ್ಲಿ ಸಕ್ರಿಯರಾಗಿದ್ದೇವೆ. ಭವಿಷ್ಯದಲ್ಲಿ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಓಡಿಸುವ ಚಿಂತನೆ ಇದೆ.
-ಶಿವ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ

Check Also

ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟೀಂಗ್…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಬೆಳಗಾವಿ,ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ ರೂಪಿಸಲು ಇಂದು ಬೆಳಗಾವಿ ನಗರದ ಸಂಕಮ್ …

Leave a Reply

Your email address will not be published. Required fields are marked *