Breaking News

ಯಾರ ಹೆದರಿಕೆಗೂ ಮಣಿಯಬೇಡಿ, ನಿಮ್ಮ ಜೊತೆ ನಾನಿದ್ದೇನೆ-ಬಾಲಚಂದ್ರ ಜಾರಕಿಹೊಳಿ.

ಮೂಡಲಗಿ: ಯಾರ ಹೆದರಿಕೆಗೂ ಮಣಿಯಬೇಡಿ, ನಿಮ್ಮ ಜೊತೆ ನಾನಿದ್ದೇನೆ. ಯಾರಾದರೂ ನಿಮಗೆ ಈ ಚುನಾವಣೆಯಲ್ಲಿ ಅಂಜಿಕೆ ಹಾಕಿದರೇ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವಂತೆ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಅಭಯ ನೀಡಿದರು.

ಶುಕ್ರವಾರ ಸಂಜೆ ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಈ ಚುನಾವಣೆಯಲ್ಲಿ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಹೆದರಿಕೆ ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಬೆದರಿಕೆಗೆ ಯಾವ ಕಾಲಕ್ಕೂ ಅಂಜಬೇಡಿ ಎಂದು ತಿಳಿಸಿದರು.

ನಮ್ಮ ಕಾರ್ಯಕರ್ತರಿಗೆ ಇಲ್ಲಿನ ಪ್ರಭಾವಿಯೊಬ್ಬರು ಸುಮ್ಮ-ಸುಮ್ಮನೇ ತೊಂದರೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಹೂಡುತ್ತಿದ್ದಾರೆ. ನಮ್ಮ ಗುಂಪಿನ ವ್ಯಕ್ತಿ-ವ್ಯಕ್ತಿಗಳ ಮಧ್ಯ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೇರ್ಪಡಿಸುವುದೇ ಅವರ ಗುರಿಯಾಗಿದೆ. ಮೊದಲಿನಿಂದಲೂ ನಿಷ್ಠೆಯಿಂದ ಇರುವ ಜನರು ಮುಂದೆಯೂ ಸಹ ನನ್ನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಗೊಡ್ಡ ಬೆದರಿಕೆಗೆ ಅಂಜಬೇಡಿ, ನಿಮ್ಮನ್ನು ಕಾಪಾಡುವುದು ನನ್ನ ಜವಾಬ್ದಾರಿಯಾಗಿದೆ. ಹಣ, ಆಸ್ತಿ ಇಟ್ಟುಕೊಂಡು ಹೆದರಿಸುತ್ತಿರುವವರಿಗೆ ನೀವೇ ಉತ್ತರಿಸಿ, ಚುನಾವಣೆಯ ಬಳಿಕ ಎಲ್ಲ ಉತ್ತರಗಳನ್ನು ನೀಡೋಣ. ಅಲ್ಲಿಯ ವರೆಗೆ ಶಾಂತ ಚಿತ್ತದಿಂದ ಇರೋಣ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಕಲ್ಲೋಳ್ಳಿ ಪಟ್ಟಣ ಪಂಚಾಯತಿ ಚುನಾವಣೆಯ ದ್ವೇಷ ಇಟ್ಟುಕೊಂಡು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೆಲವರು ಹಗೆತನ ಸಾಧಿಸುತ್ತಿದ್ದಾರೆ. ಆ ಚುನಾವಣೆಯಲ್ಲಿ ನನ್ನ ಪಾತ್ರವೇನೂ ಇಲ್ಲ. ಇದಕ್ಕೆಲ್ಲಾ ಅವರೇ ಮೂಲ ಸೂತ್ರಧಾರಿಗಳು. ಆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರಲ್ಲಿಯೇ ವೈಮನಸ್ಸು ಬರುವಂತೆ ಮಾಡಿಕೊಂಡು ನಮ್ಮ ಗುಂಪಿನಿಂದ ಹೊರಗೆ ಬರುವಂತೆ ಮಾಡಿದವರೇ ಅವರು. ಪ್ರವಾಸಿ ಮಂದಿರದಲ್ಲಿ ಸರಣಿ ಸಭೆಗಳನ್ನು ಆಯೋಜಿಸಿ ನಮ್ಮ ವಿರುದ್ಧ ಷಢ್ಯಂತ್ರ ಹೂಡಿದರು. ಆದರೂ ನಮ್ಮ ಕಾರ್ಯಕರ್ತರ ಅದಕ್ಕೆಲ್ಲಾ ಸೊಪ್ಪು ಹಾಕಲಿಲ್ಲ. ಈಗ ಚುನಾವಣೆ ಬಂದಿದ್ದರಿಂದ ಏನೇನೋ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ ಎಂದು ವಿರೋಧಿಗಳ ಹೆಸರನ್ನು ಪ್ರಸ್ತಾಪಿಸದೇ ಕುಟುಕಿದರು.

ಮೇ-10 ರಂದು ನಡೆಯುವ ಚುನಾವಣೆಯಲ್ಲಿ ನಾನು ಮಾಡಿರುವ ಸಾಧನೆಗಳನ್ನು ಗುರುತಿಸಿ ಸಮಗ್ರ ಅಭಿವೃದ್ದಿಗಾಗಿ ಅಶೀರ್ವಾದ ಮಾಡಬೇಕು. 2004ರಿಂದ ಇಲ್ಲಿಯ ತನಕ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಆ ಕಾರ್ಯಗಳು ಸಹ ನಿಮ್ಮ ಮುಂದಿವೆ. ಕೆಲವರು ಬಂದು ಆಶ್ವಾಸನೆಗಳನ್ನು ನೀಡಿ ಹೋಗುತ್ತಾರೆ. ಅಂತವರ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಡಿ.ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಜನಪ್ರೀಯ ಯೋಜನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರದ ಸಾಧನೆಗಳನ್ನು ಮನಗಂಡು ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವದಿಸಬೇಕು. ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಮತ್ತೋಮ್ಮೆ ಜನರ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಮತ್ತಷ್ಟು ರಾಜ್ಯದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳ್ಳುತ್ತವೆ. ಸರ್ವಾಂಗೀಣ ಅಭಿವೃದ್ದಿಯಾಗುತ್ತದೆ. ಬಿಜೆಪಿಯೊಂದೇ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಏಕೈಕ ಪಕ್ಷವಾಗಿದೆ. ಆದ್ದರಿಂದ ಶೇಜ ನಂ 5 ಇದ್ದು ಕಮಲ ಗುರ್ತಿಗೆ ಮತವನ್ನು ಹಾಕಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಮಹಾಂತೇಶ ಕಪ್ಪಲಗುದ್ದಿ, ಅಶೋಕ ಮಕ್ಕಳಗೇರಿ, ವಸಂತ ತಹಶೀಲದಾರ, ಬಸು ಜಗದಾಳ, ಬಸವಂತ ದಾಸನಾಳ, ಬಸವರಾಜ ಯಾದಗೂಡ, ಮಹಾದೇವ ಮಧಬಾವಿ, ದತ್ತು ಕಲಾಲ, ಮಲ್ಲಪ್ಪ ಖಾನಾಪೂರ, ಭಗವಂತ ಪತ್ತಾರ ಅನೇಕ ಮುಖಂಡರು, ಪ.ಪಂ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.