Breaking News
Home / Breaking News / ಅಧಿವೇಶನದ ಮೊದಲ ದಿನವೇ ಕೋರಂ ಕೊರತೆ..ಜೊತೆಗೆ ಸಚಿವ ಜಾರ್ಜ ವಿರುದ್ಧ ಬಿಜೆಪಿ ಚಾರ್ಜ..

ಅಧಿವೇಶನದ ಮೊದಲ ದಿನವೇ ಕೋರಂ ಕೊರತೆ..ಜೊತೆಗೆ ಸಚಿವ ಜಾರ್ಜ ವಿರುದ್ಧ ಬಿಜೆಪಿ ಚಾರ್ಜ..

ಬೆಳಗಾವಿ, ನ.13- ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭವಾಯಿತು ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರವೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಶಿಪ್ಟ ಆಗಿದೆ

ಸುವರ್ಣಸೌಧದಲ್ಲಿ ಕರೆಯಲಾಗಿರುವ ಚಳಿಗಾಲದ ಅಧಿವೇಶನ ಮೊದಲ ದಿನವೇ ಕೋರಂ ಇಲ್ಲದೆ ಮುಂದೂಡಿಕೆಯಾದ ಪ್ರಸಂಗ ನಡೆಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕರೆ ಗಂಟೆ ನಿಂತಾಗ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ವಿಧಾನಸಭೆ ಸಭಾಂಗಣಕ್ಕೆ ಆಗಮಿಸಿದರು. ಆದರೆ ಆ ಸಮಯಕ್ಕೆ ಸಭಾಂಗಣದಲ್ಲಿ ಕೇವಲ 15 ಮಂದಿ ಮಾತ್ರ ಶಾಸಕರಿದ್ದರು.ಇದನ್ನು ಗಮನಿಸಿದ ಸ್ಪೀಕರ್ ತೀವ್ರ ಬೇಸರ ವ್ಯೆಕ್ತಪಡಿದಿದರು

ವಿರೋಧ ಪಕ್ಷ ಮತ್ತು ಪ್ರತಿಪಕ್ಷದ ಭಾಗದಲ್ಲಿ ಶಾಸಕರ ಕೊರತೆ ಎದ್ದು ಕಾಣುತ್ತಿತ್ತು. ಸಭಾಧ್ಯಕ್ಷ ತಮ್ಮ ಸ್ಥಾನದಲ್ಲಿ ಆಸೀನರಾದಾಗ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರೆ 15ನ್ನು ದಾಟುತ್ತಿರಲಿಲ್ಲ.
ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು ನೋವಿನಿಂದಲೇ ಕಲಾಪವನ್ನು ಕೋರಂ ಸೇರುವವರೆಗೂ ಮುಂದೂಡುತ್ತಿದ್ದೇನೆ ಎಂದು ಘೋಷಿಸಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಸೇರಿದಂತೆ ರಾಜ್ಯದ ಗಂಭೀರ ವಿಚಾರಗಳ ಚರ್ಚೆಗೆ ಸಮಾವೇಶಗೊಳ್ಳಬೇಕಿದ್ದ ವಿಧಾನಸಭೆ ಅಧಿವೇಶನದಲ್ಲಿ ಮೊದಲ ದಿನವೇ ಕೋರಂ ಕೊರತೆಯಾಗಿದ್ದು ವಿಪರ್ಯಾಸ. 10 ನಿಮಿಷಗಳ ತಡವಾಗಿ ಕಲಾಪ ಮತ್ತೆ ಆರಂಭಗೊಂಡಿದ್ದು, ಒಂದೇ ಮಾತರಂ ಗೀತೆಯೊಂದಿಗೆ ಸಭಾಧ್ಯಕ್ಷರು ಸದನ ಸಮಾವೇಶಕ್ಕೆ ಚಾಲನೆ ನೀಡಿದರು. ನಂತರ ಸಂತಾಪಕ ಸೂಚಕ ನಿರ್ಣಯ ಮಂಡಿಸಲು ಸಭಾಧ್ಯಕ್ಷರು ಮುಂದಾದಾಗ ಬಿಜೆಪಿ ಶಾಸಕರು ಎಲ್ಲಕ್ಕಿಂತ ಮೊದಲು ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪಟ್ಟು ಹಿಡಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಕಲಾಪ ಆರಂಭಗೊಳ್ಳುವ ಮುನ್ನವೇ ಜಾರ್ಜ್ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು. ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.
ಸೋಮವಾರ ವಿಧಾನಸಭೆ ಅಧಿವೇಶನ ಆರಂಭವಾದ ತಕ್ಷಣ ಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು ನಿಧನ ಹೊಂದಿದ 14ಮಂದಿ ಗಣ್ಯರ ಸಂತಾಪ ಸೂಚನೆ ನಿಲುವಳಿಯನ್ನು ಮಂಡಿಸಿದರು.
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಹಾಲಿ ವಿಧಾನಸಭಾ ಸದಸ್ಯ ಎಸ್.ಚಿಕ್ಕಮಾದು, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಮಾಜಿ ಸಚಿವ ಪೋತದಾರ ರಾಮಾಭಾವು ಭೀಮಾರಾವ್, ಮಾಜಿ ಶಾಸಕ ವಿದ್ಯಾಧರ ಗುರೂಜಿ, ಸಿದ್ದನಗೌಡ ಸೋಮನಗೌಡ ಪಾಟೀಲ್, ಬಿ.ಬಿ.ಶಿವಪ್ಪ, ಜಯಪ್ರಕಾಶ ಶೆಟ್ಟಿ ಕೊಳ್ಳೆಬೈಲು, ಬಿ.ಜಿ.ಕೊಟ್ರಪ್ಪ, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಹಿರಿಯ ಪತ್ರಕರ್ತರಾದ ಗೌರಿ ಲಂಕೇಶ್ ಹಾಗೂ ಖಾದ್ರಿ ಎಸ್.ಅಚ್ಯುತನ್ ಅವರಿಗೆ ಸಂತಾಪ ಸಲ್ಲಿಸಲಾಯಿತು.
ಸಂತಾಪ ಸೂಚನೆ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಸಿಂಗ್ ಅವರು ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಅವರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಹೈದ್ರಾಬಾದ್ ಕರ್ನಾಟಕದಲ್ಲಿ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಲವಕುಶನಂತೆ ಇದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸಿಂಗ್ ಅವರು ನಿರ್ವಹಿಸದ ಖಾತೆ ಇರಲಿಲ್ಲ ಎನ್ನಬಹುದು. ಅಪಾರ ಜನಪರ ಕಾಳಜಿ ಹೊಂದಿದ್ದ ಅವರು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಹೊಂದಿದ್ದರು ಎಂದು ನೆನಪಿಸಿದರು.
ಕಮರುಲ್ ಇಸ್ಲಾಂ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ನಿರಂತರ ಕಾಳಜಿ ಹೊಂದಿದ್ದರು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ. ಅವರು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು ಮಾತ್ರವಲ್ಲದೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಅವರು ರಂಗಭೂಮಿಯ ಹಿರಿಯ ಜೀವಿ. 430ಕ್ಕೂ ಅಧಿಕ ನಾಟಕ, 123 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಇವರು, ರಂಗಭೂಮಿಗೆ ಅನ್ವರ್ಥ ನಾಮವಾಗಿದ್ದರು. ಹಾಲಿ ವಿಧಾನಮಂಡಲದ ಸದಸ್ಯರಾಗಿದ್ದ ಎಸ್.ಚಿಕ್ಕಮಾದು ಅವರು ಹಿಂದುಳಿದ ಹಾಗೂ ವಾಲ್ಮಿಕಿ ಜನಾಂಗದ ಜನಾನುರಾಗಿ ನಾಯಕರಾಗಿದ್ದರು. ಜನಪರ ಕಾಳಜಿಯುಳ್ಳ, ಮೃದು ಸ್ವಭಾವದ ರಾಜಕಾರಣಿಯಾಗಿದ್ದ ಚಿಕ್ಕಮಾದು ಅವರೊಂದಿಗೆ ಒಂದೇ ಪಕ್ಷದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದನ್ನು ಮುಖ್ಯಮಂತ್ರಿ ಅವರು ಸ್ಮರಿಸಿದರು.
ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಮಾತನಾಡಿ, ಧರ್ಮಸಿಂಗ್ ಅವರು ಅತ್ಯಂತ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ. ಧಾರವಾಡ ಹಾಗೂ ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಶಾಸಕರಾದ ವೈ.ಎಸ್.ವಿ.ದತ್ತಾ, ಪುಟ್ಟಣ್ಣಯ್ಯ, ಸಿದ್ದು ನ್ಯಾಮೆಗೌಡ, ಕೆ.ಶಿವಮೂರ್ತಿ, ಮಂಕಾಳು ವೈದ್ಯ ಮತ್ತಿತರರು ಸಂತಾಪ ಸೂಚನೆ ಮೇಲೆ ಮಾತನಾಡಿದರು.

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *