Breaking News
Home / Breaking News / ಕೊನೆಗೂ ಕಾಲ ಕೂಡಿ ಬಂತು, ಬೆಳಗಾವಿ ಪತ್ರಕರ್ತರಿಗೂ “ಭವನ” ಭಾಗ್ಯ,

ಕೊನೆಗೂ ಕಾಲ ಕೂಡಿ ಬಂತು, ಬೆಳಗಾವಿ ಪತ್ರಕರ್ತರಿಗೂ “ಭವನ” ಭಾಗ್ಯ,

ಬೆಳಗಾವಿ: ಬರುವ ಮೇ 2 ರಂದು ಇಲ್ಲಿಯ ವಿಶ್ವೇಶ್ವರಯ್ಯ ನಗರದಲ್ಲಿನ ಸಂಪಿಗೆ ರಸ್ತೆ ಪಕ್ಕದ ಜಾಗೆಯಲ್ಲಿ ಸುಸಜ್ಜಿತ ಪತ್ರಿಕಾ ಭವನದ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

ಇಂದು ಮುಂಜಾನೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ, ಪತ್ರಿಕಾ ಭವನದ ನಿಯೋಜಿತ ಜಾಗದಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದರೂ ಬೆಳಗಾವಿಯಲ್ಲಿ ಪತ್ರಕರ್ತರಿಗಾಗಿ ಇದುವರೆಗೆ ಪತ್ರಿಕಾ ಭವನ ಇಲ್ಲ. ಹಲವಾರು ವರ್ಷಗಳಿಂದ ಹಲವಾರು ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದ್ದು, ಭವನ ನಿರ್ಮಾಣಕ್ಕಾಗಿ ಅತ್ಯಂತ ಸೂಕ್ತ ಜಾಗ ದೊರೆತಿದೆ. ದೊರೆತಿರುವ ಜಾಗದ ಸಮರ್ಪಕ ಬಳಕೆ ಮಾಡಿಕೊಂಡು ರಾಷ್ಟ್ರದಲ್ಲಿಯೇ ಮಾದರಿಯಾದ ಪತ್ರಿಕಾ ಭವನ ನಿರ್ಮಿಸೋಣ. ಅದಕ್ಕಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು” ಎಂದು ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.

ಮೇ 2 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪತ್ರಿಕಾ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಭವನದ ನಿರ್ಮಾಣಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ನೆರವು ಕೇಳಲಾಗುವುದು. ಸುಮಾರು ರೂ 3 ಕೋಟಿ ಅನುದಾನದಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಪತ್ರಿಕಾ ಭವನದಲ್ಲಿ 300 ಆಸನಗಳ ಸಾಮರ್ಥ್ಯದ ಒಂದು ಹಾಲ್, ಮೀಟಿಂಗ್ ರೂಂ, ಪತ್ರಿಕಾಗೋಷ್ಠಿಗಳನ್ನು ನಡೆಸಲು ವ್ಯವಸ್ಥೆ, ರೀಡಿಂಗ್ ರೂಂ, ಡಿಜಿಟಲ್ ಲೈಬ್ರರಿ, ಪತ್ರಕರ್ತರಿಗೆ ಅಲ್ಲಿಂದಲೇ ಸುದ್ದಿ ಮಾಡಲು ವ್ಯವಸ್ಥೆ, ಹೈಸ್ಪೀಡ್ ಇಂಟರನೆಟ್, ಟಿವಿ ಮಾಧ್ಯಮದವರಿಗಾಗಿ ಕನಿಷ್ಟ ಮೂರು ಸ್ಟುಡಿಯೋಗಳು, ಫಿಟನೆಸ್ ಕ್ಲಬ್, ಒಳಾಂಗಣ ಆಟದ ಸ್ಟೇಡಿಯಂ ಸೇರಿದಂತೆ ಹಲವಾರು ಸೌಲಭ್ಯಗಳು ಇರಲಿವೆ. ಒಟ್ಟಿನಲ್ಲಿ ಇದೊಂದು ಸಕಲ ಸೌಲಭ್ಯಗಳುಳ್ಳ ಮಾದರಿ ಪತ್ರಿಕಾ ಭವನ ಆಗಲಿದೆ ಎಂದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ಪತ್ರಿಕಾ ಭವನಕ್ಕೆ ಈಗ ದೊರೆತಿರುವ ಜಾಗ ಗಮನಿಸಿದರೆ ಇಲ್ಲಿಯವರೆಗೆ ತಡವಾಗಿದ್ದೇ ಒಳ್ಳೆಯದಾಯಿತು ಎನಿಸುತ್ತದೆ. ಭವನದ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ರೂ.10 ಲಕ್ಷ ನೆರವು ನೀಡಲಾಗುವುದು. ಕಡಿಮೆ ಎನಿಸಿದರೆ ಇನ್ನೂ ಹೆಚ್ಚಿನ ನೆರವು ನೀಡಲು ತಾವು ಬದ್ಧ ಎಂದು ವಾಗ್ದಾನ ನೀಡಿದರು.

ಸಂಸದೆ ಮಂಗಲಾ ಅಂಗಡಿ ಅವರು, “ಸದರಿ ಜಾಗ ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಉಳಿದುಕೊಂಡಿತ್ತು. ಪತ್ರಿಕಾ ಭವನ ನಿರ್ಮಾಣವಾದರೆ ಜಾಗದ ಸಮರ್ಪಕ ಬಳಕೆ ಆಗಲಿದೆ. ಭವನದ ನಿರ್ಮಾಣಕ್ಕೆ ತಮ್ಮ ಅನುದಾನದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.

ಹಿರಿಯ ಪತ್ರಕರ್ತ ದಿಲೀಪ ಕುರುಂದವಾಡೆ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಪತ್ರಕರ್ತರ ಸಂಘಟನೆಗಳಿದ್ದು, ತಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪತ್ರಿಕಾ ಭವನವು ಎಲ್ಲ ಸಂಘಟನೆಗಳಿಗೆ ಸೇರಿದ್ದಾಗಿದ್ದು, ಎಲ್ಲ ಪತ್ರಕರ್ತರಿಗೆ ಇದರಿಂದ ಅನುಕೂಲವಾಗಲಿದೆ. ಪತ್ರಕರ್ತರು ಭೇದಭಾವ ಮರೆದು ಒಳ್ಳೆಯ ಕೆಲಸಕ್ಕೆ ಒಂದಾಗಬೇಕು ಎಂದರು.

ಹಿರಿಯ ಪತ್ರಕರ್ತ ರಾಜಶೇಖರ ಪಾಟೀಲ ಮತ್ತು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಸಂಜಯ ಡುಮ್ಮಗೋಳ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಹಿರಿಯ ಪತ್ರಕರ್ತ ಮಂಜುನಾಥ ಪಾಟೀಲ ಅವರು ಪತ್ರಿಕಾ ಭವನದ ನಿರ್ಮಾಣಕ್ಕೆ ವೈಯಕ್ತಿಕವಾಗಿ ರೂ.51 ಸಾವಿರ ದೇಣಿಗೆ ಘೋಷಿಸಿದರು. ಮೆಹಬೂಬ್ ಮಕಾಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹದೇವ ಮಾನೆ ಅವರು ಸ್ವಾಗತ ಕೋರಿದರು. ಶ್ರೀಕಾಂತ ಕುಬಕಡ್ಡಿ ವಂದನಾರ್ಪನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀಧರ ಕೋಟಾರಗಸ್ತಿ, ಮಹಾಂತೇಶ ಕುರಬೇಟ, ರಾಜು ಭೋಸಲೆ, ಕುಂತಿನಾಥ ಕಲ್ಮಣಿ, ಅರುಣ ಪಾಟೀಲ, ರವೀಂದ್ರ ಉಪ್ಪಾರ, ನಾಗರಾಜ ತುಪ್ಪದ, ಏಕನಾಥ ಅಗಸಿಮನಿ ಮೊದಲಾದವರು ಉಪಸ್ಥಿತರಿದ್ದರು.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *