Home / Breaking News / ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ” ಸಾಹಿತಿಗಳ ಅಭಿಮತ

ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ” ಸಾಹಿತಿಗಳ ಅಭಿಮತ

ಬೆಳಗಾವಿ, -ಇಂಗ್ಲಿಷ್ ಮೋಹದಲ್ಲಿ‌ ಕನ್ನಡದ ಅಸ್ಮಿತೆ ಕಳೆದುಹೋಗಬಾರದು; ಬರೀ ಹೋರಾಟ, ಭಾಷಣದಿಂದ ಭಾಷೆ ಬೆಳೆಯುವುದಿಲ್ಲ; ಅದರ ಜತೆಗೆ ಬಳಕೆಯಿಂದ ಭಾಷೆ ಉಳಿಸೋಣ; ಗಡಿ ಗಟ್ಟಿಗೊಳಿಸಲು ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜತೆಗೆ ಇಂಗ್ಲಿಷ್ ನ ಮಮ್ಮಿಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ “ಅವ್ವ”ನನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸೋಣ….!

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ (ಅ.31) ನಡೆದ ” ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು ಏನು” ವಿಷಯ ಕುರಿತು ಸಾಹಿತಿಗಳೊಂದಿಗೆ ನಡೆದ ಫೇಸ್‌ಬುಕ್‌ ಲೈವ್ ಸಂವಾದದಲ್ಲಿ ಕೇಳಿಬಂದ ಸಾಜಿತ್ಯ ಲೋಕದ ಒತ್ತಾಸೆಗಳಿವು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲದಲಿ ನಡೆದ ಸಂವಾದದಲ್ಲಿ ಆಶಯ ನುಡಿಗಳನ್ನು ಪ್ರಸ್ತುತಪಡಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇದುವರೆಗೆ ಆಗಿದ್ದೇನು? ಎಂಬುದರ ಆತ್ಮಾವಲೋಕನ ಮಾಡಿಕೊಂಡು ಮುಂದೆ ಆಗಬೇಕಿರುವುದು ಏನು? ಎಂಬುದರ ಬೆಳಕು ಚೆಲ್ಲಲು ಈ ಸಂವಾದ ಸಹಕಾರಿಯಾಗಲಿದೆ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಫೇಸ್‌ಬುಕ್‌ ಲೈವ್ ಮೂಲಕ ಜನರನ್ನು ತಲುಪುವ ಪ್ರಯತ್ನ ಇದಾಗಿದೆ.

ಕನ್ನಡ ಅನುಷ್ಠಾನಕ್ಕೆ ಸರ್ಕಾರ ಹತ್ತು ಹಲವು ಕ್ರಮ ಕೈಗೊಂಡಿದೆ. ಕನ್ನಡದ ಸಮರ್ಪಕ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡ ಪರಿಣಾಮ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಗೆ ಬರುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.

ಕನ್ನಡದಲ್ಲಿ‌ಆಡಳಿತ ಜಾರಿಗೆ ತರಲು ಹೊರಗುತ್ತಿಗೆ ನೌಕರರು ಸೇರಿದಂತೆ ಎಲ್ಲ‌ ನೌಕರರಿಗೂ ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಮಾಡುವ ಕುರಿತು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸಂವಾದದಲ್ಲಿ‌ ಮಾತನಾಡಿದ ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಪ್ರೊ.ಬಸವರಾಜ ಜಗಜಂಪಿ ಅವರು, ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷಾಭಿಮಾನ ಇಲ್ಲದಿರುವುದರಿಂದ ಬೆಳವಣಿಗೆಗೆ ಕುತ್ತು ಬರುತ್ತಿದೆ ಎಂದರು.

ಯಾವುದೇ ಭಾಷೆ ಕಲಿತರೂ ಅನುಕೂಲ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ನಮ್ಮದಾಗಬೇಕು.
ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು. ಇಂಗ್ಲಿಷ್ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದುಹೋಗದಂತೆ ನಾವು ಎಚ್ಚರಿಕೆ ವಹಿಸಬೇಕು.
ಇಂಗ್ಲಿಷ್ ಭ್ರಮೆಯಿಂದ ನಾವು ಹೊರಬರಬೇಕಿದೆ.
ಹೋರಾಟ ಮತ್ತು ಬರವಣಿಗೆ, ಭಾಷಣಗಳಿಂದ ಭಾಷೆ ಬೆಳೆಯುವುದಿಲ್ಲ. ಭಾಷೆಯನ್ನು ಎಲ್ಲರೂ ಕೂಡಿ ಬೆಳೆಸಬೇಕು. ಶ್ರದ್ಧೆ ಮತ್ತು ಬದ್ಧತೆ ಯಿಂದ ಕನ್ನಡ ಬೆಳವಣಿಗೆ ಸಾಧ್ಯ.

ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮತ್ತು ಸಂಪೂರ್ಣ ತಿಳಿವಳಿಕೆ ಹೊ‌ದಿರುವವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದಾಗ ಪ್ರಾಧಿಕಾರದಿಂದ ಉತ್ತಮ ಕೆಲಸ ಸಾಧ್ಯ ಎಂದು ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.

ಸಂವಾದದಲ್ಲಿ‌ ಭಾಗವಹಿಸಿದ್ದ ಸಾಹಿತಿ ಬಸವರಾಜ ಗವಿಮಠ ಅವರು, ಕೆಲವು ದಶಕಗಳ ಹಿಂದೆ ಕನ್ನಡ ಸ್ಥಿತಿ ಈಗಿನಂತೆ ಇರಲಿಲ್ಲ; ಆದರೆ ಈಗ ಬೆಳಗಾವಿಯಂತ ನಗರದಲ್ಲೂ ಕನ್ನಡದ ಕಂಪು ಹರಡಿದೆ ಎಂದು ವಿವರಿಸಿದರು.

ಸರ್ಕಾರ ಹಲವು ಸುತ್ತೋಲೆಗಳನ್ನು ಹೊರಡಿಸಿದ್ದರೂ ಅಧಿಕಾರಿ ವರ್ಗದ ನಿರಾಸಕ್ತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಾಧ್ಯವಾಗಿರುವುದಿಲ್ಲ.
ಶಿಕ್ಷಣ ಪೋಷಕರ ಹಕ್ಕಾಗಿರುವುದರಿಂದ ಕನ್ನಡ ಮಾಧ್ಯಮದ ಶಿಕ್ಷಣ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಅನುಷ್ಠಾನದಲ್ಲಿ ಉಂಟಾಗುತ್ತಿರುವ ತೊಡಕುಗಳ ಅಧ್ಯಯನಕ್ಕೆ ಸರ್ಕಾರ ಒಂದು ಸಮಿತಿ ರಚಿಸಬೇಕು. ಸಮಗ್ರ ಅಧ್ಯಯನದ ಬಳಿಕ ತೊಡಕು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಗವಿಮಠ ಸಲಹೆ ನೀಡಿದರು.

ಕನ್ನಡ-ಮರಾಠಿ ಭಾಷಾ ಸಾಮರಸ್ಯ:

ಕನ್ನಡ-ಮಹಾರಾಷ್ಟ್ರ-ಆಂಧ್ರ ರಾಜ್ಯಗಳ ಜನರ ಭಾಷೆ-ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಹಿರಿಯ ನಾಟಕಕಾರ, ವಿಮರ್ಶಕ ಮತ್ತು ಕಲಾವಿದ ಡಿ.ಎಸ್.ಚೌಗಲೆ ಅವರು, ಈ ಮೂರೂ ರಾಜ್ಯಗಳ ಸಂತರು, ದಾರ್ಶನಿಕರಿಗೆ ಉಭಯ ಭಾಷೆಗಳು ಗೊತ್ತಿದ್ದವು ಎಂದರು.

ಈ ಭಾಷೆಗಳ ನಡುವಿನ ಅನನ್ಯತೆಯನ್ನು ಸೋದಾರಣವಾಗಿ ವಿವರಿಸಿದ ಅವರು, ಪರಸ್ಪರ ಸಾಮರಸ್ಯ ಇರುವುದನ್ನು ಪ್ರತಿಪಾದಿಸಿದರು.
ಭಾಷೆಯನ್ನು ಹೋರಾಟದ ಜತೆಗೆ ಬಳಕೆಯ ಮೂಲಕ ಬೆಳೆಯಬೇಕು. ಅನ್ನದ ಭಾಷೆಯಾಗಿಯೂ ಬೆಳೆದಾಗ ಮಾತ್ರ ಕನ್ನಡವನ್ನು ಉತ್ತುಂಗಕ್ಕೇರಿಸಬಲ್ಲದು.

ಮರಾಠಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಿಂದ ಕನ್ನಡಕ್ಕೆ ಸವಾಲುಗಳಿಲ್ಲ. ಯಾವುದೇ ಭಾಷೆಯಾಗಲಿ ನಾವು ಬಳಸಿದಾಗ ಮಾತ್ರ ಅದು ಬೆಳೆಯುತ್ತದೆ ಎಂದರು.

ಹೆಚ್ಚು ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳು ನಡೆಸುವ ಮೂಲಕ ಕನ್ನಡ ಬೆಳವಣಿಗೆಗೆ ನಾವು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡವನ್ನು ಕ್ರಿಯೆಯಲ್ಲಿ ತರುವ ಮೂಲಕ ಕನ್ನಡ ಕಟ್ಟೋಣ ಎಂದು ಡಿ.ಎಸ್. ಚೌಗಲೆ ಹೇಳಿದರು.

ಸಾಹಿತಿಗಳು ಭಾಷೆಗಾಗಿ ಬೀದಿಗೆ ಇಳಿಬೇಕೆಂದೇನೂ ಇಲ್ಲ; ತನ್ನ ಕಥೆ, ಕವನ, ಪ್ರಬಂಧ, ನಾಟಕ ಮತ್ತಿತರ ಪ್ರಕಾರಗಳ ಮೂಲಕವೇ ಕನ್ನಡ ಪರ ಧ್ವನಿ ಎತ್ತುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಚೌಗಲೆ ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಸಾಹಿತಿ ನೀಲಗಂಗಾ ಚರಂತಿಮಠ ಅವರು, ಕನ್ನಡ ಬರೀ ಭಾಷೆಯಲ್ಲ; ಅದು ಬದುಕು. ಭಾಷೆ ಉಳಿದಾಗ ಮಾತ್ರ ಪ್ರದೇಶ ಉಳಿಯಲು ಸಾಧ್ಯ ಎಂದರು.

ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಭಾಷೆಯ‌ ಬಳಕೆ ಮತ್ತು ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಆಂಗ್ಲ ಮಾಧ್ಯಮ ಶಾಲೆಗಳು ಗಲ್ಲಿಗೊಂದರಂತೆ ಬೆಳೆಯುತ್ತಿರುವುದರಿಂದ ಕನ್ನಡ ಶಾಲೆಗಳಿಗೆ ಕುತ್ತು ಬಂದಿದೆ. ಮಮ್ಮಿ ಸಂಸ್ಕೃತಿಯಿಂದ ಅವ್ವ ಕಣ್ಮರೆಯಾಗುತ್ತಿದ್ದಾಳೆ.
ನಾಡಿನ ಭಾಷೆ, ಪರಂಪರೆ, ಸಂಸ್ಕೃತಿಯನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂಬ ಒತ್ತಾಸೆಯನ್ನು ವ್ಯಕ್ತಪಡಿಸಿದರು.

ಅನ್ನದ ಭಾಷೆಯಾದರೆ ಬೆಳವಣಿಗೆ ಸಲೀಸು:

ಫೇಸ್‌ಬುಕ್‌ ಲೈವ್ ಸಂವಾದವನ್ನು ನಿರ್ವಹಿಸಿದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆ ರಕ್ಷಿಸಬೇಕು ಎಂಬುದು ಕೂಡ ಕೇಂದ್ರ ಸರ್ಕಾರದ ಆಶಯವಾಗಿದೆ. ಇದಕ್ಕೆ ಶಾಸನಬದ್ದ ಅವಕಾಶ ಕಲ್ಪಿಸಬೇಕಿದೆ ಎಂದು ಪ್ರತಿಪಾದಿಸಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಕನ್ನಡ ಶಾಲೆಗಳಿವೆ. ಇತ್ತೀಚೆಗೆ ಯಾವುದೇ ಭಾಷಾಭೇದವಿಲ್ಲದೇ ಮರಾಠಿಗರು ಕೂಡ ಮಕ್ಕಳನ್ನು ಕನ್ನಡ ಶಾಲೆಗೆ‌ ಸೇರಿಸುತ್ತಿರುವುದು ಭಾಷಾ ಸಾಮರಸ್ಯಗೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಇಂಗ್ಲಿಷ್ ಮಾಧ್ಯಮ‌ ಹಾವಳಿಯಿಂದ ಕನ್ನಡ ಮತ್ತು ಮರಾಠಿ ಭಾಷಿಕ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪರ ಹೋರಾಟ ಅಥವಾ ಅನುಷ್ಠಾನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ನಿರೀಕ್ಷಿತಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ ಏಕೆ ಎಂದು ಚಂದರಗಿ ಪ್ರಶ್ನಿಸಿದರು.

ಕನ್ನಡ ಅನ್ನದ ಭಾಷೆಯಾದರೆ ಮಾತ್ರ‌ ಬೆಳೆಯುವುದು ಸಾಧ್ಯ ಎಂಬ ಕಲ್ಪನೆಯಿದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆದು ಕನ್ನಡ ಬೆಳವಣಿಗೆಗೆ‌ ಒಂದು ರೂಪುರೇಷೆ ಹಾಕಿಕೊಳ್ಳುವ ಅಗತ್ಯವಿದೆ ಎಂದರು.

ಸಂವಾದವನ್ನು ನಿರ್ವಹಿಸಿದ ಇನ್ನೋರ್ವ ಕನ್ನಡಪರ ಹೋರಾಟಗಾರ ಹಾಗೂ ಪತ್ರಕರ್ತ ಮೆಹಬೂಬ್ ಮಕಾನದಾರ, ಗಡಿ‌ ಗಟ್ಟಿಯಾಗಬೇಕಾದರೆ ಕನ್ನಡ ಶಾಲೆಗಳು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು.

ಗಡಿ ಭಾಗಿರುವ ಶಾಲೆಗಳ ಕುರಿತ‌ ಸಮಗ್ರ ವರದಿಯನ್ನು ಅಶೋಕ‌ ಚಂದರಗಿ ಸಲ್ಲಿಸಿದ್ದಾರೆ. ಮುಂಬರುವ ಕನ್ನಡ ಅನುಷ್ಠಾನ ಸಭೆಯಲ್ಲಿ ‌ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವ ಬಗ್ಗೆ ಚರ್ಚಿಸಿ, ಸರ್ಕಾರಕ್ಕೆ ಪ್ರಸ್ತಾಪವನ್ನು ಕಳಿಸಬೇಕು ಎಂದು‌ ಸಲಹೆ ನೀಡಿದರು.

ಫಲಕ ಮತ್ತು ಜಾಹೀರಾತು ಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ರಾಜ್ಯೋತ್ಸವ ಮುನ್ನಾ ದಿನ ವಿಚಾರಸಂಕಿರಣ ಆಯೋಜಿಸುವ ಮೂಲಕ ರಾಜ್ಯೋತ್ಸವ ಅರ್ಥಪೂರ್ಣಗೊಳಿಸಬೇಕು ಎಂದು ಮೆಹಬೂಬ್ ಮಕಾನದಾರ ಒತ್ತಾಯಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಫೇಸ್‌ಬುಕ್‌ ಲೈವ್ ಕಾರ್ಯಕ್ರಮವು ಬೆಳಿಗ್ಗೆ 10.30 ರಿಂದ 11.30 ರವರೆಗೆ https://www.facebook.com/deobelagavi ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರಗೊಂಡಿತು.
****

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *