Breaking News

ಬೆಳಗಾವಿಯಲ್ಲಿ, ಮಾತಾಡ್ ಮಾತಾಡ್ ಕನ್ನಡ….!!!

ಮಾತಾಡ್ ಮಾತಾಡ್ ಕನ್ನಡ, ಗೀತಗಾಯನ ಕಾರ್ಯಕ್ರಮ

ಕನ್ನಡಕ್ಕಾಗಿ ನಾವು ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ

ಬೆಳಗಾವಿ,-2021 ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಮಿತ್ತ “ಕನ್ನಡಕ್ಕಾಗಿ ನಾವು-ಅಭಿಯಾನ”ವನ್ನು ಸರಕಾರ ಹಮ್ಮಿಕೊಂಡಿದೆ. ಈ ಅಭಿಯಾನದಡಿ ಬರುವ ಗೀತಗಾಯನ, ಮಾತಾಡ್ ಮಾತಾಡ್ ಸೇರಿದಂತೆ ವಿವಿಧ ಬಗೆಯ  ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

“ಕನ್ನಡಕ್ಕಾಗಿ ನಾವು-ಅಭಿಯಾನ”ದ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ಅ.26) ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿಯು ಅತ್ಯಂತ ದೊಡ್ಡ ಜಿಲ್ಲೆ ಮಾತ್ರವಲ್ಲದೆ ಗಡಿ ಜಿಲ್ಲೆಯಾಗಿರುವುದರಿಂದ ಕನ್ನಡದ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ಬರುತ್ತದೆ. ಆದ್ದರಿಂದ ಅಭಿಯಾನವನ್ನು ಯಶಸ್ವಿಗೊಳಿಸಲು ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರು 2021ನೇ ಸಾಲಿನಲ್ಲಿ ರಾಜ್ಯೋತ್ಸವ ಆಚರಣೆಯನ್ನು ವಿಶೇಷವಾಗಿ ಆಚರಣೆ ಮಾಡುವ ಕುರಿತಂತೆ ನಿರ್ದೇಶಿಸಿದರನ್ವಯ ಜಿಲ್ಲೆಯಲ್ಲಿ ದಿನಾಂಕ: 29-10-2021 ರಿಂದ 31-10-2021 ರವರೆಗೆ 2021 ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಮಿತ್ತವಾಗಿ “ಸಾಮೂಹಿಕ ಕನ್ನಡ ಗೀತಗಾಯನ” “ಕನ್ನಡಕ್ಕಾಗಿ ನಾವು-ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸಬೇಕು.

ಅ.28 ರಂದು ಜಿಲ್ಲೆಯಾದ್ಯಂತ ಗೀತಗಾಯನ ಕಾರ್ಯಕ್ರಮ:
ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಮಿತ್ತ ದಿನಾಂಕ :28-10-2021 ಮುಂಜಾನೆ 11:00 ಗಂಟೆಗೆ ಏಕಕಾಲಕ್ಕೆ ನಗರದ ಸರ್ಕಾರಿ ಕಚೇರಿಗಳಲ್ಲಿ, ಸಂಘ-ಸಂಸ್ಥೆಗಳ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಇಲಾಖೆ ನಿರ್ದೇಶನದ ಹಾಡುಗಳಾದ ಡಾ. ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಂಮವಾ’, ಡಾ. ಕೆ.ಎಸ್. ನಿಸಾರ್ ಅಹ್ಮದರವರ ‘ಜೋಗದ ಸಿರಿ ಬೆಳಕಿನಲಿ’ ಹಾಗೂ ಶ್ರೀ ಹಂಸಲೇಖರವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಮೂರು ಗೀತೆಗಳನ್ನು ಏಕಕಾಲಕ್ಕೆ ಹಾಡಿಸಲು ತಯಾರಿ ಮಾಡಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಕಾರ್ಯಕ್ರಮ ಏರ್ಪಡಿಸಬೇಕು.

ಮೂರು ಹಾಡುಗಳನ್ನು ಇಲಾಖೆಯಿಂದ ಕಳುಹಿಸಲಾಗಿರುವ ಲಿಂಕ್ https://docs.google.com/forms/d/e/1FAIpQLScoF5pS1bI0OmxNDjm0cxLz65gTTs_mKtUw-I49Ij46A/viewform?vc=0&c=0&w=1&flr=0 ಅನ್ನು ಬಳಸಿ ಒಟ್ಟಾಗಿ ಹಾಡುವುದು, ರೆಕಾರ್ಡ್‌ ಮಾಡುವುದು ಹಾಗೂ ಅಪ್‌ ಲೋಡ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅದೇ ರೀತಿ  ಎಲ್ಲ ಗ್ರಾಮ ಪಂಚಾಯತ ಮಟ್ಟದಲ್ಲಿ ಈ ಮೂರು ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೀತಗಾಯನ ಕಾರ್ಯಕ್ರಮ ಏರ್ಪಡಿಸುವಂತೆ ಹೇಳಿದರು.

ಸುವರ್ಣ ಸೌಧದಲ್ಲೂ ಗೀತಗಾಯನ:

28-10-2021 ಮುಂಜಾನೆ 11:00 ಗಂಟೆಗೆ ಸುವರ್ಣಸೌಧದಲ್ಲಿ ಗೀತಗಾಯನ ಪ್ರಸ್ತುತ ಪಡಿಸಲು  ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಸಿಬ್ಬಂದಿಗಳಿಗೆ ಧ್ವನಿ ವರ್ಧಕ, ಮೈಕ್ ಅಳವಡಿಸುವುದು ಹಾಗೂ ವಿದ್ಯಾರ್ಥಿಗಳನ್ನು, ಕಲಾವಿದರನ್ನು ಸಿಬ್ಬಂಧಿಗಳನ್ನು ಆಯಾ ಇಲಾಖೆಯವರು ಸುವರ್ಣಸೌಧಕ್ಕೆ ಕರೆದುಕೊಂಡು ಬರಲು ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.

ಇದೇ ಮಾದರಿಯಲ್ಲಿ ಜಿಲ್ಲೆಯ ವಿವಿಧ ಉದ್ಯಮ ಕೇಂದ್ರಗಳಲ್ಲಿ , ಕೈಗಾರಿಕಾ ಕಂಪನಿಗಳಲ್ಲಿ ಮೂರು ಗೀತಗಾಯನ ಏರ್ಪಡಿಸಲು ಕ್ರಮವಹಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಸಂಘ-ಸಂಸ್ಥೆಗಳಿಂದಲೂ ಗೀತಗಾಯನ:

ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದ ಸಂಘ-ಸಂಸ್ಥೆಗಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯವರು ಗೀತ ಗಾಯನ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಮಾತಾಡ್ ಮಾತಾಡ್ ಕನ್ನಡ:

“ಕನ್ನಡಕ್ಕಾಗಿ ನಾವು-ಅಭಿಯಾನ”ದ ‘ಮಾತಾಡ್ ಮಾತಾಡ್ ಕನ್ನಡ’ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡದಲ್ಲೇ ಮಾತು, ಬರವಣಿಗೆ, ಸಹಿ ಮತ್ತು ಸಂದೇಶ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಹಿರೇಮಠ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಹಿ ಮತ್ತು ಸಂದೇಶ ಕುರಿತು ಬೆಳಗಾವಿ ನಗರದಲ್ಲಿ ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ ಇವರು  ಸಿದ್ದತೆ ಮಾಡಿಕೊಳ್ಳಬೇಕು.

ಅಥಣಿ/ಗೋಕಾಕ/ಚಿಕ್ಕೋಡಿ/ಹುಕ್ಕೇರಿ/ರಾಯಬಾಗ/ಖಾನಾಪೂರ/ಬೈಲಹೊಂಗಲ/ಕಿತ್ತೂರು/ರಾಮದುರ್ಗಕಾಗವಾಡ/ನಿಪ್ಪಾಣಿ/ಸವದತ್ತಿ/ಮೂಡಲಗಿ/ಬೆಳಗಾವಿ ತಾಲೂಕಿನ ತಹಶೀಲದಾರರು ಕನ್ನಡ ಮತ್ತು    ಸಂಸ್ಕೃತಿ ಇಲಾಖೆಯ ಸಮನ್ವಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು.

ಅ.29 ರಂದು ಸಂಸ್ಕೃತಿ ಮೇಳ:

ಅಕ್ಟೋಬರ್ 29-10-2021ರಿಂದ 31-10-2021 ರವರೆಗೆ ಬೆಳಗಾವಿ ನಗರದ  ಕುಮಾರ ಗಂಧರ್ವ ಕಲಾಮಂದಿರದಲ್ಲಿ ಕನ್ನಡ ಸಂಸ್ಕೃತಿ ಕಲಾಮೇಳ ಕಾರ್ಯಕ್ರಮ  ಆಯೋಜಿಸಬೇಕು.
ಮೂರು ದಿನಗಳವರೆಗೆ ಜಿಲ್ಲೆಯ ವಿಶೇಷತೆ ಹೊಂದಿದ ತಿಂಡಿ ತಿನಿಸುಗಳ, ಉಡುಪುಗಳ, ಕರಕುಶಲ ವಸ್ತುಗಳ, ಚಿತ್ರ/ಶಿಲ್ಪಕಲಾಕೃತಿಗಳ ಪ್ರದರ್ಶನ ಹಾಗೂ ಪುಸ್ತಕ ಮೇಳ ಮಳಿಗೆಗಳಲ್ಲಿ ಒಳಗೊಂಡಿರಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ದೇಶೀಯ ಉಡುಪುಗಳು ಮತ್ತು ವಿವಿಧ ತರಹದಲ್ಲಿ ತಯಾರಿಸಲಾಗುತ್ತಿರುವ ಉಡುಪುಗಳು, ವಸ್ತುಗಳ  ಮತ್ತು ಆಹಾರ ಮೇಳಗಳನ್ನು ಆಯೋಜಿಸಿ ಪ್ರದರ್ಶನ ಮಾಡುವುದು ಹಾಗೂ ಮಾರಾಟ  ಮಾಡಲು ಸಭೆಯಲ್ಲಿ ಸೂಚಿಸಲಾಯಿತು.

28-10-2021 ರಂದು ಮುಂಜಾನೆ 11: 00 ಗಂಟೆಗೆ ಸುವರ್ಣ ಸೌಧದಲ್ಲಿ ಜರುಗುವ ಗೀತಗಾಯನ ಕಾರ್ಯಕ್ರಮ ಹಾಗೂ ದಿ: 29-10-2021 ರಂದು ಸಂಜೆ 04:30 ಗಂಟೆಗೆ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜರುಗುವ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ವ್ಯವಸ್ಥೆ ಒದಗಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಸಾಂಬ್ರಾ ವಿಮಾನ ನಿಲ್ದಾಣ ಹಾಗೂ ಸುವರ್ಣಸೌಧದಲ್ಲಿ ನಡೆಯುವ ಗೀತಗಾಯನ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೆರಲು ಅಗತ್ಯ ಹಾಗೂ ಶಾಲಾ ಹಂತದಲ್ಲಿ ಜರುಗುವ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

ಅದೇ ರೀತಿ ಜಿಲ್ಲೆಯ ವಿವಿಧ ಪದವಿ ಪೂರ್ವ ಹಾಗೂ ಕಾಲೇಜು ಹಂತದಲ್ಲಿ ಸುವರ್ಣ ಸೌಧದಲ್ಲಿ ಗೀತಗಾಯನ ಜರುಗುವ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯ ಮೇಲುಸ್ತುವಾರಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನೋಡಿಕೊಳ್ಳಬೇಕು ಎಂದರು.

ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕಾದ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು ಶ್ರದ್ದೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೆಳಗಾವಿ ವಲಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಕನ್ನಡ ಮತ್ತು  ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****

Check Also

ರಿವರ್ ಕ್ರಾಸ್ಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿಯ ಇಬ್ಬರು ಕಮಾಂಡೋಗಳ ಸಾವು

ಬೆಳಗಾವಿ -ರಿವರ್ ಕ್ರಾಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿದ ಪರಿಣಾಮ ಮೃತಪಟ್ಟ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.