Breaking News
Home / Breaking News / ಬೆಳಗಾವಿ: ದೊಡ್ಡವಾಡ ಜೋಡಿ ಕೊಲೆ : ಶಿಕ್ಷೆ ಪ್ರಕಟ

ಬೆಳಗಾವಿ: ದೊಡ್ಡವಾಡ ಜೋಡಿ ಕೊಲೆ : ಶಿಕ್ಷೆ ಪ್ರಕಟ

ಬೆಳಗಾವಿ :ಜಮೀನು ವಿವಾದದಿಂದ ದಾಯಾದಿಗಳನ್ನೇ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 2 ಲಕ್ಷ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೈಲಹೊಂಗಲ ತಾಲೂಕು ದೊಡವಾಡ ಗ್ರಾಮದ ಮಹಾದೇವ ಹಾಲನ್ನವರ ಶಿಕ್ಷೆಗೊಳಗಾದ ವ್ಯಕ್ತಿ. ಮಹಾದೇವ ಅವರ ತಂದೆ ಯಲ್ಲಪ್ಪ ಮತ್ತು ಸಹೋದರ ನಡುವೆ ಜಮೀನು ವಿವಾದ ಇತ್ತು. ಈ ವಿವಾದ ಕಾರಣಕ್ಕೆ ಯಲ್ಲಪ್ಪ ಅವರ ಸಹೋದರರಾದ ಅರ್ಜುನ ಹಾಲನ್ನವರ ಮತ್ತು ಸಿದ್ದಪ್ಪ ಹಾಲನ್ನವರ ಎಂಬುವವರನ್ನು ಕೊಲೆ ಮಾಡಲಾಗಿತ್ತು.

ಇದೀಗ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಾಚಾರ್ಯ ಶಿರೋಳ ಅವರು ಮಹಾದೇವ ಹಾಲನ್ನವರ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಬಿ.ಎಸ್. ಕೂಗುನವರ ವಾದ ಮಂಡಿಸಿದ್ದರು.

ಘಟನೆ ಹಿನ್ನೆಲೆ :
ಬೈಲಹೊಂಗಲ ತಾಲೂಕು ದೊಡವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ದೊಡವಾಡ ಗ್ರಾಮದ ಫಿರ್ಯಾದಿ ಮತ್ತು ಆರೋಪಿ ಅಣ್ಣ – ತಮ್ಮಂದಿರು ಮತ್ತು ಅವರ ಮಕ್ಕಳಿದ್ದು , ಎಲ್ಲರೂ ಕೂಡಿ ಇದ್ದ ಸಮಯದಲ್ಲಿ 3 ಎಕರೆ ಜಮೀನು ಖರೀದಿ ತೆಗೆದುಕೊಂಡು ಆರೋಪಿತನ ತಂದೆ ಯಲ್ಲಪ್ಪ ಹಾಲನ್ನವರ ಇವನು ತನ್ನ ಹೆಸರಿನಿಂದ ಮಾಡಿಕೊಂಡಿದ್ದು , ಸದರಿ ಇವನು ತೀರಿಕೊಂಡ ನಂತರ ಅವನ ಮಗ ಆರೋಪಿತನಾದ ಮಹಾದೇವ ಯಲ್ಲಪ್ಪ ಹಾಲನ್ನವರ ಸಾ.ದೊಡವಾಡ , ತಾ : ಬೈಲಹೊಂಗಲ ಇವನು ತನ್ನ ಹೆಸರಿನಿಂದ ಮಾಡಿಕೊಂಡಿದ್ದರಿಂದ ಫಿರ್ಯಾದಿ , ಗಾಯಾಳು & ಮೃತರು ತಮ್ಮ ಹಿಸ್ಸಾಕ್ಕೆ ಬಂದ ಹೊಲವನ್ನು ನಮ್ಮ ಹೆಸರಿನಿಂದ ಮಾಡಿಕೊಡು ಅಂತಾ ಕೇಳಿದ್ದಕ್ಕೆ ಅವರ ಮೇಲೆ ಆರೋಪಿತನು ಸಿಟ್ಟಾಗಿದ್ದು ಮತ್ತು ಆರೋಪಿತನ ತಾಯಿ ರುದ್ದವ್ವ ಯಲ್ಲಪ್ಪ ಹಾಲನ್ನವರ ಅವರ ಹೆಸರಿನಲ್ಲಿರುವ ಜಮೀನ ರಿ.ಸ.ನಂ : 437 ನೇದ್ದರಲ್ಲಿ ಇರುವ ಚಕ್ಕಡಿ ದಾರಿಯಲ್ಲಿ ಫಿರ್ಯಾದಿ ಅರ್ಜುನ ಸಿದ್ಲಿಂಗಪ್ಪಹಾಲನ್ನವರ ಹಾಗೂ ಮೃತ ಸಿದ್ದಪ್ಪ ಸಿದ್ದಿಂಗಪ್ಪ ಹಾಲನ್ನವರ ಮತ್ತು ಗಾಯಾಳು ಪರಮೇಶ್ವರ ಹಾಲನ್ನವರ ಇವರು ತಮ್ಮ ಹೊಲಗಳಿಗೆ ಅಡ್ಡಾಡುವ ಕುರಿತು ತಂಟೆ ತಕರಾರು ಇತ್ತು.

19-09-2013 ರಂದು ಸಂಜೆ 5-30) ಗಂಟೆಗೆ ಫಿರ್ಯಾದಿ ಮತ್ತು ಮೃತ ಅರ್ಜುನ ಹಾಲನ್ನವರ ಮತ್ತು ಮೃತ ಸಿದ್ಧಪ್ಪ ಹಾಲನ್ನವರ ಮತ್ತು ಗಾಯಾಳು ಪರಮೇಶ ಹಾಲನ್ನವರ , ಆರೋಪಿತನ ತಾಯಿ ರುದ್ದವ್ವ ಯಲ್ಲಪ್ಪ ಹಾಲನ್ನವರ ಇವರ ಜಮೀನು ರಿ.ಸ.ನಂ : 437 ನೇದ್ದರಲ್ಲಿರುವ ಚಕ್ಕಡಿ ದಾರಿ ಮೂಲಕ ಚಕ್ಕಡಿಯಲ್ಲಿ ಹೋಗುವಾಗ ಆರೋಪಿತನು ಅವರಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಬಂದು ಅಡ್ಡಗಟ್ಟಿ ತರುಬಿ ನಿಮಗೆ ಚಕ್ಕಡಿ ಹೋಗಲು ದಾರಿ ಕೊಟ್ಟಿರುತ್ತೇನೆ , ನೀವು ಸಿಕ್ಕ ಸಿಕ್ಕಲ್ಲಿ ನಮ್ಮ ಹೊಲದಲ್ಲಿ ಚಕ್ಕಡಿ ದಾಟಿಸಬೇಡರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು , ಕುಡಗೋಲಿನಿಂದ ಪರಮೇಶ ಹಾಲನ್ನವರ ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಟ್ಟೆ ಮೇಲೆ ಹೊಡೆದು ಭಾರಿ ಗಾಯಗೊಳಿಸಿ , ನಂತರ ಮೃತ ಅರ್ಜುನ ಹಾಲನ್ನವರ ಇವನಿಗೆ ಬೆನ್ನಟ್ಟಿದಾಗ ಇವನು ತಪ್ಪಿಸಿಕೊಂಡು ಸಾಕ್ಷಿದಾರ ಮಹಾದೇವ ಸಂಗೊಳ್ಳಿ ಹೊಲದಲ್ಲಿ ಓಡಿ ಹೋಗುವಾಗ ಆರೋಪಿತನು ಬೆನ್ನು ಹತ್ತಿ , ಅದೇ ಕುಡಗೋಲದಿಂದ ಅವನ ತೊಡೆಯ ಮೇಲೆ ಹೊಡೆದು ಭಾರಿ ಗಾಯಪಡಿಸಿ , ಸ್ಥಳದಲ್ಲಿಯೇ ಕೊಲೆ ಮಾಡಿ ನಂತರ ಆರೋಪಿತನು ಜಮೀನು ರಿ.ಸ.ನಂ : 437 ನೇದ್ದರಲ್ಲಿ ನಿಂತಿದ್ದ ಮೃತ ಸಿದ್ದಪ್ಪ ಹಾಲನ್ನವರ ಇವನಿಗೆ ಹೊಡೆದು ಭಾರಿ ಗಾಯಗೊಳಿಸಿದ್ದು , ಸಿದ್ದಪ್ಪ ಹಾಲನ್ನವರ ಇವನಿಗೆ ಉಪಚಾರಕ್ಕೆ ಬೆಳಗಾವಿ ಅವ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು.

ಆದರೆ ಆತ ಉಪಚಾರ ಹೊಂದುವಾಗ ದಿ : 21-09-2013 ರಂದು ಮರಣ ಹೊಂದಿದ. ಆರೋಪಿ ಮಹಾದೇವ ಯಲ್ಲಪ್ಪ ಹಾಲನ್ನವರ ಇವನು ಅವರಿಬ್ಬರನ್ನು ಕೊಲೆ ಮಾಡಿ , ಮೃತರ ಮಗ ಪರಮೇಶಿ ಈತನಿಗೆ ಅದೇ ಕುಡಗೋಲದಿಂದ ಹೊಟ್ಟೆಗೆ ಹೊಡೆದು ಭಾರಿ ಗಾಯಗೊಳಿಗೆ ಮಾಡಲು ಪ್ರಯತ್ನಿಸಿ ಕೊಲೆ ಮಾಡಲು ಉಪಯೋಗಿಸಿದ ಕುಡಗೋಲನ್ನು ಮುಚ್ಚಿಟ್ಟು ಸಾಕ್ಷಿ ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದರಿಂದ ಆರೋಪಿ ವಿರುದ್ಧ ದೊಡವಾಡ ಠಾಣಾ ಗುನ್ನೆ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಹಿಂದಿನ ಸಿಪಿಐ ಎಸ್.ಆರ್.ಕಾಂಬಳೆ ಮತ್ತು ಸಂಗನಗೌಡ ಇವರು ತನಿಖೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು , ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬಿ.ಎಸ್.ಕೂಗುನವರ ಇವರು ಸದರಿ ಪ್ರಕರಣವನ್ನು ನಡೆಸಿ , ವಾದ ಮಂಡನೆ ಮಾಡಿದ್ದರು. ಸದರಿ ಪ್ರಕರಣದ ವಾದ – ವಿವಾದ ಆಲಿಸಿದ ನಂತರ 9 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶ ಗುರುರಾಜ ಗೋಪಾಲಚಾರ್ಯ ಶಿರೋಳ ಅವರ ಆರೋಪಿಯಾದ ಮಹಾದೇವ ಯಲ್ಲಪ್ಪ ಹಾಲನ್ನವರ ಸಾ : ದೊಡವಾಡ , ತಾ : ಬೈಲಹೊಂಗಲ ಜಿ : ಬೆಳಗಾವಿ , ಇವನಿಗೆ ದಿ : 27-04-2023 ರಂದು ಕಲಂ 302 ಐಪಿಸಿ ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ಲಕ್ಷ ರೂಪಾಯಿ ದಂಡ , ಕಲಂ 307 ಐಪಿಸಿ ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡ , ಕಲಂ 201 ಐಪಿಸಿ ಅಡಿ ಅಪರಾಧಕ್ಕೆ ಐದು ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *