ಕರಾಳ ದಿನಾಚರಣೆಗೆ ಅನುಮತಿ ಬೇಡ- ಕರವೇ
ಬೆಳಗಾವಿ-ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರದಲ್ಲಿ ಲಕ್ಷಾಂತರ ಕನ್ನಡಿಗರು ಸೇರಿ ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡದ ಹಬ್ಬವನ್ನಾಗಿ ಆಚರಿಸುವ ಸಂಧರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು,ಸೈಕಲ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಗೆ ಅನುಮತಿ ನೀಡಿದ್ರೆ,ಸರ್ಕಾರ ನಾಡವಿರೋಧಿ ಸರ್ಕಾರ, ಎಂದು ಸಾಭೀತಾಗುತ್ತದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂಇಎಸ್ ಸೈಕಲ್ ರ್ಯಾಲಿಯನ್ನು ನಿಷೇಧಿಸಿ,ಕರಾಳ ದಿನಾಚರಣೆ ಮಾಡುವ ನಾಡದ್ರೋಹಿಗಳನ್ನು ಜೈಲಿಗೆ ಕಳುಹಿಸುವ ಮೂಲಕ ನಾಡಿನ ಹಿತವನ್ನು ಕಾಯಬೇಕೆಂದು ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯೋತ್ಸವದ ದಿನ,ಎಂಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಬಾರದು ಎಂದು ಹಲವಾರು ದಶಕಗಳಿಂದ ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದು,ರಾಜ್ಯ ಸರ್ಕಾರಗಳು ನಾಡದ್ರೋಹಿಗಳಿಗೆ ರಾತ್ರೋ ರಾತ್ರಿ ಅನುಮತಿ ನೀಡಿ ಕನ್ನಡಿಗರಿಗೆ ಮೋಸ ಮಾಡುತ್ತಲೇ ಬಂದಿದ್ದು,ಈ ಬಾರಿಯೂ ಸರ್ಕಾರ ಕರಾಳ ದಿನಾಚರಣೆಗೆ ಅನುಮತಿ ನೀಡಿದ್ರೆ ಕರವೇ ಕಾರ್ಯಕರ್ತರು ಇದನ್ನು ಸಹಿಸುವದಿಲ್ಲ ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗಲೆಲ್ಲಾ ಕಪ್ಪು ಬಾವುಟ ತೋರಿಸುತ್ತೇವೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ನಾಡವಿರೋಧಿ ಎಂಇಎಸ್ ನಾಯಕರು ಈ ಬಾರಿಯೂ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಬೆಳಗಾವಿಗೆ ಕರೆಯಿಸಿ,ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ದುಸ್ಸಹಾಸಕ್ಕೆ ಕೈ ಹಾಕಿದ್ದು, ಕೊಲ್ಹಾಪೂರದ ಶಿವಸೇನೆ ಮುಖಂಡ ವಿಜಯ ದೇವಣೆಗೆ ತಾಕತ್ತಿದ್ದರೆ ಬೆಳಗಾವಿಗೆ ಬರಲಿ,ಕರವೇ ಕಾರ್ಯಕರ್ತರು ವಿಜಯ ದೇವಣೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ.
ನಾಯಿ ಕೂಗಿದ್ರೆ ದೇವಲೋಕ ಹಾಳಾಗುವದಿಲ್ಲ,ಎಂಇಎಸ್ ತಿಪ್ಪರಲಾಗ ಹಾಕಿದ್ರೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವೇ ಇಲ್ಲ.ಸೂರ್ಯ ಚಂದ್ರ ಇರೋವರೆಗೆ ಬೆಳಗಾವಿಯ ನೆಲ ಕನ್ನಡದ ನೆಲವಾಗಿಯೇ ಇರುತ್ತದೆ.ಎಂಇಎಸ್ ನಾಯಕರ ಚೀರಾಟ ಗುದ್ದಾಟದಿಂದ ಬೆಳಗಾವಿಯ ಒಂದಿಂಚೂ ಜಾಗ ಅಲಗಾಡುವದಿಲ್ಲ,ಬೆಳಗಾವಿ ಎಂದೆಂದಿಗೂ ನಮ್ಮದಾಗಿರುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಪ್ಪು ಉತ್ಸವ…
ಕರ್ನಾಟಕದ ರತ್ನ ಪುನೀತ ರಾಜ್ ಕುಮಾರ ನಮ್ಮನ್ನು ಅಗಲಿ ಒಂದು ವರ್ಷವಾಗಿದೆ,ಬೆಳಗಾವಿಯಲ್ಲಿ ಅಪ್ಪು ಅವರನ್ನು ವಿಶೇಷವಾಗಿ ಸ್ಮರಿಸಲು ಕರವೇ ನಿರ್ಧರಿಸಿದೆ.ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಅಪ್ಪು ಉತ್ಸವವನ್ನು ಆಚರಿಸುತ್ತೇವೆ.ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿಯೊಬ್ಬ ಕನ್ನಡದ ಸೇನಾನಿ ಕನ್ನಡದ ಬಾವುಟದ ಜೊತೆ ಅಪ್ಪು ಭಾವಚಿತ್ರವನ್ನು ತಂದು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸುವ ಮೂಲಕ ರಾಜ್ಯೋತ್ಸವವನ್ನು ಅಪ್ಪು ಉತ್ಸವವನ್ನಾಗಿ ಆಚರಿಸುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮನವಿ ಮಾಡಿದ್ದಾರೆ.