Breaking News
Home / Breaking News / ಕಿತ್ತೂರಿನ ಹೆಸರಿನಿಂದ ಈ ಭಾಗವನ್ನು ಕರೆದರೆ ಅದು ಕರ್ನಾಟಕಕ್ಕೇ ಭೂಷಣ.

ಕಿತ್ತೂರಿನ ಹೆಸರಿನಿಂದ ಈ ಭಾಗವನ್ನು ಕರೆದರೆ ಅದು ಕರ್ನಾಟಕಕ್ಕೇ ಭೂಷಣ.

ಡಾ.ಚಿದಾನಂದ ಮೂರ್ತಿಯವರ
ಕಂಡಿದ್ದ “ಕಲ್ಯಾಣ ಕರ್ನಾಟಕ”ದ
ಕನಸು ಅವರ ಜೀವಿತಾವಧಿಯಲ್ಲಿಯೇ
ನನಸಾಯಿತು,”ಕಿತ್ತೂರು ಕರ್ನಾಟಕ”ವನ್ನು
ಕಾಣುವ ಭಾಗ್ಯ ಅವರದಾಗಲಿಲ್ಲ!

1956 ರಲ್ಲಿಯೇ ಕರ್ನಾಟಕ
ಏಕೀಕರಣವಾಗಿ ಮುಂಬಯಿ ಪ್ರಾಂತದ
ನಾಲ್ಕು ಜಿಲ್ಲೆಗಳಾದ ಬೆಳಗಾವಿ,ಧಾರವಾಡ,
ವಿಜಯಪುರ ಮತ್ತು ಉತ್ತರ ಕನ್ನಡ
(ಸದ್ಯ ಗದಗ ಹಾವೇರಿ ಮತ್ತು ಬಾಗಲಕೋಟೆ
ಸೇರಿ 7 ಜಿಲ್ಲೆಗಳು)ಅಖಂಡ ಕರ್ನಾಟಕಕ್ಕೆ ಸೇರಿದ 65 ವರ್ಷಗಳಾದರೂ ಇನ್ನೂ ಈ ಭಾಗಕ್ಕೆ ಮುಂಬಯಿ ಕರ್ನಾಟಕವೆಂದೇ ಕರೆಯಲ್ಪಡುತ್ತಿರುವದು ಸರಿಯಲ್ಲ.ಅದೇ ರೀತಿ ಹೈದ್ರಾಬಾದ ಕರ್ನಾಟಕದ
ಏಳು ಜಿಲ್ಲೆಗಳನ್ನು ಸೇರಿಸಿ ಹೈದ್ರಾಬಾದ
ಕರ್ನಾಟಕವೆಂದು ಕರೆಯುವದೂ ದಾಸ್ಯದ ಸಂಕೇತ.ಇವೆರಡಕ್ಕೂ ಕ್ರಮವಾಗಿ
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ
ಕರ್ನಾಟಕ ಎಂದು ನಾಮಕರಣ
ಮಾಡಬೇಕು ಎಂದು ಬಲವಾಗಿ
ಪ್ರತಿಪಾದಿಸಿದವರು ನಾಡಿನ ಖ್ಯಾತ
ಸಂಶೋಧಕ ದಿ.ಚಿದಾನಂದ ಮೂರ್ತಿ.
1982 ರ ಐತಿಹಾಸಿಕ ಗೋಕಾಕ
ಚಳವಳಿಯ ಕಾಲದಿಂದಲೂ ಅವರೊಂದಿಗೆ ಬೆಳಗಾವಿ ಕನ್ನಡ ಪರ ಹೋರಾಟಗಾರರ
ನಿರಂತರ ಒಡನಾಟ.ಮೂರ್ತಿ ಅವರು
ಕಟ್ಟಾ ಹಿಂದುತ್ವವಾದಿ.ಆದರೆ ನಾಡು,ನುಡಿ
ಮತ್ತು ಗಡಿಯ ವಿಷಯ ಬಂದರೆ ಬಹಳಷ್ಟು
ನಿಷ್ಠುರವಾದಿ.ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬೆಂಗಳೂರಿನ ಬಹಿರಂಗ ಸಭೆಯ ಅಧ್ಯಕ್ಷತೆಯನ್ನು
ಡಾ.ಚಿದಾನಂದಮೂರ್ತಿ ವಹಿಸುದ್ದರು.

ಅಧಿಕಾರ,ಸ್ಥಾನಮಾನಗಳಿಂದ ದೂರವೇ
ಉಳಿದಿದ್ದ “ಚಿಮೂ”ಅವರೇ ಕಲ್ಯಾಣ
ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕಗಳ
ಕನಸು ಕಂಡವರು.2013 ರ ಮೇ 19 ರಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಂದಿಗೆ ಬೆಂಗಳೂರಿನ ವಿಜಯನಗರದ ಅವರ ಮಿಂಚು”ನಿವಾಸಕ್ಕೆ ಹೋಗಿದ್ದೆ.ಅಲ್ಲಿಯೇ ಆವರಣದಲ್ಲಿ ಪಾರಿವಾಳ,ಗುಬ್ಬಿಗಳಿಗೆ
ಕಾಳು ಹಾಕುತ್ತ ಕುಳಿತಿದ್ದ ಅವರೊಂದಿಗೆ
ನಾಡು ನುಡಿ ಮತ್ತು ಗಡಿಯ ಬಗ್ಗೆ
ಸುಮಾರು ಹೊತ್ತು ಚರ್ಚಿಸಿದ್ದೆ.ನಂತರದ
ವರ್ಷಗಳಲ್ಲಿ ನನಗೆ ಕರಪತ್ರಗಳನ್ನು
ಕಳಿಸತೊಡಗಿದರು.ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಆರಂಭವಾಯಿತು.ಕೆಲವು ವರ್ಷಗಳ ಕಾಲ ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರಪತ್ರ ಹಂಚಿದೆವು.ಈ ಬೇಡಿಕೆಯನ್ನು ಬೆಂಬಲಿಸಿ ನಾಡಿನ ಅನೇಕ ಸಂಘಟನೆಗಳು ಚಿಂತಕರು ಹೋರಾಟಗಾರರು ಹೇಳಿಕೆಗಳನ್ನು ಬಿಡುಗಡೆ ಮಾಡತೊಡಗಿದರು.2019 ಸಪ್ಟೆಂಬರ್ 7 ರಂದು ಯಡಿಯೂರಪ್ಪ ಸರಕಾರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲು ಸಂಪುಟದಲ್ಲಿ ತೀರ್ಮಾನ ಕೈಗೊಂಡಿತು.ಸಪ್ಟೆಂಬರ್ 17 ರಂದು
ಹೈದ್ರಾಬಾದ ವಿಮೋಚನೆ ದಿನದಂದು
ಯಡಿಯೂರಪ್ಪ ಅವರು ಕಲಬುರ್ಗಿಯಲ್ಲೇ ಅಧಿಕೃತ ಘೋಷಣೆ ಮಾಡಿದರು.ಮುಂದೆ
2020 ರ ಜನೇವರಿ 11ರಂದು ಮೂರ್ತಿ ಅವರು ತಮ್ಮ 84 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.
ಕಲ್ಯಾಣ ಕರ್ನಾಟಕ ಎಂದು
ನಾಮಕರಣ ಆಗಬೇಕೆಂದು ಆ ಭಾಗದ 25 ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.

ಆದರೆ ಮುಂಬಯಿ ಕರ್ನಾಟಕದ ಯಾವ ಶಾಸಕರೂ ಈ ಕ್ಷಣದವರೆಗೂ ಅಂಥ ಮನವಿಯನ್ನು
ಸಲ್ಲಿಸಿರುವದು ಗೊತ್ತಾಗಿಲ್ಲ!ನಮ್ಮ ಕನ್ನಡ ಕ್ರಿಯಾ ಸಮಿತಿ ಈ ದಿಸೆಯತ್ತ ಹಾಲಿ ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದೆ.ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಬೊಮ್ಮಾಯಿ ಅವರು ಈಗ ಹೇಳಿದ್ದಾರೆ.ಮುಂಬಯಿಕರ್ನಾಟಕಕ್ಕೆ ಸೇರಿದ ಅವರಿಗೆ ಈ ಬಗ್ಗೆ ನೈತಿಕ ಹೊಣೆಗಾರಿಕೆ ಇದೆ.ಅಲ್ಲದೇ ಅವರ ತಂದೆ ದಿವಂಗತ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು
ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ
ಗಣ್ಯ ನಾಯಕರು.ಬಸವರಾಜ ಬೊಮ್ಮಾಯಿ ಅವರು ಸದ್ಯದ ಸುವರ್ಣ ಅವಕಾಶವನ್ನು
ಕಳೆದುಕೊಳ್ಳಬಾರದು.ಬ್ರಿಟಿಷರ ವಿರುದ್ಧ ಸೆಣೆಸಿದ ರಾಣಿ ಚೆನ್ನಮ್ಮಳ ಸಂಸ್ಥಾನವಾಗಿದ್ದ ಕಿತ್ತೂರು
ಕೇವಲ ಬೆಳಗಾವಿ ಜಿಲ್ಲೆಗೆ ಸೇರಿದ್ದೆಂದು
ಉಳಿದ ಜಿಲ್ಲೆಯವರು ಭಾವಿಸಬಾರದು.ಕಿತ್ತೂರು ಇಡೀ ದೇಶಕ್ಕೆ ಸೇರಿದ್ದು.ಝಾಂಸಿ ರಾಣಿ ಲಕ್ಷ್ಮೀಬಾಯಿ
1857 ರಲ್ಲಿ ಬ್ರಿಟಿಷರ ವಿರುದ್ಧ ಸೆಣಸಿದಕ್ಕಿಂತಲೂ 32 ವರ್ಷ ಮೊದಲೇ ರಾಣಿ ಚೆನ್ನಮ್ಮ ಬಂಡಾಯದ ಕಹಳೆ ಊದಿದವಳು.ಆಕೆಯ ಸಂಸ್ಥಾನವಾಗಿದ್ದ ಕಿತ್ತೂರಿನ ಹೆಸರಿನಿಂದ ಈ ಭಾಗವನ್ನು ಕರೆದರೆ ಅದು ಕರ್ನಾಟಕಕ್ಕೇ ಭೂಷಣ.

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ 9620114466

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *