Breaking News
Home / Breaking News / ಫಲಕದಲ್ಲಿ ಕನ್ನಡದ ತಿಲಕ…ಕರವೇ ಹೋರಾಟಕ್ಕೆ ಕಡ್ಡಾಯದ ಸ್ಪಂದನೆ. ಸಿಎಂ ಗೆ ವಂದನೆ…!!

ಫಲಕದಲ್ಲಿ ಕನ್ನಡದ ತಿಲಕ…ಕರವೇ ಹೋರಾಟಕ್ಕೆ ಕಡ್ಡಾಯದ ಸ್ಪಂದನೆ. ಸಿಎಂ ಗೆ ವಂದನೆ…!!

ನಾಮ ಫಲಕ ಜಾಹಿರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಈ ವಿಚಾರದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಿಎಂ ಸಿದ್ರಾಮಯ್ಯ ಗಡುವು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ರಾಮಯ್ಯ ಕನ್ನಡಿಗರ ಮೆಚ್ವುಗೆಗೆ ಪಾತ್ರರಾಗಿದ್ದಾರೆ. ಸಿದ್ರಾಮಯ್ಯ ಕನ್ನಡದ ಸಿಎಂ ಎನಿಸಿಕೊಂಡಿದ್ದಾರೆ.

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಶೇ. 60 ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಲಾಗುವುದು. ಅಲ್ಲಿವರೆಗೆ ಎಲ್ಲರೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಕುರಿತು ನಡೆದ ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಸುತ್ತಿರುವ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ ಎಂದರು.

ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಪ್ರತಿಭಟನೆಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾತ್ರ ನಡೆಸಬೇಕು ಎಂದು 2022ರಲ್ಲಿ ಹೈಕೋರ್ಟ್ ಆದೇಶಿಸಿದೆ. ರಾಜ್ಯ ಸರ್ಕಾರ ಇದನ್ನು ಖಾತರಿಪಡಿಸಬೇಕು ಎಂದು ಸ್ಪಷ್ಟವಾದ ಆದೇಶ ಹೊರಡಿಸಿದೆ.

ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರೇ ಆಗಲಿ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *