ಕಂಟೈನ್ಮೆಂಟ್ ಝೋನ್ ಹಿರೇಬಾಗೇವಾಡಿಗೆ ಜಿಲ್ಲಾಧಿಕಾರಿ ಭೇಟಿ- ಗ್ರಾಮಸ್ಥರ ಜತೆ ಸಭೆ

ಕಂಟೈನ್ಮೆಂಟ್ ಝೋನ್ ಹಿರೇಬಾಗೇವಾಡಿಗೆ ಜಿಲ್ಲಾಧಿಕಾರಿ ಭೇಟಿ- ಗ್ರಾಮಸ್ಥರ ಜತೆ ಸಭೆ
—————————————————————
ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಭರವಸೆ

ಬೆಳಗಾವಿ-ಹಿರೇಬಾಗೇವಾಡಿ ಗ್ರಾಮಸ್ಥರು ಕೋವಿಡ್-೧೯ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇಲ್ಲಿನ ಜನರ ಸಮಸ್ಯೆಗಳನ್ನು ಜಿಲ್ಲಾಡಳಿತ ಗಮನಿಸಿದ್ದು, ವೈದ್ಯಕೀಯ ಸೌಲಭ್ಯ, ಅಗತ್ಯ ವಸ್ತುಗಳ ಪೂರೈಕೆ, ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸೋಂಕು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಲ್ಲರೂ ಸಹಕರಿಸಿದರೆ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಕಂಟೈನ್ಮೆಂಟ್ ಝೋನ್ ಹಿರೇಬಾಗೇವಾಡಿಯಲ್ಲಿ ಕೋವಿಡ್-೧೯ ತಡೆಗಟ್ಟುವಿಕೆ ಹಾಗೂ ಅಲ್ಲಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ (ಮೇ 1) ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಂಟೈನ್ಮೆಂಟ್ ಝೋನ್ ನಲ್ಲಿ ಟ್ರ್ಯಾಕ್ಟರ್ ಮೂಲಕ ಪಡಿತರ ಆಹಾರಧಾನ್ಯವನ್ನು ವಿತರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿರುವ ವಲಸೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಕಿಟ್ ವಿತರಿಸಲು ತಿಳಿಸಿದರು. ಪ್ರತಿದಿನ ಸ್ವಚ್ಛತೆ ಮತ್ತು ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು

ಜಿಲ್ಲೆಯ ಎಲ್ಲ ಹತ್ತೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಟ್ರ್ಯಾಕ್ಟರ್ ಮೂಲಕ ಮನೆ ಮನೆಗೆ ಪಡಿತರ ತಲುಪಿಸಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ಹಿರೇಬಾಗೇವಾಡಿ ಗ್ರಾಮದ 175 ಜನರ ಗಂಟಲು ದ್ರವ ಮಾದರಿಯ ವರದಿ ಬರಬೇಕಿದೆ.
ಜನರಿಗೆ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಮೊಬೈಲ್ ಕ್ಲಿನಿಕ್ ಈಗಾಗಲೇ ಗ್ರಾಮಕ್ಕೆ ಒದಗಿಸಲಾಗಿದ್ದು, ಅವಶ್ಯಕತೆ ಆಧರಿಸಿ ಇನ್ನು ಎರಡು ಮೊಬೈಲ್ ಕ್ಲಿನಿಕ್ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಲು, ದಿನಸಿ, ತರಕಾರಿ ಸೇರಿದಂತೆ ಎಲ್ಲ ಬಗೆಯ ಅಗತ್ಯ ವಸ್ತುಗಳನ್ನು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ನಿರ್ದೇಶನ ನೀಡಿದರು.

2700 ಮನೆಗಳು ಸುಮಾರು 3000 ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೂ ಅಗತ್ಯವಿರುವ ವಸ್ತುಗಳನ್ನು ಪೂರೈಸುವ ಬಗ್ಗೆ ಸರ್ಕಾರದ ನಿಯಮಾವಳಿ ಪ್ರಕಾರ ಪರಿಶೀಲಿಸಲಾಗುವುದು. ಆದರೆ ಎಲ್ಲ ಕುಟುಂಬಗಳಿಗೆ ಪೂರೈಸುವುದು ಸಾಧ್ಯವಾಗದಿದ್ದರೆ ಸ್ಥಿತಿವಂತ ಕುಟುಂಬಗಳು ಸಹಕರಿಸಬೇಕು ಎಂದರು.

ಕಂಟೈನ್ಮೆಂಟ್ ಝೋನ್ ನಲ್ಲಿ ಏಪ್ರಿಲ್ ನಲ್ಲಿ 2820 ಕಾರ್ಡುದಾರರಿಗೆ ಒಟ್ಟು 870 ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ.
ಮೇ ತಿಂಗಳ ಕೇಂದ್ರದ ಗರೀಬ್ ಕಲ್ಯಾಣ ಯೋಜನೆಯಡಿ 905 ಕ್ವಿಂಟಲ್ ಅಕ್ಕಿ ಬಂದಿರುತ್ತದೆ. ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ‌. ಅಕ್ಕಿ ಹಾಗೂ ಒಂದು ಕೆ.ಜಿ. ಬೇಳೆ ನೀಡಲಾಗುತ್ತಿದೆ.

ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದ್ದರೆ ಅಂತಹವರಿಗೂ ಹತ್ತು ಕೆ.ಜಿ‌ ಅಕ್ಕಿ ಈ ತಿಂಗಳಿನಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಆಹಾರ ಮತ್ತ ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ವಿವರಿಸಿದರು

ದಿನಸಿ, ಮೇವು, ವೈದ್ಯಕೀಯ ಸೌಲಭ್ಯ ಒದಗಿಸಲು ಮನವಿ:

ಗ್ರಾಮದಲ್ಲಿ 37 ಪ್ರಕರಣಗಳು ಪತ್ತೆಯಾಗಿರುವುದರಿಂದ ಕರೊನಾ ತಡೆಗಟ್ಟಲು ಇನ್ನಷ್ಟು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೆಡ್ ಝೋನ್ ಆಗಿರುವುದರಿಂದ ಸರ್ಕಾರದಿಂದ ಎಲ್ಲರಿಗೂ ಮಾಸ್ಕ್ ವಿತರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಗ್ರಾಮದಲ್ಲಿ ವಾಸವಾಗಿರುವ ಬಡವರಿಗೆ, ಕಾರ್ಮಿಕರಿಗೆ ದಿನಸಿ ಮತ್ತಿತರ ಅಗತ್ಯವಿರುವ ವಸ್ತುಗಳನ್ನು ಒದಗಿಸಬೇಕು.
ರೈತರು ಜಮೀನುಗಳಿಗೆ ತೆರಳಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಪ್ರಮುಖರೊಬ್ಬರು ಮನವಿ ಮಾಡಿಕೊಂಡರು.

ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ತಕ್ಷಣವೇ ಸೂಕ್ತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಬೇಕು ಎಂದು ಅನೇಕ ಜನರು ಮನವಿ ಮಾಡಿಕೊಂಡರು.
ಮೊಬೈಲ್ ಫೀವರ್ ಕ್ಲಿನಿಕ್ ಮತ್ತು ಎಟಿಎಂ ಕೇಂದ್ರಗಳನ್ನು ಆರಂಭಿಸಬೇಕು ಕೆಲವರು ವಿನಂತಿಸಿಕೊಂಡರು.

ಎಲ್ಲರ ಮಾದರಿ ಸಂಗ್ರಹಿಸಲು ಮನವಿ:

ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬರುವ ಹದಿನೈದು ದಿನಗಳಲ್ಲಿ ಗ್ರಾಮದ ಎಲ್ಲ ಜನರ ಗಂಟಲು ದ್ರವ ಮಾದರಿ ಸಂಗ್ರಹಿಸುವ ಮೂಲಕ ಸೋಂಕು ಹರಡುವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಮಾರ್ಗಸೂಚಿ ಪ್ರಕಾರ ಸೋಂಕಿತರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವದ ಮಾದರಿಯನ್ನು ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಅತೀ ಹೆಚ್ಚು ಪ್ರಕರಣ ಕಂಡುಬರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಹೈರಿಸ್ಕ್ ಗ್ರುಪ್ ನಲ್ಲಿರುವರ ಹಾಗೂ ಉಸಿರಾಟ ತೊಂದರೆ, ಜ್ವರ, ಹೃದಯ ಅಥವಾ ಕಿಡ್ನಿ ತೊಂದರೆ ಇರುವವರ ಮಾದರಿಯನ್ನು ಪರೀಕ್ಷಿಸಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ವೈದ್ಯಕೀಯ ಸೌಲಭ್ಯ; ಮೇವು, ಹಾಲು, ತರಕಾರಿ ಪೂರೈಕೆಗೆ : ಹೆಬ್ಬಾಳಕರ್ ಒತ್ತಾಯ

ಹಿರೇಬಾಗೇವಾಡಿ ಗ್ರಾಮದಲ್ಲಿ ಹೆಚ್ಚು ಪ್ರಕರಣ ಕಂಡುಬಂದಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮೊದಲು ಅವರ ಆತಂಕ ದೂರ ಮಾಡುವ ಕೆಲಸವಾಗಬೇಕಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಪ್ರಕರಣ ಹೆಚ್ಚಾಗಿ ಕಂಡುಬಂದಿರುವ ಗ್ರಾಮದ ನಿರ್ದಿಷ್ಟ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪರೀಕ್ಷೆಗಳು ನಡೆಸಬೇಕು. ಆದರೆ ಸೋಂಕಿತರಲ್ಲೂ ಯಾವುದೇ ಲಕ್ಷಣಗಳು ಕಂಡುಬಾರದಿರುವುದರಿಂದ ಎಲ್ಲರಿಗೂ ಏಕಕಾಲಕ್ಕೆ ಪರೀಕ್ಷೆ ಮಾಡುವುದು ವೈಜ್ಞಾನಿಕವಾಗಿ ಸೂಕ್ತವಲ್ಲ ಎಂದರು.

ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು.
ಹಿರೇಬಾಗೇವಾಡಿ ಗ್ರಾಮದಲ್ಲಿ ಕೂಡ ಸರ್ಕಾರದಿಂದ ನೀಡಲಾಗುತ್ತಿರುವ ಉಚಿತ ಹಾಲು ಒದಗಿಸಬೇಕು. ತರಕಾರಿ ಮಾರಾಟಕ್ಕೆ ಗ್ರಾಮದಲ್ಲಿ ವ್ಯವಸ್ಥೆ ಕಲ್ಪಿಸಬೇಕು.
ಗ್ರಾಮದಲ್ಲಿಯೇ ರೆಡ್ ಝೋನ್ ಪ್ರತ್ಯೇಕವಾಗಿ ಇರಿಸಿ ಉಳಿದ ಕಡೆ ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಬೇಕು.
ನಿರಂತರವಾಗಿ ಕೆಲಸ ಮಾಡುತ್ತಿರುವ ಆರೋಗ್ಯ, ಪೊಲೀಸ್, ಅಂಗನವಾಡಿ ಕಾರ್ಯಕರ್ತರಿಗೆ ವಿಶ್ರಾಂತಿ ನೀಡಿ, ಬೇರೆ ಕಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಒತ್ತಾಯಿಸಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಭರವಸೆ ನೀಡಿದರು.

ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪ್ರಕರಣ ಹೆಚ್ಚಾಗಿರುವುದಕ್ಕೆ ಗಾಬರಿಯಾಗಬೇಡಿ. ಸೋಂಕಿತರ ಜತೆಗಿನ ಸಂಪರ್ಕ ಮುಚ್ಚಿಡದೇ ಮಾಹಿತಿ ನೀಡಿದರೆ ಸೋಂಕು ಹರಡುವಿಕೆ ತಡೆಗಟ್ಟುವಿಕೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಸೀಮಾ ಲಾಟಕರ ಅವರು, ಗ್ರಾಮದ ಜನರ ಸಮಸ್ಯೆಗಳನ್ನು ಗಮನಿಸಲಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಸೋಂಕು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದರು.

ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಮಾತ್ರ ಸೋಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಇನ್ನು ಹದಿನೈದು ದಿನಗಳ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸುವ ಜತೆಗೆ ಸಂಪರ್ಕಿತರ ಬಗ್ಗೆ ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಿದರೆ ಕೋವಿಡ್-೧೯ ತಡೆಗಟ್ಟುವಿಕೆ ಸಾಧ್ಯ ಎಂದರು.

ಡಿಸಿಪಿ ಯಶೋಧಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಚನ್ನರಾಜ್ ಹಟ್ಟಿಹೊಳಿ ಮತ್ತಿತರರು ಉಪಸ್ಥಿತರಿದ್ದರು.
ಅಡವೇಶ ಇಟಗಿ, ಸಿ.ಸಿ.ಪಾಟೀಲ, ಸಯ್ಯದ್ ಖಾದ್ರಿ, ಶ್ರೀಶೈಲ್ ಫಡಗಲ್, ಬಾಪು ನಾವಲಗಟ್ಟಿ, ಶ್ರೀಕಾಂತ್ ಮಾಧುಬರಮಣ್ಣವರ ಮತ್ತಿತರರು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
****

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.