Breaking News

ಕಾಲೇಜು ಕ್ಯಾಂಪಸ್ ನಲ್ಲಿ ಕನ್ನಡದ ಕಲರ್….!!

 

 

ಬೆಳಗಾವಿ-ವಿದ್ಯಾರ್ಥಿಗಳು ಪಾಶ್ಚಿಮಾತ್ಯ ದೇಶಗಳ ಶೈಲಿಗೆ ಮಾರುಹೋಗದೇ, ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಬೆಳಸಬೇಕು ಎಂದು ಮೆಥೋಡಿಸ್ಟ್ ಚರ್ಚ್ ನ ಸಭಾಪಾಲಕರಾದ ರೆವಿಡೆಂಟ್ ಜಯಂತ ಎಲೀಯಾ ಅವರು ತಿಳಿಸಿದರು.

ನಗರದ ಬೆನೆನ್ ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ನಾಡಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಯನ್ನು ಅಳವಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿಯು ನಶಿಸಿ ಹೋಗುತ್ತಿದೆ. ಕರ್ನಾಟಕದಲ್ಲಿ ಪ್ರತಿ 20 ಕಿ.ಮೀ ಗೆ ಭಾಷೆ, ವೇಷಭೂಷಣ, ಆಚಾರ-ವಿಚಾರಗಳು ಬದಲಿಯಾಗುತ್ತವೆ. ಕೊಡುಗಿನ ಉಡುಪು, ಉತ್ತರ ಕರ್ನಾಟಕದ ಚೋಳದ ರೊಟ್ಟಿ ಊಟ, ಬೆಳಗಾವಿಯ ಕುಂದಾ, ಧಾರವಾಡದ ಪೇಂಡಾ ಸೇರಿದಂತೆ ಇತರೆ ಸಂಸ್ಕೃತಿಯನ್ನು ಹೊಂದಿದ ನಾಡು ನಮ್ಮದು. ಇದನ್ನು ಅಳವಡಿಸಿಕೊಂಡು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಸಾಮುವೇಲ್ ಡ್ಯಾನಿಯೇಲ್ ಅವರು ಮಾತನಾಡಿ, ಕರ್ನಾಟಕದ ನಾನಾ ಭಾಗಗಳಲ್ಲಿರುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ನಾಡಹಬ್ಬ ಆಯೋಜಿಸಲಾಗಿತ್ತು. ನಾಲ್ಕು ದಿನಗಳ ಕಾಲ ನಡೆದ ಹಬ್ಬವು ಮಿನಿ ರಾಜ್ಯೋತ್ಸವದಂತೆ ನಡೆದದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ವೇಳೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ದೀಪಾ ಎಲ್., ಸಾಂಸ್ಕೃತಿಕ ವಿಭಾಗದ ವಿಶೇಷಾಧಿಕಾರಿ ನಾನಾಸಾಬ ಜಾಧವ, ಹಿರಿಯ ಉಪನ್ಯಾಸಕರಾದ ರಾಜಶ್ರೀ ಚನ್ನಮಿಲ್ಲಾ, ಡಾ.ಎಚ್.ಎನ್‌.ಚುಳಕಿ, ಪ್ರತಿಭಾ ಭಾವಿಕಟ್ಟಿ ಸೇರಿದಂತೆ ಇತರರಿದ್ದರು.

ಬಾಕ್ಸ್…
ಬಣ್ಣ ಬಣ್ಣದ ಸೀರೆಗಳಲ್ಲಿ ಕಣ್ಮಗೊಳಿಸುತ್ತಿರುವ ವಿದ್ಯಾರ್ಥಿನಿಯರು, ಪಕ್ಕಾ ಹಳ್ಳಿವೇಷದಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳು ಜೊತೆಗೆ ಕನ್ನಡ ಭಾವುಟಗಳ ಹಾರಾಟ, ಕನ್ನಡಪರ ಘೋಷಣೆಗಳ ಸದ್ದು ಸರಿಸುಮಾರು 2 ಕಿ.ಮಿ ಗೂ ಹೆಚ್ಚಿನ ವಿದ್ಯಾರ್ಥಿಗಳ ರ್ಯಾಲಿಯ ಎಲ್ಲ ದೃಶ್ಯಗಳಿಗೆ ಬೆಳಗಾವಿ ನಗರ ಸಾಕ್ಷಿಯಾಯಿತು. ಕರ್ನಾಟಕದ ಸಂಸ್ಕೃತಿ ಬಿಂಬಿಸುವ ನಾಡಹಬ್ಬದಲ್ಲಿ ಕುಂಭಮೇಳ, ಡೊಳ್ಳು ಕುಣಿತ, ಲೇಜಿಮ್, ಕೋಲಾಟ, ಕನ್ನಡಾಭಿಮಾನದ ಹಾಡುಗಳಿಗೆ ಕುಣಿಯುತ್ತಾ ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಬೋಗಾರವೇಸ್ ವೃತ್ತದಿಂದ ಪ್ರಾರಂಭವಾದ ರ್ಯಾಲಿಯು ಕಾಲೇಜು ರಸ್ತೆಯ ಮೂಲಕವಾಗಿ ರಾಣಿ ಚನ್ನಮ್ಮ ವೃತ್ತವನ್ನು ಸುತ್ತಿಕೊಂಡು ಮತ್ತೆ ಕಾಲೇಜಿಗೆ ಆಗಮಿಸಿ ಮುಕ್ತಾಯಗೊಂಡಿತ್ತು. ಬಳಿಕ ಕಾಲೇಜಿನ ಆವರಣದಲ್ಲಿ ಚಾಲುಕ್ಯರ ಅರಸ ಇಮ್ಮಡಿ ಪುಲಕೇಶಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮರ ಭಾವಚಿತ್ರಗಳಿಗೆ ವಿದ್ಯಾರ್ಥಿಗಳು ಹೂವಿನ ಸುರಿಮಳೆಗೈದರು.

 

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *