Breaking News

ಅಂಗವಿಕಲರಿಗೆ ಉಚಿತ ಅಟೋ ಸೇವೆ..ಮಾಡುವ ರಿಕ್ಷಾಚಾಲಕ

ಬೆಳಗಾವಿ: ಕುಟುಂಬ ನಿರ್ವಹಣೆ ಮತ್ತು ಹೊಟ್ಟೆ ಪಾಡಿಗಾಗಿ ಕಳೆದ 6 ವರ್ಷಗಳ ಹಿಂದೆ ಆಟೋ ಖರೀದಿಸಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ 37 ರ ಹರೆಯದ ವ್ಯಕ್ತಿ ಕಳೆದ ಒಂದು ವರ್ಷದಿಂದ ಅಂಗವಿಕಲರಿಗೆ, ಅಸಹಾಯಕರಿಗೆ ಉಚಿತ ಆಟೋ ಸೇವೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿಯ ರುಕ್ಮಿಣಿ ನಗರದ ಆಶ್ರಯ ಬಡಾವಣೆಯ ಪುಟ್ಟ ಮನೆಯಲ್ಲಿ 7 ಜನರನ್ನೊಳಗೊಂಡ ಕುಟುಂಬದ ಯಜಮಾನನಾಗಿ ಸಮಾಜ ಸೇವೆಯ ಜೊತೆಗೆ ಬದುಕು ಸಾಗಿಸುತ್ತಿರುವ ಅಯೂಬ್ ಅದಮ್‍ಸಾಬ ಮುಲ್ಲಾ ಹೃದಯವಂತ ಆಟೋ ಚಾಲಕ.
ಬೆಳಗಾವಿ ಕೇಂದ್ರ ಬಸ್ ನಿಲ್ದಾನದ ಪಕ್ಕದ ಆಟೋ ಸ್ಟ್ಯಾಂಡ್‍ನ್ನು ಕೇಂದ್ರವಾಗಿರಿಸಿಕೊಂಡಿರುವ ಅಯೂಬ್ ಮುಲ್ಲಾ ಕಳೆದ ಒಂದು ವರ್ಷದ ಹಿಂದೆ ನಡೆದ ಚಿಕ್ಕ ಘಟನೆಯಿಂದ ತಮ್ಮೊಳಗಿನ ಒಳ್ಳೆಯ ತನವನ್ನು ಬಡಿದೆಬ್ಬಿಸಿದರು. ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್‍ನಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ಅಯೂಬ್ ಹತ್ತಿರದಲ್ಲಿ ಅಸಹಾಯಕಳಾಗಿ ನಿಂತ ಅಂಗವಿಕಲ ಮಹಿಳೆಯನ್ನು ಗಮನಿಸುತ್ತಿದ್ದ. ಮಹಿಳೆಗೆ ಸ್ಥಳ ಬಿಟ್ಟು ಕದಲಲಾಗುತ್ತಿರಲಿಲ್ಲ. ಸುಮಾರು ಒಂದು ಗಂಟೆ ಕಾಲ ಬಿಸಿಲಲ್ಲಿ ನಿಂತು ತನ್ನದೆಯಾದ ಸಂಕಟದಲ್ಲಿ ಅಸಹಾಯಕಳಾಗಿದ್ದ ಮಹಿಳೆಯತ್ತ ನಡೆದ ಆಟೋ ಚಾಲಕ ಅಯೂಬ್ ಅವರು ತಾವು ಎಲ್ಲಿಗೆ ಹೋಗಬೇಕಿದೆ ಎನ್ನುವ ಪ್ರಶ್ನೆ ಕೇಳಿದಾಗ, ಮಹಿಳೆ ಕೆಎಲ್‍ಇ ಆಸ್ಪತ್ರೆಗೆ ಹೋಗಬೇಕಿದೆ ಎನ್ನುವ ಉತ್ತರ ನೀಡಿದರು. ಬನ್ನಿ ನನ್ನ ಆಟೋ ಇದೆ ಕರೆದೊಯ್ಯುತ್ತೇನೆ ಎಂದಾಗ ಮಹಿಳೆ ನನ್ನಲ್ಲಿ ಹಣವಿಲ್ಲ ಎನ್ನುವ ಮಾತು ಹೇಳಿದಳು.
ಕ್ಷಣ ಹೊತ್ತು ತನ್ನೊಳಗೆ ತಾನೆ ಯೋಚಿಸಿದ ಆಟೋ ಚಾಲಕ ಅಯೂಬ್ ಬನ್ನಿ ನಿಮ್ಮನ್ನು ಆಸ್ಪತ್ರಗೆ ಬಿಡುತ್ತೇನೆ. ನನಗೆ ಹಣ ಕೊಡಬೇಡಿ ಎಂದು ಅಸಹಾಯಕ ಮಹಿಳೆಯನ್ನು ಆಟೋದಲ್ಲಿ ಕರೆದೊಯ್ದು ಆಸ್ಪತ್ರೆಗೆ ತಲುಪಿಸಿದರು.
ಆ ಒಂದು ದಿನದ ಘಟನೆ ಇಂದು ಒಂದು ವರ್ಷ ಕಳೆದರೂ ಮರೆತಿಲ್ಲ ಎನ್ನುತ್ತಾರೆ ಅಯೂಬ್. ಅದರಿಂದ ಸಿಗುವ ನೆಮ್ಮದಿ, ಸಮಾಧಾನ ಮತ್ತೆಲ್ಲಿಯೂ ಸಿಗದು. ಅಂದಿನಿಂದ ಇದೊಂದು ದೇವರ ಕೆಲಸ ಎನ್ನುವ ನಂಬಿಕೆಯಿಂದ ಪ್ರತಿದಿನ ಬೆಳಗಿನ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಂದರೆ 15 ಗಂಟೆಗಳ ಕಾಲ ತಮಗೆ ಅಸಹಾಯಕರ ಯಾವುದೇ ಕರೆಗಳು ಬಂದರೆ ಅವುಗಳನ್ನು ಸ್ವೀಕರಿಸಿ ಅವರಿಗೆ ಆಟೋ ಸೇವೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ, ಇದರಿಂದ ನೆಮ್ಮದಿಯಿಂದ ಬದುಕುತ್ತಿದ್ದೇನೆ ಎನ್ನುತ್ತಾರೆ ಅಯೂಬ್.
ಅಸಹಾಯಕರಿಗೆ ಒಂದು ರೀತಿಯಲ್ಲಿ ದಿನದ ಸೇವೆಯಾದರೆ ಈ ನಡುವೆ ಸಾಮಾನ್ಯ ಗ್ರಾಹಕರಿಗೆ ಆಟೋ ಸೇವೆ ನೀಡಿ ಬಂದ ಹಣದಲ್ಲಿ ಬದುಕು ಕಟ್ಟಿಕೊಂಡಿರುವ ಅಯೂಬ್ ತಮ್ಮ ಕೊನೆಯ ಉಸಿರು ಇರುವವರೆಗೂ ಈ ಸೇವೆ ನಿರಂತರ ಎಂದು ಬಿಚ್ಚು ಮನಸ್ಸಿನಿಂದ ಹೇಳಿಕೊಂಡರು.
ಅಯೂಬ್ ಅವರ ಅಸಹಾಯಕರ ಆಟೋ ಸೇವೆ ನಿರಂತರವಾಗಿರಲಿ. ಇವರಂತೆ ಇತರೇ ಆಟೋ ಚಾಲಕರು ಇಂಥ ಸೇವೆಗಳಿಗೆ ಅನಿಯಾಗಲಿ ಎಂದು ಆಶಿಸೋಣ. ಅಯೂಬ್ ಅವರ ಉಚಿತ ಆಟೋ ಸೇವೆಯ ಮೊಬೈಲ್ 9343884425 ಇಲ್ಲಿ ಅಸಹಾಯಕರು ಸಂಪರ್ಕಿಸಬಹುದು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.