Breaking News
Home / Breaking News / ನಟ ಉಪೇಂದ್ರರ ರಾಜಕೀಯ ವ್ಯಾಖ್ಯಾನದ ಸಂಚಲನ

ನಟ ಉಪೇಂದ್ರರ ರಾಜಕೀಯ ವ್ಯಾಖ್ಯಾನದ ಸಂಚಲನ

ಬೆಳಗಾವಿ-

ವಿಚಿತ್ರ ಅನ್ನುವ ರೀತಿಯಲ್ಲಿ ಪಾತ್ರಗಳನ್ನು ಸೃಷ್ಟಿಸಿ ಸಮಾಜದ ವಾಸ್ತವ ಸಂಗತಿಗಳನ್ನು ತೀರ ಗಂಭೀರವೂ ಅಲ್ಲ ಹಾಸ್ಯವೂ ಅಲ್ಲದ ಶೈಲಿಯಲ್ಲಿ ಕನ್ನಡ ಸಿನಿಮಾಗಳನ್ನು ನೀಡುತ್ತ ಬಂದ ನಟ ಉಪೇಂದ್ರ ಇದ್ದಕ್ಕಿಂದ್ದಂತೆ ರಾಜಕೀಯ ಪ್ರವೇಶದ ಮಾರ್ಗವೊಂದನ್ನು ಸಾರ್ವಜನಿಕರ ಎದುರು ತೆರೆದಿಟ್ಟು ಗಮನ ಸೆಳೆಯುವಂತೆ ಮಾಡಿದ್ದಾರೆ. ಯಾವತ್ತೂ ಅನುಕೂಲಸ್ಥ ಗೆದ್ದೆತ್ತಿನ ಬಾಲ ಹಿಡಿದು ಸುತ್ತುವ ಎಲೆಕ್ಟ್ರಾನಿಕ ಕೆಲ ಮಾಧ್ಯಮಗಳು ಕರ್ನಾಟಕ ರಾಜಕೀಯ ವಲಯದಲ್ಲಿ ಒಂದು ಹೊಸ ಯುಗವೇ ಆರಂಭವಾಗಿದೆ ಎನ್ನುವಂತೆ  ಎಥಾಪ್ರಕಾರ ತಮ್ಮ ಟಿಆರ್‍ಪಿ ಗೋಷ್ಕರ ಉಪೇಂದ್ರ ಅವರ ನಿರ್ಧಾರಕ್ಕೆ ಅಳತೆ ಮೀರಿ ಪ್ರಚಾರ ನೀಡುತ್ತಿವೆ. ಆದರೆ, ರಾಜಕೀಯ ನಾಟಕಗಳನ್ನು ಗಮನಿಸುತ್ತ ಬಂದಿರುವ ಸಾರ್ವಜನಿಕರು ಅಷ್ಟು ಬೇಗ ಸ್ಪಂದಿಸುವುದಿಲ್ಲ ಎಂಬುದು ಅಷ್ಟೇ ಸತ್ಯ. ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು, ರಾಜಕಾರಣಿಗಳ ಆಶ್ರಯದಾತರು ಯಾವುದೇ ಪ್ರತಿಕ್ರಿಯಿಗೆ ಮುಂದಾಗದೆ ಉಪೇಂದ್ರರ ಇದೊಂದು ಹಾಸ್ಯಾಸ್ಪದ ಸಿನಿಮಾ ಎನ್ನುವಂತೆ ಮೊಗಮ್ಮಿನಲ್ಲಿ ಉಳಿದುಕೊಂಡು, ತಮ್ಮ ಪಾಳೆಗಾರಿಕೆಯ ಸಹಜ ಗಾಂಭೀರ್ಯ ಉಳಿಸಿಕೊಂಡಿದ್ದಾರೆ.  ಮೊಗಮ್ಮಾಗಿಯೇ ಗಮನಿಸುತ್ತಿರುವ ಅವಕಾಶವಾದಿ ವರ್ಗ ಮಾತಾಡಿ ಕೆಡಕು ತಂದುಕೊಳ್ಳುವುದಕ್ಕಿಂತ ಸುಮ್ಮನಿದ್ದು, ಆಮೇಲೆ ನೋಡಿದರಾಯಿತ್ತೆಂದು ಉಳಿದುಕೊಂಡಿದೆ. ಹೊಸ ತಲೆಮಾರಿನಲ್ಲಿ ಹಿರಿಯ ಅವಕಾಶವಾದಿ ವರ್ಗಕ್ಕೆ ಸಹಾಯಕ ಚಮಚಾಗಳಾಗಿರುವವರನ್ನು ಹೊರತುಪಡಿಸಿ ಪ್ರಜ್ಞಾವಂತ ಬಹುಸಂಖ್ಯಾತರು ರಾಜಕೀಯ ಬದಲಾವಣೆಗೆ ಕುತೂಹಲ ಕೆರಳಿಸಿ ಸ್ಪಂದಿಸುತ್ತಿದ್ದಾರೆ.  ಈ ಇರುವಿಕೆ ಮತ್ತು ಪ್ರತಿಕ್ರಿಯೆ ತಮ್ಮ ತಮ್ಮ  ಮನೋಧರ್ಮ ಹಾಗೂ ಸಾರ್ವಜನಿಕ ನಿಲುವುಗಳನ್ನು ಸಾಬೀತುಪಡೆಸುತ್ತದೆ.

ಯಾವುದೇ ಪ್ರಬಲ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವ ಅಥವಾ ಸೇರಿಕೊಳ್ಳುವುದಕ್ಕೆ ಆಸಕ್ತಿ ತೋರದೆ, ಪಾರಂಪರಿಕ ರಾಜಕೀಯ  ಪ್ರವಾಹದ ಜೊತೆಯಲ್ಲಿ ತನ್ನದೊಂದು ಪ್ರತೇಕ ಹೊಸದಾಗಿ ಕಾಣಸಿಕೊಂಡ ಮುಳ್ಳು ಕಂಟಿಯೊಳಗಿನ ಸಣ್ಣ ಹಳ್ಳ ಎಂದು, ಕರ್ನಾಟಕದಲ್ಲಿ ರಾಜಕೀಯ ಪರ್ಯಾಯಶಕ್ತಿಯ ಸೃಷ್ಟಿಗೆ ಉಪೇಂದ್ರ ಕಾರಣ ನೀಡಿದ್ದಾರೆ.  ಮಳೆ ಆಗಿರದಿದ್ದರೂ ಮಳೆಗಾಲದಲ್ಲಿ ಹರಿಯಲು ಬಿಟ್ಟಿರುವ ಉಪೇಂದ್ರರ ಹಳ್ಳ ಮುಂದೆ ಪ್ರವಾಹದಲ್ಲಿ ಮಾಯವಾಗುತ್ತದೆಯೋ ಬತ್ತಿಹೋಗುತ್ತದೆಯೋ ಬಹುಷಃ ಉಪೇಂದ್ರರಿಗೂ ಸ್ಪಷ್ಟತೆಯಿಲ್ಲ.  ಉಪೇಂದ್ರರ ಹಳ್ಳ,  ಹಳ್ಳ ಹಿಡಿಯುತ್ತದೆಯೋ ಇಲ್ಲ ಸರಿಯೂ ನದಿಯಾಗುತ್ತದೆಯೋ ಎಂಬುದು ಭವಿಷ್ಯ ನಿರ್ಧರಿಸಬೇಕಾಗುತ್ತದೆ.  ಆ ಜವಾಬ್ದಾರಿ ಅದರ ತಂದೆ ಎನಿಸಿಕೊಂಡ ಉಪೇಂದ್ರರೆರನ್ನೇ ಅವಲಂಭಿಸಿದೆ.

ಉಪೇಂದ್ರದ ರಾಜಕೀಯ ಈ ಪರ್ಯಾಯಶಕ್ತಿಯ ಬಗ್ಗೆ ಊರಿನ ಹೊಲಸೆಲ್ಲವನ್ನೂ ತನ್ನೊಳಗೆ ತುಂಬಿ ಉಕ್ಕಿಹರಿಯುತ್ತಿರುವ ರಾಜಕೀಯ ಪ್ರವಾಹದ ಲೆಕ್ಕಕ್ಕೆ ಇಲ್ಲ. ಈ ಹಿಂದೆ ಎಂಥಾ ಘಟನಾನುಘಟಿಗಳು ರಾಜಕೀಯ ಪರ್ಯಾಯಶಕ್ತಿ ನಿರ್ಮಿಸಲು ಹೋಗಿ ಮುಗ್ಗರಿಸಿ ಬಿದ್ದು ಹಳ್ಳ ಹಿಡಿದಿರುವಾಗ ಸಿನಿಮಾ ಡೈಲಾಗ್ ಹೇಳುವ, ರಾಜಕೀಯ ಸಂಸ್ಕøತಿಯ ತಳಬುಡವಿಲ್ಲದ ಈ ಮನುಷ್ಯನಿಂದ ಅದೆಹೇಗೆ ಸಾಧ್ಯವಾಗುತ್ತದೆ ಎಂದು ಭಾರತೀಯ ಸಹಜ ಮನೋವೃತ್ತಿಯಾದ ಕಾಲೆಳೆಯುವಿಕೆ ನಡೆಯುತ್ತಿದೆ. ತಮ್ಮಷ್ಟಕ್ಕೆ ತಾವೇ ಬುದ್ಧಿವಂತರು ಎಂದು ಹಣೆಗೆ ಪಟ್ಟಿಕಟ್ಟಿಕೊಂಡು ತಿರುಗುವವರಲ್ಲಿ ಕೆಲವರು ಕೋಮುವಾದಿ ರಾಜಕೀಯ ಶಕ್ತಿಗಳ ಕುತಂತ್ರದ ಸೂತ್ರದ ಬೊಂಬೆಯಾಟ ಎಂದು ವಿಶ್ಲೇಷಿಸಿದ್ದಾರೆ. ರಾಜಕೀಯ ಸಿನಿಮಾ ಅಲ್ಲ, ಅದು ಸಾಮಾಜಿಕ ವಾಸ್ತವ ಎಂದು ಕೆಲವರು ಎಚ್ಚರಿಕೆ ನೀಡುತ್ತಿದ್ದಾರೆ. À ಯಾವುದೇ ರಾಜಕೀಯ ಇರಲಿ ತಮ್ಮ ಬೇಳೆ ಮಾತ್ರ ಬೇಯುತ್ತಲೇ ಇರಲಿ ಎಂದು ತಮ್ಮದೇ ಆದ ಲೆಕ್ಕಚಾರದಲ್ಲಿರುವ ಅವಕಾಶವಾದಿ ಗುಂಪು ತಮ್ಮ ಕೊಳಕು ಗಾಂಭೀರ್ಯತೆ ಉಳಿಸಿಕೊಳ್ಳಲು ಕುಹಕ ನಗೆ ಬೀರುತ್ತಿದೆ.

ಆದರೆ, ಒಂದು ಮಾತ್ರ ಸತ್ಯ – ಪ್ರಸ್ತುತ ಪಾಳೆಗಾರಿಕೆ ರಾಜಕೀಯ ಪರಂಪರೆಗೆ ಸರಿಯಾದ ಜಾಗೆಯಲ್ಲಿ ಬಲವಾದ ಹೊಡೆತಕೊಟ್ಟು ನೆಲಕ್ಕುರಿಳಿಸುವುದು ಹೇಗೆ ಎಂಬ ಪ್ರಜಾಪ್ರಭುತ್ವದ ನಿಜ ಮಾರ್ಗನ್ನು  ಉಪೇಂದ್ರ ಅವರು ಮುಟ್ಟಿ ಕೆಣಕಿದ್ದಾರೆ.  ಈ ಹೊಡೆದ ಬಲವಾಗಿಯೇ ಬೀಳಬಹುದು ಎಂಬ ಸಣ್ಣದಾದ ನಡುಕ ಪ್ರಬಲ ರಾಜಕೀಯ ಶಕ್ತಿಯ ಅಂತರಂಗದಲ್ಲಿ ಉಂಟಾಗಿಲ್ಲ ಎಂದು ಹೇಳುವಂತಿಲ್ಲ.

ಭಾರತದಲ್ಲಿ ತುಳಿತಕ್ಕೊಳಗಾದ ಸಮುದಾಯದ ಮಹಾನುಭಾವನಿಂದ ರಚಿತವಾದ ಸಂವಿಧಾನದ ಅಡಿಯಲ್ಲಿ  ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕೀಯ ವ್ಯವಸ್ಥೆ ಕೆಲವರ ಹಿತಕ್ಕೆ ಮಾತ್ರ ಸೀಮಿತಗೊಂಡಿದೆ. ಪ್ರಜೆಗಳಿಂದ ಪ್ರಭುಗಳಾದವರು  ಜನ ಸೇವಕರಾಗಿ ಎದುರುಗೊಳ್ಳಬೇಕಾದವರು ರಾಜರಾಗಿ, ನಾಯಕರಾಗಿ, ಹೀರೋಗಳಾಗಿ, ಪ್ರಶ್ನಾತೀತ ಶಕ್ತಿಗಳಾಗಿ ಪಾಳೆಗಾರಿಕೆಗಳ ಬಲಾಢ್ಯತೆ ಪಡೆದುಕೊಂಡಿರುವುದು ಭಾರತೀಯ ಪ್ರಜಾಪ್ರಭುತ್ವದ ದುರಂತ ಬೆಳವಣಿಗೆಯನ್ನು ನಿರ್ದೇಶಿಸುತ್ತದೆ.  ಅಕ್ರಮ ಸಂಪತ್ತು ಉಳಿಸಿಕೊಳ್ಳುವ, ಆ ಸಂಪತ್ತು ವೃದ್ಧಿಗೊಳಿಸಿ ವಂಶಪಾರ್ಯಂಪರೆಯುತ್ತವಾಗಿ ಮನ್ನಣೆ ಪಡೆದುಕೊಳ್ಳುವ ಒಪ್ಪಿತ ಧಂಧೆಯಾಗಿದೆ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂಬ ಮನೋಭಾವ ನಿರ್ಮಿಸಿಕೊಂಡಿರುವ ಸಾರ್ವಜನಿಕರು ಈ ಪಾಳೆಗಾರರನ್ನು ಪೂಜಿಗೊಳಪಡಿಸಿ, ಜೈಕಾರ ಹಾಕುತ್ತಿದ್ದಾರೆ. ಪ್ರಜೆಗಳ ಈ ಮನೋದೌರ್ಲಬಲ್ಯ ಬಳಸಿಕೊಂಡು  ದುರ್ಬಲ ವರ್ಗದ ಹಿತಾಸಕ್ತಿ ಕಾಪಾಡುವ ನಾಟಕಗಳು ಲಜ್ಜೆಗಟ್ಟು ನಡೆಯುತ್ತಿವೆ. ಸಾರ್ವಜನಿಕ ಅಭಿವೃದ್ಧಿ ಹೆಸರಿನಲ್ಲಿ ಹಗಲು ದರೋಡೆ ಒಪ್ಪಿಕೊಳ್ಳುವಂತೆ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆಲ್ಲ ಆಸ್ಪದವಿಲ್ಲ ಎನ್ನುತ್ತ ತನಿಖೆ ನಡೆಯುಬೇಕು ಎಂದು ಕಳ್ಳರನ್ನು ಕಳ್ಳರೇ ಪತ್ತೇ ಹಚ್ಚುವಂತೆ ಇಲ್ಲಿ ತನಿಖಾ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಈ  ವ್ಯವಸ್ಥೆಗೆ ಮುಟ್ಟಲು ಸಾಧ್ಯವಾಗುವುದಿಲ್ಲ ಎನ್ನುವಂತೆ ಇದೇ ನಿಜವಾದ ವ್ಯವಸ್ಥೆ ಎಂದು ಸಾರ್ವಜನಿಕ ವಲಯ  ಅತ್ಯಂತ ಮುಕ್ತವಾಗಿ ಸ್ವೀಕರಿಸಿ ಒಪ್ಪಿಕೊಂಡಿದೆ. ಭಾರತದಲ್ಲಿ ಇಂದು ಇರುವ ಯಾವುದೇ ರಾಜಕೀಯ ಪಕ್ಷವಿರಲಿ ಅದು ಸಂವಿಧಾನದ ಹೆಸರಿನಲ್ಲಿಯೇ ಸಾಂವಿಧಾನಿಕ ವಿರೋಧಿ ನೀತಿಗಳನ್ನು ಅತ್ಯಂತ ಜಾಣ್ಮೆಯಿಂದ ನಿರ್ವಹಿಸುತ್ತಿವೆ. ಕೆಲ ಪಕ್ಷಗಳು ಜಾತ್ಯಾತೀತ, ಧರ್ಮಾತೀತ ಎಂದು ಹೇಳಿಕೊಳ್ಳುತ್ತಿದ್ದರೆ, ಕೆಲ ಪಕ್ಷಗಳು ಅದು ತಮ್ಮ ಪಕ್ಷದ ಪ್ರಣಾಳಿಕೆ ಎಂದು ಬಲತ್ಕಾರವಾಗಿ ಒಪ್ಪಿಸುತ್ತಿವೆ.

ಇಂಥ ಭ್ರದವಾದ ಕೋಟೆವೊಂದನ್ನು ಒಡೆದು ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯಲು ಮುಂದಾಗವ ಹೊಸ ಸಾಹಿಸಿಗರನ್ನು ಈ ವ್ಯವಸ್ಥೆ ಕಂಡು ನಗುತ್ತದೆ, ಅಪಹಾಸ್ಯ ಮಾಡುತ್ತದೆ. ಗೇಲಿಗೊಳಪಡಿಸಿ, ಹುಚ್ಚ ಎಂದು ಹಣೆಪಟ್ಟಿ ಕಲ್ಲುಹಾಕಲು ಮುಂದಾಗುತ್ತದೆ. ಈ ಚಕ್ರವ್ಯಹದಲ್ಲಿ ಪ್ರವೇಶಿಸುವವರು ಹೆದರಿ ಒಳನುಗ್ಗಲು ಸಾಧ್ಯವಾಗದೇ ಹಿಂದಿರುಗುವುದನ್ನು ಅಥವಾ ಕೋಟೆಯ ಬಾಗಿಲು ಕಾಯುವುದಕ್ಕೆ ನಿಂತಿರುವ ಸ್ಥಿತಿಯನ್ನು ನೋಡುತ್ತೇವೆ.

ಇಂತಹ ಸಾಕ್ಷಿಗಳು ಎದುರಿಗಿಟ್ಟುಕೊಂಡು ಯಾವುದೇ ಬಿಲ್ಲು ಬಾಣಗಳಿಲ್ಲದೆ ಚಕ್ರವ್ಯೂಹವನ್ನು ಉಪೇಂದ್ರ ಪ್ರವೇಶಿಸುತ್ತಿರುವುದು ಒಂದು ಸಾಹಸವಾಗಿ ಇಲ್ಲ ಹುಚ್ಚತನವಾಗಿ ಕಾಣುವುದು ಸಹಜ. ಆದರೆ, ಅದರ ನಿರ್ವಹಣೆ ಜಾಣ್ಮೆ ಅವರಿಗೆ ಮಾತ್ರ ಗೊತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭುವಾಗಿರುವಾಗ ಅವರಿಂದ ಚುನಾಯಿತರಾದವರು ಸೇವಕರೂ ಅಲ್ಲ, ನಾಯಕರೂ ಅಲ್ಲ. ಸಂಬಳ ತೆಗೆದುಕೊಂಡು ಕೆಲಸ ಮಾಡುವ ಕಾರ್ಮಿಕರು. ಅದು ಅವರು ಪ್ರಮಾಣಿಕವಾಗಿ ಮಾಡಬೇಕು ಹೊರತು ಪಾಳೆಗಾರಿಕೆ ತೋರಬೇಕಾಗಿಲ್ಲ. ವ್ಯವಸ್ಥೆಗೆ ಆರ್ಥಿಕ ಭದ್ರತೆ ನೀಡಿ, ಚಲನಶೀಲಗೊಳಿಸುವ ಸಾರ್ವಜನಿಕರು ಸಾಮಾನ್ಯ ವ್ಯಕ್ತಿಗಳಲ್ಲ, ಅಸಾಮಾನ್ಯವ್ಯಕ್ತಿಗಳು ಎಂಬು ಸಾಂವಿಧಾನಿಕ ಅರ್ಥವನ್ನು ಉಪೇಂದ್ರೆ ಅವರು ತಮ್ಮದೇ ಆದ ಶೈಲಿಯಲ್ಲಿ ಸಾರ್ವಜನಿಕರಿಗೆ ಸಂಘಟನಾತ್ಮಕವಾಗಿ ಪರಿಚಯಸಲು ಹೊರಟಿದ್ದಾರೆ. ಇದು ಕೇವಲ ಪರಿಚಯಿಸಿ ಜಾಗೃತಿಗೊಳಿಸುವ ಹಂತಕ್ಕೆ ಮಾತ್ರ ಸೀಮಿತಗೊಳ್ಳದೇ, ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಅಸ್ತ್ರ ನನ್ನ ಕೈಯಲ್ಲಿ ಹಿಡಿದಿದ್ದೇನೆ. ಮುಂದೆ ಏನು ಮಾಡುತ್ತೇ ಕಾಯ್ದು ನೋಡೋಣ ಎಂಬುದು ಉಪೇಂದ್ರ ಅವರ ಸದ್ಯದ ಮನವರಿಕೆ.   ಮುಂದೆ ಈ ಅಸ್ತ್ರ ಹರಿತಗೊಂಡರೆ ಪಾಳೆಗಾರಿಕೆ ರಾಜಕೀಯ ಶಕ್ತಿಯನ್ನು ಧ್ವಂಸಗೊಳಿಸುವ ಕುತೂಹಲವನ್ನು ತಳ್ಳಿಹಾಕುವಂತಿಲ್ಲ. ತುಂಬಾ ಆಳವಾಗಿ ಮತ್ತು ವಿಶಾಲವಾಗಿ ಬೇರು ಬಿಟ್ಟಿರುವ ಈ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಸುಲಭ ಸಾಧ್ಯವಿಲ್ಲ ಎಂಬ ಸತ್ಯ ಅರಿತಿರುವ  ಉಪೇಂದ್ರ ಅವರು, ನಕಾರಾತ್ಮಕ ಧೋರೆಣೆಗಳಿಗೆ ಆದ್ಯತೆ ನೀಡದೆ, ಆಶಾವಾದಿಯಾಗಿದ್ದಾರೆ. ಈ ಆಶಾವಾದ ಹುಂಬತನವಾಗಿರದೇ ಜನ ಸೇವೆಯ ಕಾಯಕ ನಿಷ್ಠೆಯ ಜಾಣತನದ ಪ್ರಧಾನ ಪಾತ್ರವಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಎಲ್ಲರಿಗೂ ಕಾಣಿಸಿಕೊಳ್ಳುವ ಅಸ್ತ್ರಗಳಲ್ಲಿದೆ ವಿಶ್ವಾಸ, ನಂಬಿಕೆ, ಕ್ರಿಯಾಶೀಲತೆ, ಪ್ರಾಮಾಣಿಕತೆ, ಕೆಲಸದಂತಹ ಸಾಮಾನ್ಯ ಅಸ್ತ್ರಗಳ ಮೂಲಕ ಚಕ್ರವ್ಯಹ ಭೇಧಿಸಲು ಹೊರಟಿರುವ ಸಾಹಸಿಗನಿಗೆ ನಾಡಿನ ಒಳ್ಳೆಯ ದೃಷ್ಟಿಯಿಂದ ಒಳ್ಳೆಯದಾಗಲಿ ಎಂದು ಹೇಳುವುದು ಉಪೇಂದ್ರರಿಗೆ ಇನ್ನಷ್ಟು ಬಲ ನೀಡಿದಂತಾಗುತ್ತದೆ.

ಕೋಮುವಾದ ನೀಚತನ, ಭ್ರಷ್ಟಾಚಾರದ ನಾಲಾಯಕಗಿರಿಗೆ ಸೊತು ಸುಣ್ಣಾಗಿ ಹೋಗಿರುವ ಸಾರ್ವಜನಿಕರು ರಾಜಕೀಯ ಹೊಸ ಬೆಳಕಿಗಾಗಿ ಕಾಯ್ದುಕುಳಿತಿದ್ದಾರೆ. ಇತ್ತೀಚೆಗೆ ಕೆಲವರು ಬೆಳಕು ಮೂಡಿಸುತ್ತೇನೆ ಎಂದು ಧಾವಿಸಿ ಬಂದವರು ಕತ್ತಲೆಯಲ್ಲಿ ಕರಗಿಹೋಗಿದ್ದಾರೆ. ಮತ್ತೇ ಕೆಲವರು ಇನ್ನಷ್ಟು ಗಾಢವಾದ ಅಂಧಕಾರವನ್ನೇ ಸೃಷ್ಟಿಸಿದ್ದಾರೆ. ಇದರಿಂದ ಸಾರ್ವಜನಿಕರ ಬೆಳಕಿನ ಆಶೆ ಹಾಗೇ ಉಳಿದಿದೆ. ಇಂತಹದರ ಮಧ್ಯ ಹೊಸ ಬ್ಯಾಟರಿ ಹಿಡಿದುಕೊಂಡು ಉಪೇಂದ್ರ ಅವರು ಕರ್ನಾಟಕದ ಕತ್ತಲೆಗೆ ಎದುರಾಗಿದ್ದಾರೆ. ಉಪೇಂದ್ರ ಅವರ ಪರ್ಯಾಯ ವಿದ್ಯಚ್ಛಕ್ತಿಯ ಬೆಳಕು ಬೆಳಗಲಿ ಎಂದು ಸ್ವಾಗತಿಸಬೇಕಾಗಿದೆ ಹೊರತು ಕೈಯೊಳಗಿನ ಬ್ಯಾಟರಿ ಕಸಿದುಕೊಳ್ಳಬೇಕಾಗಿಲ್ಲ. ಉಪೇಂದ್ರರಿಗೆ ಹೇಳುವುದಿಷ್ಟೇ ಬೆಳಕು ನೀಡುವ ಧಾವಂತದಲ್ಲಿ  ಕತ್ತಲೇಯಲ್ಲಿರುವ ವಿದ್ಯುತ್ ಕಂಬ ಹತ್ತುವಾಗ ಎಚ್ಚರವಿರಲಿ, ಸುರಕ್ಷಿತವಿರಲಿ; ಬೆಳಕು ಮೂಡಿಸುತ್ತೇನೆ ಎಂದು ನೀಡಿದ ಭರವಸೆ ಈಡೇರಲಿ ಹೊರತು ಬಲ್ಬ ಕಿತ್ತಿಕೊಳ್ಳುವಂತಾಗದಿರಲಿ.

ಕರ್ನಾಟಕದಲ್ಲಿ ರಾಜಕೀಯ ಪರ್ಯಾಯಶಕ್ತಿಗೆ ನಾಡಿನ ಬಯಲು ಪ್ರದೇಶ ಕಳೆದ ಅನೇಕ ವರ್ಷಗಳಿಂದ ಖಾಲಿ ಉಳಿದಿದೆ. ಕುಸ್ತಿ ಆಡುವ ನಿಜವಾದ ಪೈಲವಾನರಿಗೆ ಕಾಯ್ದು ಕುಳಿತಿದೆ. ಆತ್ಮ ವಿಶ್ವಾಸವಿಲದ, ಬದ್ಧತೆಯಿಲ್ಲದ ಕೆಲವರು ಕುಸ್ತಿ ಆಡಲು ಬಂದು ಚಡ್ಡಿ ಹರ್ಕೊಂಡು ಹೋದದಕ್ಕೆ ಚಡ್ಡಿನಾಡೆಗಳು ಬಯಲಲ್ಲೇ ಬಿದ್ದಿವೆ.

ಕರ್ನಾಟಕದಲ್ಲಿ ಕನ್ನಡಪರ, ಜನಪರ ರಾಜಕೀಯ ಪರ್ಯಾಯ ಶಕ್ತಿ ನಿರ್ಮಿಸಿಕೊಳ್ಳಲು ಹೋರಾಟಗಾರರು, ಸಾಮಾಜಿಕ ಪ್ರಾಮಾಣಿಕ ಕಾರ್ಯಕರ್ತರು, ರಾಜಕೀಯ ಆಸಕ್ತಿ ಹೊಂದಿರವ ಬುದ್ದಿಜೀವಿಗಳು, ಚಿಂತಕರು, ಗಣ್ಯರು ಎಲ್ಲರೂ ಒಂದಾಗಿ ಮುಂದಾದರೆ ಅಸಾಧ್ಯ ಎಂಬುದು ಇಲ್ಲವಾದರೂ ಇವರಾರಿಗೂ ಒಂದಾಗಿ ಬರುವ ಮನಸ್ಥಿತಿ ಉಳಿದಿಲ್ಲ.  ಏಕೆಂದರೆ, ಇವರಿಗೆಲ್ಲ ದುಡಿಮೆಯ ಧಾವಂತಕ್ಕಿಂತ ಸದ್ಯ ಹಾಕಿದ ದುಡಿತಕ್ಕೆ ತಕ್ಷಣ ಪ್ರತಿಫಲ ಅನುಭವಿಸುವ ಆಶೆ ಜಾಸ್ತಿಯಿದೆ. ಈ ಆಶೆಬುರತನದ ಕಾರಣದಿಂದಾಗಿಯೇ ಇವರಿಗೆ ಹೊಸಶಕ್ತಿ ನಿರ್ಮಿಸಲು ಸಾಧ್ಯವಾಗದೆ ಎರ್ಕೊಳ್ಳವರ ಕೆಳಗ ಡೊಕ್ಕಳ್ಳಾವರು ಎನ್ನುವಂತೆ ಇದ್ದ ವ್ಯವಸ್ಥೆಯಲ್ಲಿಯೇ ಸಿಕ್ಕಷ್ಟು ಲಾಭ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇವರೆಲ್ಲ ಭ್ರಷ್ಟ ವ್ಯವಸ್ಥೆ ಆಲದ ಮರದ ತುದಿಗೆ ಏರಿ ಗಿಡದ ಟೊಂಗೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಹುಚ್ಚತನವಾಗುತ್ತದೆ ಹೊರತು ಜಾಣತನದಿಂದ ಗಿಡದ ಬುಡಕ್ಕೆ ಹಾಕಿರುವ ಸಾಮಾನ್ಯ ವ್ಯಕ್ತಿ ಉಪೇಂದ್ರನ ಹುಚ್ಚನ ಅನ್ನಿಸುವುದಿಲ್ಲ. ಉಪೇಂದ್ರ ಅವರು ಆಲದ ಬುಡಕ್ಕೆ ಕೈಹಾಕಿರುವುದು ಇವರೆಲ್ಲ ಹುಚ್ಚ ಎಂದು ನಗುವುದಕ್ಕಿಂತ ಟೊಂಗೆ ಬಿಟ್ಟು ಕೆಳಗಿಳಿದು ಬುಡಕ್ಕೆ ಕೈಹಾಕಿದರೆ ನಿಜವಾದ ಬುದ್ದಿವಂತರಾಗುತ್ತಾರೆ.

– ಡಾ. ಕೆ. ಎನ್. ದೊಡ್ಡಮನಿ

(ಕಾಲೇಜು ಪ್ರಾಧ್ಯಾಪಕ, ಲೇಖಕ ಹಾಗೂ ಪತ್ರಕರ್ತ)

About BGAdmin

Check Also

ಸತೀಶ ಜೊತೆ ಹೆಬ್ಬಾಳಕರ ಮಾತುಕತೆ ಎಂಪಿಎಂಸಿ ಹಾದಿ ಸುಗಮ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ ಮಾಜಿ ಸಚಿವ ಸತೀಶ …

Leave a Reply

Your email address will not be published. Required fields are marked *