ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು?
ಬೆಳಗಾವಿ: ಭೀಕರ ಬರಗಾಲದಿಂದ ರೈತರು ತತ್ತರಿಸುತ್ತಿರುವಾಗಲೇ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅನ್ನದಾತರಿಗೆ ಮಹಾಮೋಸ ಮಾಡಿದ ಆರೋಪ ಕೇಳಿ ಬಂದಿದೆ.
ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಇತ್ತೀಚಿನ ವರ್ಷಗಳಲ್ಲಿ ಅರಿಹಂತ ಇಂಡಸ್ಟ್ರೀಸ್‌ನವರು ಲೀಸ್ ಮೇಲೆ ನಡೆಸುತ್ತಾ ಬಂದಿದ್ದರು. ಆದ್ರೆ ಈಗ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಷೇರುದಾರರಿಗೆ, ಕಾರ್ಮಿಕರಿಗೆ ಹಾಗೂ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡ ರೈತರಿಗೆ ಮಾಹಿತಿಯನ್ನು ನೀಡದೇ ಹರಾಜು ಮಾಡಿದ್ದಾರೆ. ಎನ್‌ಸಿಎಲ್‌ಟಿಯಡಿ ಜಗದೀಶ ಗುಡಗುಂಟಿ ಶುಗರ್ಸ್ ಲಿಮಿಟೆಡ್‌ಗೆ ಕಾರ್ಖಾನೆಯನ್ನು ಹರಾಜು ಮಾಡಿದ್ದು ಷೇರುದಾರರು ಹಾಗೂ ಕಾರ್ಖಾನೆಯ ಕಾರ್ಮಿಕರು ಕಂಗಾಲಾಗಿದ್ದಾರೆ.
75 ಸಾವಿರ ಷೇರುದಾರರ ಸುಮಾರು 37 ಕೋಟಿ ಹಣವನ್ನು ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಮರಳಿ ನೀಡಬೇಕು ಹಾಗೂ 300ಕ್ಕೂ ಹೆಚ್ಚು ಕಾರ್ಮಿಕರಿಗೆ ಮರಳಿ ಕೆಲಸ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ನಿನ್ನೆ ಸಂಜೆ ಬೆಳಗಾವಿ ಡಿಸಿ ಕಚೇರಿಯಲ್ಲಿ ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ, ಡಿಸಿ ಮೊಹಮ್ಮದ್ ರೋಷನ್ ಹಾಗೂ ಎಸ್‌ಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಷೇರುದಾರರು ಸಮಸ್ಯೆ ಹಂಚಿಕೊಂಡರು. ಸಾಲಸೋಲ ಮಾಡಿ ಮಹಿಳೆಯರು ಷೇರು ಖರೀದಿಸಿದ್ದು ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಕಬ್ಬಿನ ಬಾಕಿ ಬಿಲ್ ಇರುವ ರೈತರು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಲು ಆಗಲ್ಲ. ನಾವೇ ಎಲ್ಲಾ ಸಮಸ್ಯೆ ಪರಿಹಾರ ಒದಗಿಸುವ ಕೆಲಸ ಮಾಡ್ತೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದ್ದಾರೆ.