ಬೆಳಗಾವಿ: ಐದು ವರ್ಷಕ್ಕೊಮ್ಮೆ ನಡೆಯುವ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟçದಲ್ಲಿ ಹೆಸರುವಾಸಿಯಾಗಿದ್ದು, ಮಾರ್ಚ್ ೧೦ರಿಂದ ೧೮ರ ವರೆಗೆ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರಮನ್ ದೇವಣ್ಣ ಬಂಗೇನ್ನವರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಶೇಷ ಹಾಗೂ ಮಾದರಿ ಜಾತ್ರೆ ಎನಿಸಿರುವ ಇಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲ ದೃಷ್ಟಿಯಿಂದ ಈಗಾಗಲೇ ಟ್ರಸ್ಟ್ ವತಿಯಿಂದ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಜಾತ್ರೆ ಮಾ. ೧೦ರಂದು ಆರಂಭಗೊಳ್ಳಲಿದ್ದು, ಅಂದು ರಾತ್ರಿ ೧೦ ಗಂಟೆಗೆ ವಿಶ್ವಕರ್ಮರ ಮನೆಯಿಂದ ದೇವಿಗೆ ಉಡಿ ತುಂಬುವ ಮೂಲಕ ದೇವಿ ಹೊನ್ನಾಟ ನಡೆಯಲಿದೆ. ಇಡೀ ರಾತ್ರಿ ಹಾಗೂ ಮಾ. ೧೧ರಂದು ಸಂಜೆವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊನ್ನಾಟ ನಡೆದು ಮೈದಾನದಲ್ಲಿರುವ ಗದ್ದುಗೆ ಮೇಲೆ ದೇವಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಮಾ. ೧೩ರಂದು ಬೆಳಗ್ಗೆಯಿಂದ ದೀಡ್ ನಮಸ್ಕಾರ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ನಂತರ ಮಾ. ೧೮ರ ವರೆಗೆ ಜಾತ್ರೆ ಸಡಗರ-ಸಂಭ್ರಮದಿಂದ ನೆರವೇರಲಿದೆ. ಜಾತ್ರೆ ನಿಮ್ಮ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. ೧೮ರಂದು ಸಂಜೆ ದೇವಿ ಹೊನ್ನಾಟ ಆರಂಭಗೊಂಡು ಸೀಮೆಗೆ ಹೋಗುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.
ಟ್ರಸ್ಟ್ ಸದಸ್ಯರಾದ ಬಸನಗೌಡ ಹುಂಕರಿಪಾಟೀಲ ಮಾತನಾಡಿ, ದೇವಿ ಹೊನ್ನಾಟ ಶ್ರೀ ಮಹಾಲಕ್ಷ್ಮೀ ಜಾತ್ರೆಯ ವಿಶೇಷತೆ. ಈ ಭಾಗದಲ್ಲಿಯೇ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ದೇವಿ ಹೊನ್ನಾಟ ನಡೆಯುತ್ತದೆ. ದೇವಿ ಹೊನ್ನಾಟ ನಡೆಯುವಾಗ ಭಂಡಾರ, ಗುಲಾಲು, ಉತ್ತತ್ತಿ ಎಸೆಯುವ ಪದ್ಧತಿ ಇಲ್ಲ. ದೇವಿ ಹೊನ್ನಾಟ ನಡೆಸುವವರು ಕಡ್ಡಾಯವಾಗಿ ತಲೆಯ ಮೇಲೆ ಬಿಳಿ ಟೊಪ್ಪಿಗೆ ಅಥವಾ ಪೇಟಾ ಹಾಕಿಕೊಂಡು ಪಾಲ್ಗೊಳ್ಳಬೇಕು. ವ್ಯವಸ್ಥಿತವಾಗಿ ನಡೆಯುವ ಈ ಹೊನ್ನಾಟ ನೋಡುವುದೇ ವಿಶೇಷ ಎಂದು ಹೇಳಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಅಗ್ನಿಶಾಮಕ ದಳ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಸಂಪರ್ಕಿಸಿ ಅಗತ್ಯ ಸಹಕಾರ ಕೋರಲಾಗಿದೆ. ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಸ್ತೆ, ಚರಂಡಿ, ಕಮಾನು ನಿರ್ಮಾಣ, ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಾಂತಿಯುವಾಗಿ ನಡೆಯುವ ಜಾತ್ರೆಗೆ ಆಗಮಿಸುವ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಟ್ರಸ್ಟ್ ಸದಸ್ಯರಾದ ಶಶಿಕಾಂತ ಸಂಗೊಳ್ಳಿ, ಅಣ್ಣಪ್ಪ ಪಾಟೀಲ, ದ್ಯಾಮಣ್ಣ ಮುರಾರಿ, ಲಕ್ಷ್ಮಣ ಯಮೋಜಿ, ಮಾರುತಿ ರವಳಗೌಡ, ಮಲ್ಲಪ್ಪ ಯರಝರವಿ, ಮುರುಗೇಶ ಹಂಪಿಹೊಳಿ, ಬಾಳಕೃಷ್ಣ ಬಡಕಿ, ಕಲ್ಲಪ್ಪ ಲೋಲಿ, ಬಸವರಾಜ ಚೌಗಲೆ, ಘಟಿಗೆಪ್ಪ ಕಲ್ಲೂರ ಸುದ್ದಿಗೋಷ್ಠಿಯಲ್ಲಿದ್ದರು.